ಗೊಂಬೆ ಹೇಳುತೈತೆ.. ನೀನೇ ರಾಜಕುಮಾರ…

ಮೈಸೂರು: ಅಗಲಿದ ಹೆಸರಾಂತ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಮೈಸೂರಿನ ಶಕ್ತಿಧಾಮದಲ್ಲಿ ಭಾವ ಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮಹಿಳೆಯರು ಮತ್ತು ಮಕ್ಕಳು ಪವರ್‌ಸ್ಟಾರ್ ನಿಧನಕ್ಕೆ ಕಂಬನಿ ಮಿಡಿದರು.

ಶಕ್ತಿಧಾಮ ಮಹಿಳೆಯರ ಪುನರ್ವಸತಿ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಹೆಣ್ಣು ಮಕ್ಕಳು ನಟ ಪುನೀತ್ ಅವರ ನಿಧನಕ್ಕೆ ಭಾವ ಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಗೊಂಬೆ ಹೇಳುತೈತೆ..ಮತ್ತೆ ಹೇಳುತೈತೆ ನೀನೇ ರಾಜಕುಮಾರ ಎಂದು ಸಾಮೂಹಿಕವಾಗಿ ಹಾಡು ಹೇಳಿ ಮಕ್ಕಳು ಹೃದಯಸ್ಪರ್ಶಿ ಶ್ರದ್ಧಾಂಜಲಿ ಅರ್ಪಿಸಿದರು.

ನಿರ್ಮಾಪಕಿ ದಿವಂಗತ ಡಾ.ಪಾರ್ವತಮ್ಮ ರಾಜ್ ಕುಮಾರ್ ಅವರು ಶಕ್ತಿಧಾಮದ ಸ್ಥಾಪಕ ಅಧ್ಯಕ್ಷರಾಗಿದ್ದು, ತಾಯಿಯ ಆಶಯದಂತೆ ನಟ ಪುನೀತ್ ಶಕ್ತಿಧಾಮಕ್ಕೆ ತಮ್ಮ ಸೇವೆಯನ್ನು ಮುಂದುವರಿಸಿದ್ದರು.
ನಟ ಪುನೀತ್ ಅಗಲಿಕೆಯಿಂದ ಭಾವುಕರಾಗಿ ಮಾತನಾಡಿದ ಶಕ್ತಿಧಾಮದ ಸಂಚಾಲಕ ಜಿ.ಎಸ್ ಜಯದೇವ್, ಪುನೀತ್ ರಾಜ್ ಕುಮಾರ್ ಶಕ್ತಿಧಾಮಕ್ಕೆ ಬೆನ್ನೆಲುಬುದಾಗಿದ್ದರು ಎಂದು ನುಡಿದರು.

ಕಳೆದ ವರ್ಷ ಕನ್ನಡದ ಕೋಟ್ಯಾಧಿಪತಿಯಿಂದ ತಮಗೆ ಬಂದಿದ್ದ ೧೮ ಲಕ್ಷ ರೂ. ಸಂಭಾವನೆಯನ್ನು ಶಕ್ತಿಧಾಮಕ್ಕೆ ನೀಡಿದ್ದರು. ಪ್ರತೀ ವರ್ಷ ಮಕ್ಕಳಿಗೆ ಪುಸ್ತಕ ಹಾಗೂ ಇತರ ಅಗತ್ಯತೆಗಳನ್ನು ಪೂರೈಸುತ್ತಾ ಬಂದಿದ್ದರು. ಶಕ್ತಿಧಾಮಕ್ಕೆ ಸೇರಿದ ಮೂರು ಎಕರೆ ಪ್ರದೇಶದಲ್ಲಿ ಹೆಣ್ಣು ಮಕ್ಕಳಿಗಾಗಿ ದೊಡ್ಡ ಶಿಕ್ಷಣ ಸಂಸ್ಥೆ ಆರಂಭಿಸಲು ಯೋಚಿಸಿದ್ದರು.

ಶಕ್ತಿಧಾಮಕ್ಕೆ ಬಂದು ಮಕ್ಕಳ ಜೊತೆ ಊಟ ಮಾಡುವುದು ಅವರಿಗೆ ಬಲು ಇಷ್ಟ. ಮಕ್ಕಳಿಗೆ ಒಳ್ಳೆಯ ಕಡೆ ಊಟ ತರಿಸಿ ಅವರೂ ಊಟ ಮಾಡುತ್ತಿದ್ದರು. ಪುನೀತ್‌ರ ಅಗಲಿಕೆ ಶಕ್ತಿಧಾಮ ಹಾಗೂ ಇೀ ಕನ್ನಡ ನಾಡಿಗೆ ತುಂಬಲಾರದ ನಷ್ಟ ಎಂದು ಜಯದೇವ್ ಸ್ಮರಿಸಿದರು.

× Chat with us