ಬೆಂಗಳೂರು : ಬಿಜೆಪಿ ತೊರೆಯಲಿದ್ದಾರೆ ಎಂಬ ವದಂತಿ ಕೇಳಿ ಬಂದಿರುವ ಹಿನ್ನಲೆಯಲ್ಲಿ ಶಾಸಕರಾದ ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಸೇರಿದಂತೆ ಅಸಮಾಧಾನಿತರನ್ನು ಮನವೊಲಿಸುವ ಹೊಣೆಗಾರಿಕೆಯನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ನೀಡಲಾಗಿದೆ.
ಎಸ್.ಟಿ.ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ಸೇರಿದಂತೆ ಮತ್ತಿತರ ಜೊತೆ ಸಂಪರ್ಕ ಸಾಧಿಸಿ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಕೊನೆ ಕ್ಷಣದವರೆಗೂ ಮನವೊಲಿಸಬೇಕೆಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಬೊಮ್ಮಾಯಿಗೆ ಸೂಚನೆ ಕೊಟ್ಟಿದ್ದಾರೆ.
ಬೇರೆ ಬೇರೆ ಕಾರಣಗಳಿಂದ ಅಸಮಾಧಾನಗೊಂಡಿದ್ದರೂ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಿಜೆಪಿಯಲ್ಲೇ ಉಳಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಪಕ್ಷ ಬಿಟ್ಟು ಹೋಗದಂತೆ ಮನವೊಲಿಕೆ ಮಾಡಿ ಶಾಸಕರು ಪಕ್ಷ ತೊರೆದರೆ ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆಯಾಗಬಹುದೆಂಬ ಆತಂಕವನ್ನು ಬಿಎಸ್ವೈ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆ ಚುನಾವಣೆ ಸೋಲಿನ ಬಗ್ಗೆ ಈಗ ಆತ್ಮಾವಲೋಕನ ಮಾಡಿಕೊಂಡು ಉಪಯೋಗವಿಲ್ಲ. ಇದು ಮುಗಿದ ಅಧ್ಯಾಯ. ನಮಗೆ ಮುಂದಿರುವ ಸವಾಲು ಎಂದರೆ ಲೋಕಸಭೆ ಚುನಾವಣೆ. ಗೆದ್ದಿರುವ 25 ಕ್ಷೇತ್ರಗಳ ಪೈಕಿ ಕನಿಷ್ಟ 20 ಕ್ಷೇತ್ರಗಳನ್ನು ಗೆಲ್ಲಬೇಕು. ಹೀಗಾಗಿ ಅಸಮಾಧಾನಿತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಬೊಮ್ಮಾಯಿಗೆ ತಾಕೀತು ಮಾಡಿದ್ದಾರೆ.
ಯಡಿಯೂರಪ್ಪ ಸೂಚನೆ ಮೇರೆಗೆ ಈಗಾಗಲೇ ಅಖಾಡಕ್ಕಿಳಿದಿರುವ ಬೊಮ್ಮಾಯಿ ಎಸ್.ಟಿ.ಸೋಮಶೇಖರ್ ಮತ್ತು ಹೆಬ್ಬಾರ್ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ ಎಂದು ಗೊತ್ತಾಗಿದೆ.
ಕ್ಷೇತ್ರದಲ್ಲಿ ಅಸಮಾಧಾನವಿದ್ದರೆ ಸರಿಪಡಿಸುವ ಕೆಲಸ ಮಾಡಲಾಗುತ್ತದೆ. ಪಕ್ಷವು ನಿಮ್ಮನ್ನು ಗೌರವಾಧರಗಳಿಂದ ನಡೆಸಿಕೊಂಡಿದೆ. ಸಚಿವ ಸ್ಥಾನ ಸೇರಿದಂತೆ ಎಲ್ಲವೂ ಕೊಟ್ಟಿದೆ. ಸ್ಥಳೀಯ ನಾಯಕರ ಅಸಹಕಾರದ ಬಗ್ಗೆ ರಾಜ್ಯಾಧ್ಯಕ್ಷರು ಹಾಗೂ ನಾನು ಒಗ್ಗೂಡಿ ಪರಿಹರಿಸುತ್ತೇವೆ ಎಂದು ಬೊಮ್ಮಾಯಿ ಮನವರಿಕೆ ಮಾಡಿದ್ದಾರೆ.
ರಾಜ್ಯಾಧ್ಯಕ್ಷರ ಗಮನಕ್ಕೆ : ಪ್ರಸ್ತುತ ಬಿಜೆಪಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಪಕ್ಷದ ರಾಜ್ಯಾಧ್ಯಕ್ಷ ನಳೀನ್ಕುಮಾರ್ ಕಟೀಲ್ ಗಮನಕ್ಕೆ ಬೊಮ್ಮಾಯಿ ತಂದಿದ್ದಾರೆ ಎನ್ನಲಾಗಿದೆ.
ಎಸ್.ಟಿ.ಸೋಮಶೇಖರ್ ಮತ್ತು ಹೆಬ್ಬಾರ್ ಅವರನ್ನು ಎಲ್ಲ ಹಂತದಲ್ಲೂ ಮನವೊಲಿಸುವ ಪ್ರಯತ್ನ ಮಾಡಲಾಗುತ್ತದೆ. ನಾನು ಇಬ್ಬರ ಜೊತೆಯೂ ಮಾತುಕತೆ ನಡೆಸಿದ್ದೇನೆ. ಪಕ್ಷ ಬಿಡುವುದಿಲ್ಲ ಎಂದು ಹೇಳಿದ್ದಾರೆ. ಆದರೆ ರಾಜಕಾರಣದಲ್ಲಿ ಯಾವುದನ್ನೂ ಅಸಾಧ್ಯ ಎನ್ನುತ್ತೇವೋ ಅದು ಸಾಧ್ಯವಾಗಿರುವ ನಿದರ್ಶನಗಳು ನಡೆದಿರುವುದು ನಮ್ಮ ಕಣ್ಮುಂದೆ ಇದೆ. ಹಾಗಾಗಿ ನೀವೊಂದು ಬಾರಿ ಮಾತುಕತೆ ನಡೆಸಬೇಕೆಂದು ಬೊಮ್ಮಾಯಿ ಹೇಳಿರುವುದಾಗಿ ತಿಳಿದುಬಂದಿದೆ. ಇದೇ ಸಂದರ್ಭದಲ್ಲಿ ಪ್ರಸಕ್ತ ವಿದ್ಯಾಮಾನಗಳನ್ನು ದೆಹಲಿ ವರಿಷ್ಠರಿಗೂ ತಿಳಿಸಲು ರಾಜ್ಯ ಬಿಜೆಪಿ ಘಟಕ ಮುಂದಾಗಿದೆ.