ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಪಂಚರತ್ನ ಯಾತ್ರೆ ವೇಳೆ ಮಹಿಳಾ ಅಭಿಮಾನಿಯೊಬ್ಬರು ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾಸ್ವಾಮಿ ಅವರಿಗೆ ಮುತ್ತುಕೊಟ್ಟಿದ್ದಾರೆ. ಸದ್ಯ ಈ ವಿಡಿಯೋ, ಪೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ರಾಜ್ಯಾದ್ಯಂತ ಜೆಡಿಎಸ್ ಪಂಚರತ್ನ ಯಾತ್ರೆ ನಡೆಯುತ್ತಿದ್ದು, ಪಂಚರತ್ನ ಯಾತ್ರೆ ಹೋದಕಡೆಯಲೆಲ್ಲ ಅದ್ದೂರಿ ಸ್ವಾಗತ ಸಿಕ್ಕಿದೆ. ಕುಮಾರಸ್ವಾಮಿ ನೋಡಲು ಅಭಿಮಾನಿಗಳು, ಬೆಂಬಲಿಗರು ಮುಗಿಬೀಳುತ್ತಿದ್ದಾರೆ. ನೆಚ್ಚಿನ ನಾಯಕನ ಜೊತೆ ಫೋಟೋ, ಸೆಲ್ಫಿ ಕ್ಲಿಕ್ಕಿಸಿಕೊಂಡು ಅಭಿಮಾನಿಗಳು ಖುಷಿ ಪಡುತ್ತಾರೆ. ಸದ್ಯ ಮಹಿಳಾ ಅಭಿಮಾನಿಯೊಬ್ಬರು ಮುತ್ತು ಕೊಟ್ಟಿರುವ ಪ್ರಸಂಗ ನಡೆದಿದೆ.
ಶನಿವಾರ ಬೆಂಗಳೂರಿನ ಯಶವಂತಪುರದಲ್ಲಿ ಪಂಚರತ್ನ ಯಾತ್ರೆ ವೇಳೆ ಕುಮಾರಸ್ವಾಮಿಗೆ ಮಹಿಳಾ ಅಭಿಮಾನಿಯೊಬ್ಬಳು ಮುತ್ತು ಕೊಟ್ಟರು. ಏಕಾಏಕಿ ಪಂಚರತ್ನ ಯಾತ್ರೆ ವಾಹನದ ಮೇಲೆ ಮಹಿಳೆ ಏರಿದ ಮಹಿಳೆ ಕುಮಾರಸ್ವಾಮಿ ಅವರ ಪಕ್ಕದಲ್ಲಿ ನಿಂತು ಪೋಟೊ ತೆಗೆಸಿಕೊಂಡರು. ಬಳಿಕ ಕುಮಾರಸ್ವಾಮಿ ಅವರ ಕೈಕುಲುವ ನೆಪದಲ್ಲಿ ಕೆನ್ನೆಗೆ ಮುತ್ತಿಟ್ಟಿದ್ದಾರೆ. ಪಕ್ಕದಲ್ಲಿದ್ದ ಜೆಡಿಎಸ್ ಮುಖಂಡರು ಗಾಬರಿಗೊಂಡರು.
ಈ ಹಿಂದೆಯೋ ಘಟನೆ ನಡೆದಿತ್ತು : ಮಂಡ್ಯದಲ್ಲಿ ಅಭಿಮಾನಿಯೊಬ್ಬ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಗಟ್ಟಿಯಾಗಿ ತಬ್ಬಿಕೊಂಡು ಮುತ್ತು ಕೊಟ್ಟ ಪ್ರಸಂಗ 2019ರಲ್ಲಿ ನಡೆದಿತ್ತು. ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ರೋಡ್ ಶೋ ಮುಗಿಸಿ ಕಾರು ಹತ್ತುತ್ತಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಹಿಂಬಾಲಿಸಿ ಬಂದ ಅಭಿಮಾನಿಯೊಬ್ಬ ಕುಮಾರಸ್ವಾಮಿ ಅವರನ್ನು ಎಳೆದು ಮುತ್ತು ಕೊಟ್ಟಿದ್ದರು ತಕ್ಷಣ ಬೆಂಬಲಿಗರು ಹಾಗೂ ಭದ್ರತಾ ಸಿಬ್ಬಂದಿ ಅಭಿಮಾನಿಯನ್ನು ಹಿಡಿದು ಥಳಿಸಿದ್ದರು.
ಸಿದ್ದರಾಮಯ್ಯಗೆ ಮುತ್ತಿಟ್ಟಿದ್ದ ಮಹಿಳೆ : 2016ರಲ್ಲಿ ಸಿದ್ದರಾಮಯ್ಯ ಅವರ ಕೆನ್ನೆಗೆ ಬಹಿರಂಗ ಸಮಾರಭಂದಲ್ಲಿ ಮಹಿಳೆಯೊಬ್ಬಳು ಮುತ್ತಿಟ್ಟಿದ್ದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಕುರುಬ ಸಮಾಜದ ಜನಪ್ರತಿನಿಧಿಗಳಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು. ಈ ವೇಳೆ ವೇದಿಕೆಗೆ ಬಂದ ತರೀಕೆರೆ ತಾಲೂಕು ಪಂಚಾಯಿತಿ ಸದಸ್ಯೆ ಗಿರಿಜಾ ಶ್ರೀನಿವಾಸ್ ಮೊದಲು ಫೋಟೋಗೆ ಪೋಸ್ ನೀಡಿ ನಂತರ ಸಿದ್ದರಾಮಯ್ಯ ಅವರ ಕೆನ್ನೆಗೆ ಮುತ್ತಿಟ್ಟಿದ್ದರು. ನಾನು ಚಿಕ್ಕಂದಿನಿಂದಲೂ ಸಿದ್ದರಾಮಯ್ಯ ಅವರ ಅಭಿಮಾನಿಯಾಗಿದ್ದು, ಅವರೇ ನನ್ನ ರಾಜಕೀಯಕ್ಕೆ ಸ್ಪೂರ್ತಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ಅವರನ್ನು ನೋಡಿದ ಖುಷಿಗೆ ತಾವು ಅವರಿಗೆ ಮುತ್ತು ನೀಡಿದ್ದಾಗಿ ಅವರು ಹೇಳಿದ್ದರು. ಏಳು ವರ್ಷ ಕಳೆದರೂ ಇಂದಿಗೂ ಸಾಮಾಜಿಕ ಜಾಲತಾಣದಲ್ಲಿ ಸಿದ್ದರಾಮಯ್ಯ ಅವರಿಗೆ ಮಹಿಳೆ ಮುತ್ತಿಟ್ಟ ವಿಡಿಯೋಗಳು ಹರಿದಾಡುತ್ತಿವೆ.