ಬೆಂಗಳೂರು : ಶುದ್ಧ ಆಡಳಿತವನ್ನ ನೀಡಲು ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು ಈ ರೀತಿ ರೈಡ್ ಗಳು ಆಗುತ್ತದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.
ಇಂದು ಬೆಳಗ್ಗೆ ನಡೆದಿರುವ ಎಸಿಬಿ ದಾಳಿ ಮತ್ತು ಅಗ್ನಿಪಥ ಯೋಜನೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು ಇಂದು ಬೆಳಗ್ಗೆ 21 ಅಧಿಕಾರಿಗಳ 80 ನಿವಾಸ ಮತ್ತು ಬೇರೆ ಬೇರೆ ಕಡೆ ದಾಳಿಯಾಗಿದೆ. 350 ಕ್ಕೂ ಹೆಚ್ಚು ಸಿಬ್ಬಂದಿ ದಾಳಿಯಲ್ಲಿ ಭಾಗಿಯಾಗಿದ್ದಾರೆ. ಒಟ್ಟಾರೆ ಒಂದು ಸಾರಿ ದಾಳಿ ಆದ ಮೇಲೆ ಎಲ್ಲ ಆಸ್ತಿಗಳಿಗೆ ದಾಖಲೆ ಕೊಡಬೇಕಾಗುತ್ತದೆ. ಅವರ ಹಣ ಮತ್ತು ಅಸ್ತಿ ಎಲ್ಲಿಂದ ಬಂತು ಅಂತ ಸಾಬೀತು ಮಾಡಬೇಕಾಗುತ್ತದೆ. ಅದಕ್ಕೆ ಸ್ವಲ್ಪ ಕಾಲಾವಕಾಶ ಬೇಕು ಎಂದರು.
ಎಸಿಬಿ ದಾಳಿಗೆ ಒಳಗಾಗಿರುವ ಅಧಿಕಾರಿಗಳಿಗೆ ನ್ಯಾಯಲಯಕ್ಕೆ ಹೋಗಲು ಅವಕಾಶ ಇದೆ. ಹೀಗಾಗಿ ಪ್ರಕರಣಗಳು ವರ್ಷಾನುಗಟ್ಟಲೇ ನಡೆಯುತ್ತವೆ. ಆದ್ರೆ ಚುರುಕು ಮುಟ್ಟಿಸುವ ಕೆಲಸ ಎಸಿಬಿಯಿಂದ ಆಗುತ್ತದೆ ಎಂದು ಹೇಳಿದರು.
ಅಗ್ನಿಪಥ್ ಗೆ ವಿರೋಧ ಪಕ್ಷಗಳ ವಿರೋಧ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಭವಿಷ್ಯದಲ್ಲಿ ಎನು ಆಗುತ್ತೆ ಅಂತ ಇವತ್ತು ಬೆಂಕಿ ಹಚ್ಚುವ ಕೆಲಸ ಆಗಬಾರದು. ಈ ದೇಶದಲ್ಲಿ ಕೆಲವೊಂದು ವರ್ಗಗಳು ಯಾವ ಪರಿವರ್ತನೆ ಮಾಡಲು ಬಿಡುತ್ತಿಲ್ಲ ಎಂದು ಕಿಡಿ ಕಾರಿದರು.
ನಾಲ್ಕು ವರ್ಷ ತರಬೇತಿ ಜೊತೆ ಒಂದಷ್ಟು ಸೌಲಭ್ಯ
ಅಗ್ನಿಪಥ್ ತುಂಬಾ ಒಳ್ಳೆ ಯೋಜನೆ ಆಗಿದೆ. ಇಸ್ರೇಲ್ ಅಂತ ದೇಶಗಳಲ್ಲಿ ಯುವಕರು ಕಡ್ಡಾಯವಾಗಿ ಮಿಲಿಟರಿ ತರಬೇತಿ ಪಡೆದಿರಬೇಕು. ನಮ್ಮ ದೇಶದಲ್ಲಿ ನಾಲ್ಕು ವರ್ಷ ತರಬೇತಿ ಜೊತೆ ಒಂದಷ್ಟು ಸೌಲಭ್ಯ ಕೊಡಲಾಗುತ್ತದೆ. ಇದರಿಂದ ಶೇ 25 ರಷ್ಟು ಜನರನ್ನ ಸೇನೆಗೆ ಮತ್ತು ಪೊಲೀಸ್ ಇಲಾಖೆಗೆ ಸೇರಿಸಿಕೊಳ್ಳಲಾಗುತ್ತದೆ.
ಇವತ್ತು ನಿರುದ್ಯೋಗ ತಾಂಡವ ಆಡುತ್ತಿದೆ. ಲಕ್ಷಗಟ್ಟಲೇ ಯುವಕರಿಗೆ ಉದ್ಯೋಗ ಸಿಗುತ್ತದೆ. ಮುಂದಿನ ಭವಿಷ್ಯ ಇವತ್ತೆ ಹೇಳೋಕೆ ಆಗುತ್ತಾ? ಯಾವ ಆಧಾರದ ಮೇಲೆ ಪ್ರತಿಭಟನೆ ಮಾಡುತ್ತಿದ್ದಾರೆ. ಯಾವ ವರ್ಗ ಈ ಕೆಲಸ ಮಾಡ್ತಾ ಇದೆ ಅದರ ಮೇಲೆ ಕೇಂದ್ರ ಸರ್ಕಾರ ಕಣ್ಣಿಟ್ಟಿದೆ.
ಕೇಂದ್ರ ಸರ್ಕಾರ ಯಾರನ್ನೂ ನಿರುದ್ಯೋಗಿ ಆಗಿರಲು ಇಷ್ಟ ಪಡಲ್ಲ. ಇದರ ಹಿಂದೆ ಯಾವ ಶಕ್ತಿ ಇದೆ ಅಂತ ನೋಡುತ್ತಿದ್ದೇವೆ. ಕೇಂದ್ರ ಸರ್ಕಾರದ ಮೇಲೆ ವ್ಯವಸ್ಥಿತವಾದ ಪಿತೂರಿ ನಡೆಯುತ್ತಿದ್ದು, ಮಾಸ್ಕ್ ಹಾಕಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಹೇಳಿದರು.