ಬೆಂಗಳೂರು : ಆರೋಗ್ಯ ಕವಚ ತುರ್ತು ಆ್ಯಂಬುಲೆನ್ಸ್ ಸೇವೆಯನ್ನು ಸುಧಾರಿಸಲು ಮುಂದಾಗಿರುವ ರಾಜ್ಯ ಸರ್ಕಾರ ಇದಕ್ಕಾಗಿ ತಜ್ಞರನ್ನೊಳಗೊಂಡ ತಾಂತ್ರಿಕ ಸಮಿತಿಯನ್ನು ರಚನೆ ಮಾಡಿದೆ.
ಈ ಹಿಂದಿನಿಂದಲೂ ಆರೋಗ್ಯ ಕವಚ ಯೋಜನೆಯ ಗುತ್ತಿಗೆ ಪಡೆಯುತ್ತಿದ್ದ ಜಿವಿಕೆ ಸಂಸ್ಥೆಯ ಒಪ್ಪಂದಕ್ಕೆ ಸರ್ಕಾರ ಇತಿಶ್ರೀ ಹಾಡಿದ್ದು, ಲೋಪದೋಷಗಳನ್ನು ಸರಿಪಡಿಸಿ ಜನಸ್ನೇಹಿಯಾದ ವ್ಯವಸ್ಥೆ ರೂಪಿಸಲು ಮುಂದಾಗಿದೆ.
ಈ ನಿಟ್ಟಿನಲ್ಲಿ ನಿಮಾನ್ಸ್ ನ ಪ್ರಭಾರ ನಿರ್ದೇಶಕರಾದ ಡಾ.ಜಿ.ಗುರುರಾಜ್ ಅವರನ್ನೊಳಗೊಂಡಂತೆ ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರು, ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ ಮಾಜಿ ಕುಲಪತಿಗಳು, ಕಾರ್ಮಿಕ ಇಲಾಖೆ ಆಯುಕ್ತರು ಒಳಗೊಂಡ ತಾಂತ್ರಿಕ ಸಮಿತಿಯನ್ನು ರಚಿಸಿದೆ.
ಈ ಸಮಿತಿ ಟೆಂಡರ್ ಹಾಗೂ ಸೇವಾದಾರರ ಆಯ್ಕೆ ಸಂಬಂಧ ಮಾರ್ಗದರ್ಶನ ನೀಡಲಿದೆ. ಟೆಂಡರ್ ಪ್ರಕ್ರಿಯೆ ಖರೀದಿಯ ವಿಧಾನದಲ್ಲಿ ಸಾಕಷ್ಟು ಆರೋಪಗಳು ಕೇಳಿಬಂದಿದ್ದವು. ತಾಂತ್ರಿಕ ದೋಷ ಪರಿಶೀಲಿಸಿ ಉತ್ತಮ ಸೇವೆ ನೀಡಲು ಅಗತ್ಯ ಕ್ರಮ ಕೈಗೊಳ್ಳುವ ಸಂಬಂಧ ತಾಂತ್ರಿಕ ಸಮಿತಿ ಒಂದು ತಿಂಗಳಲ್ಲಿ ವರದಿ ನೀಡಲಿದೆ.
ತುರ್ತು ಆ್ಯಂಬುಲೆನ್ಸ್ನಲ್ಲಿ ಇರಬೇಕಾದ ಸೌಲಭ್ಯಗಳನ್ನು ಉನ್ನತೀಕರಿಸಲು ಚರ್ಚೆಗಳು ನಡೆಯುತ್ತಿವೆ. ಆರೋಗ್ಯ ಕವಚ ಗುತ್ತಿಗೆಗಾಗಿ ಮೂರು ತಿಂಗಳ ಹಿಂದೆ ಟೆಂಡರ್ ಕರೆಯಲಾಗಿತ್ತು. ಜಿವಿಕೆ ಸಂಸ್ಥೆ ಈವರೆಗೂ ನಿರ್ವಹಿಸಿದ ಸೇವೆಯ ಬಗ್ಗೆ ಸಾಕಷ್ಟು ದೂರುಗಳು ಹಾಗೂ ಆರೋಪಗಳು ಕೇಳಿಬಂದಿವೆ.
ಹೊಸದಾಗಿ ಕರೆಯಲಾಗಿರುವ ಟೆಂಡರ್ ನಲ್ಲೂ ಜಿವಿಕೆ ಸಂಸ್ಥೆ ಪಾಲ್ಗೊಂಡಿತ್ತು. ಈ ಹಿನ್ನಲೆಯಲ್ಲಿ ಸರ್ಕಾರ ಗುತ್ತಿಗೆಯನ್ನೇ ರದ್ದುಪಡಿಸಿದ್ದು, ಹೊಸ ಮಾರ್ಗಸೂಚಿಗಳ ರಚನೆಗೆ ಮುಂದಾಗಿದೆ. ಜೊತೆಯಲ್ಲಿ 104 ಆರೋಗ್ಯ ಸಹಾಯವಾಣಿಯನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳುತ್ತಿದೆ.