ಮಂಡ್ಯ : ಪಾಕಿಸ್ತಾನದ ಜತೆ ಮಾತುಕತೆ ನಡೆಸುವ ನಾವು ತಮಿಳುನಾಡಿನ ಜತೆ ಏಕೆ ಮಾತನಾಡಲು ಸಾಧ್ಯವಿಲ್ಲ ಎಂದು ಸಂಸದೆ ಸುಮಲತಾ ಪ್ರಶ್ನಿಸಿದರು.
ತಮಿಳುನಾಡಿಗೆ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ದೆಹಲಿಯಿಂದ ಮಂಡ್ಯ ನಗರಕ್ಕೆ ಆಗಮಿಸಿದ ಸುಮಲತಾ, ತಮ್ಮ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ. ಕುಮಾರ, ನೀರಾವರಿ ಇಲಾಖೆ ಸೂಪರಿಟೆಂಡೆಂಟ್ ಇಂಜಿನಿಯರ್ ರಘುರಾಮನ್ ಜತೆ ಗೌಪ್ಯ ಚರ್ಚೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಾವೇರಿ ನದಿ ನೀರು ವಿಚಾರದಲ್ಲಿ ರಾಜಕೀಯ ಬಹಳ ನಡೆಯುತ್ತಿದೆ. ಎಲ್ಲರೂ ಪಕ್ಷಭೇದ ಮರೆತು ಕುಳಿತು ಮಾತುಕತೆ ನಡೆಸಬೇಕು. ಪರಸ್ಪರ ರಾಜ್ಯಗಳು ಕುಳಿತು ಸೌಹಾರ್ದತೆ ಬಳಸಿಕೊಂಡು ಮಾತುಕತೆ ನಡೆಸಿ, ಇಲ್ಲಿನ ಪರಿಸ್ಥಿತಿ ತಿಳಿಸಬೇಕು. ನೀರು ಕೊಡಲು ಆಗಲ್ಲ ಎಂಬುದಲ್ಲ ವಾದ, ನಮ್ಮ ಪರಿಸ್ಥಿತಿ ಏನಿದೆ ಎಂದು ನೋಡಿ ಎಂದು ತಿಳಿಸಬೇಕು. ನಮ್ಮಲ್ಲೂ ತಮಿಳಿಗರು ಇದ್ದಾರೆ ಎಂದರು.
ಮೊದಲು ಧ್ವನಿ ಎತ್ತಿದ್ದು ನಾನು : ಅಧಿವೇಶನದಲ್ಲಿ ಮಾತನಾಡಲು ಅವಕಾಶ ಕೇಳಿದ್ದೇನೆ. ಮೊದಲು ಧ್ವನಿ ಎತ್ತಿದ್ದು ನಾನು. ಕಾವೇರಿ ವಿಚಾರವಾಗಿ ನ್ಯಾಯ ಸಿಗದಿದ್ದಾಗ ಅಂಬರೀಶ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಂದಿದ್ದಾರೆ, ಮುಂದೆ ನಾನು ಏನು ಮಾಡಬೇಕು ಎಂದು ಯೋಚನೆ ಮಾಡುತ್ತೇನೆ. ರೈತರು, ಜನರು ಏನು ಹೇಳುತ್ತಾರೋ ಅದನ್ನು ನಾನು ಕೇಳುತ್ತೇನೆ ಎಂದರು.
ನೀರು ಬಿಡಿ, ಬಿಡಬೇಡಿ ಎಂದು ಕೇಂದ್ರ ಸರ್ಕಾರ ಹೇಳಿಲ್ಲ. ಪ್ರಾಧಿಕಾರ ಹಾಗೂ ಕೋರ್ಟ್ ಹೇಳಿರುವುದು. ನಮ್ಮಲ್ಲಿ ಏನು ಎಫರ್ಟ್ ಹಾಕಬೇಕೋ ಅದನ್ನ ಮಾಡುತ್ತೇನೆ. ಸಿಬ್ಲ್ಯೂಎಂಸಿ ಅಧಿಕಾರಗಳನ್ನು ಭೇಟಿ ಮಾಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರೈತರಿಗೆ ನಷ್ಟ ಭರಿಸಲಿ : ಮಳೆ ಬಾರದೇ ಇದ್ದರೆ ಕುಡಿಯುವ ನೀರಿಗೆ ಏನು ಮಾಡಬೇಕು ಎಂಬುದು ಗೊತ್ತಿಲ್ಲ. ಸರ್ಕಾರದ ಪರ ನಿಲ್ಲಲು ನಾನು ಸಿದ್ಧನಿದ್ದೇನೆ. ನಾನು ಸಂಸದಳಾಗಿ ಏನು ಮಾಡಬೇಕೋ ಅದನ್ನು ಮಾಡುತ್ತಿದ್ದೇನೆ. ಜಿಲ್ಲೆಯ ಎಲ್ಲ ಏಳು ತಾಲ್ಲೂಕಿನಲ್ಲೂ ತೀವ್ರ ಬರ ಇದ್ದು, ರೈತರಿಗೆ ಆಗಿರುವ ನಷ್ಟವನ್ನು ಸರ್ಕಾರ ಭರಿಸಬೇಕು ಎಂದು ಆಗ್ರಹಿಸಿದರು.