ಬೆಂಗಳೂರು : ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಇ ಡಿ ಮುಂದೆ ವಿಚಾರಣೆಗೆ ಹಾಜರಾದರು.
ಇ ಡಿ ವಿಚಾರಣೆಯನ್ನು ಖಂಡಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ರಾಜಭವನದ ಚಲೋ ನಡೆದ ಸಂದರ್ಭದಲ್ಲಿ ಪಕ್ಷದ ಹಲವಾರು ನಾಯಕರು ಭಾಗಿಯಾಗಿದ್ದರು.ಇ ಡಿ ಪದೇ ಪದೇ ಸೋನಿಯಾ ಗಾಂಧಿ ಅವರು ಕುಟುಂಬವನ್ನು ವಿಚಾರಣೆಗೆ ಕರೆದು ಪದೇ ಪದೇ ಕಿರುಕುಳ ನೀಡುತ್ತಿದೆ. ಸೋನಿಯಾ ಕುಟುಂಬವನ್ನು ರಾಜಕೀಯವಾಗಿ ಕುಗ್ಗಿಸುವ ಕುತಂತ್ರವಿದು ಎಂದು ಕಾಂಗ್ರೆಸ್ ಆರೋಪಿಸಿದೆ.
ಬೆಂಗಳೂರಿನ ಫ್ರೀಡಂ ಪಾರ್ಕ್ ಮುಂದೆ ಬೆಳಿಗ್ಗೆ ೧೧ ಗಂಟೆಗೆ ಜಮಾಯಿಸಿದ ಕಾಂಗ್ರೆಸ್ ನಾಯಕರು, ಮುಖಂಡರು ನಂತರ ರಾಜಭವನದವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ವಿಧನಪರಿಷತ್ತಿನ ವಿರೋಧಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಆರ್.ಧ್ರುವನಾರಾಯಣ್ ರಾಮಲಿಂಗಾರೆಡ್ಡಿ, ಬಿ.ಈಶ್ವರ ಖಂಡ್ರೆ, ಸಲೀಂ ಅಹಮದ್, ಎಂ.ವೀರಪ್ಪಮೊಯಿಲಿ, ಮಾಜಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಎಚ್.ಕೆ.ಪಾಟೀಲ್, ಆರ್.ವಿ.ದೇಶಪಾಂಡೆ, ಕೃಷ್ಣ ಭೈರೇಗೌಡ, ಉಮಾಶ್ರೀ, ವಿ.ಎಸ್.ಉಗ್ರಪ್ಪ, ಕೆ.ಆರ್.ರಮೇಶ್ಕುಮಾರ್ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.
ಬಿಗಿ ಪೊಲೀಸ್ ಬಂದೋಬಸ್ತ್: ಫ್ರೀಡಂ ಪಾರ್ಕ್ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಭದ್ರತೆ ನೇತೃತ್ವವನ್ನು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರ್ಗಿ ಅವರಿಗೆ ವಹಿಸಲಾಗಿದ್ದು, ೫ ಎಸಿಪಿ, ೧೫ ಇನ್ಸ್ಪೆಕ್ಟರ್, ೩೦ ಪಿಎಸ್ಐ, ೬೦೦ ಮಂದಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಅದಾಗ್ಯೂ ಹೆಚ್ಚುವರಿಯಾಗಿ ೫ ಕೆಎಸ್ಆರ್ಪಿ ತುಕಡಿಗಳನ್ನು ನಿಯೋಜಿಸಲಾಗಿತ್ತು.
ಈ ಬಗ್ಗೆ ಟ್ವೀಟ್ ಮಾಡಿರುವ ಮಾಡಿರುವ ಸಿದ್ದರಾಮಯ್ಯ ಅವರು ಸತ್ಯ ಮತ್ತು ಪ್ರಜಾಪ್ರಭುತ್ವ ಇವೆರಡರದ್ದು ಒಂದೇ ಹಾದಿ. ನ್ಯಾಯ ವಿರೋಧಿ ಎಂದಿಗೂ ಪ್ರಜಾಪ್ರಭುತ್ವವಾದಿ ಆಗಲಾರ. ಪ್ರಭುತ್ವದ ಬಳಿ ಅಧಿಕಾರದ ಬಲವಿದ್ದರೆ,
ಸತ್ಯ-ನ್ಯಾಯದ ಪರವಾದ ನಮ್ಮ ಧ್ವನಿಗೆ ಜೊತೆಯಾಗಲು ಸಹಸ್ರ ಸಂಖ್ಯೆಯಲ್ಲಿ ಆಗಮಿಸಿರುವ ಜನರ ಬಲವಿದೆ.ಅಂತಿಮ ಗೆಲುವು ಅಧಿಕಾರ ಬಲದ್ದೋ, ಜನಬಲದ್ದೋ ಕಾಲವೇ ನಿರ್ಧರಿಸಲಿದೆ ಎಂದು ಬಿಜೆಪಿಗೆ ಸವಾಲು ಹಾಕಿದ್ದಾರೆ.