ಕಲಬುರಗಿ : ‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಮೆಗಾ ಜವಳಿ ಪಾರ್ಕ್ಗೆ ಚಾಲನೆ ನೀಡುವ ಮೂಲಕ 12ನೇ ಶತಮಾನದಲ್ಲಿ ಕಾಯಕ ಜೀವನ ಬೋಧಿಸಿದ್ದ ವಚನಾದಿ ಶರಣರ ನಾಡಿನ ಜನರಿಗೆ ಕಾಯಕ ಕೊಡುವಂತಹ ಕೆಲಸ ಮಾಡಿದ್ದೇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಲ್ಲಿನ ಹೈದರಾಬಾದ್ ಶಿಕ್ಷಣ ಸಂಸ್ಥೆಯ(ಎಚ್ಕೆಇ) ಪಿಡಿಎ ಎಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಮೆಗಾ ಟೆಕ್ಸ್ಟೈಲ್ ಪಾರ್ಕ್ಗೆ ಚಾಲನೆ ನೀಡಿ ಹಾಗೂ ಉದ್ಯಮಿ ಸಂಸ್ಥೆಗಳೊಂದಿಗೆ ಹೂಡಿಕೆಯ ಒಡಂಬಡಿಕೆ ಮಾಡಿಕೊಂಡು ಅವರು ಮಾತನಾಡಿದರು.
‘ಈ ಭಾಗದ ಸಾಕಷ್ಟು ಜನರು ಜೀವನೋಪಾಯಕ್ಕಾಗಿ ದೂರದ ಮುಂಬೈ, ಬೆಂಗಳೂರಿಗೆ ವಲಸೆ ಹೋಗುತ್ತಿದ್ದಾರೆ. ಅಲ್ಲಿನ ದೊಡ್ಡ ದೊಡ್ಡ ಕಟ್ಟಡಗಳಲ್ಲಿ ದುಡಿಯುತ್ತ ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಬದುಕನ್ನು ಅರಸಿ ವಲಸೆ ಹೋಗುವುದನ್ನು ನಿಲ್ಲಿಸುವುದೇ ಬಹು ದೊಡ್ಡ ಕೆಲಸ. ಹೀಗಾಗಿ, ಬಹುಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಸುವಂತಹ ಟೆಕ್ಸ್ಟೈಲ್ ಪಾರ್ಕ್ ನಿರ್ಮಾಣಕ್ಕೆ ಮುಂದಾಗಿದ್ದೇವೆ’ ಎಂದರು.
‘ಬಹಳ ದಿನಗಳ ಬಳಿಕ ಕಲಬರಗಿಯ ಆರ್ಥಿಕತೆಯನ್ನು ಎತ್ತಿ ಹಿಡಿಯುವಂತಹ ಕೆಲಸ ನಡೆದಿದೆ. ಮುಂದಿನ ದಿನಗಳಲ್ಲಿ ಟೆಕ್ಸ್ಟೈಲ್ ಪಾರ್ಕ್ ಜಿಲ್ಲೆಯ ಚಿತ್ರಣ ಮತ್ತು ಲಕ್ಷಾಂತರ ಜನರ ಬದುಕನ್ನು ಬದಲಿಸಲಿದೆ’ ಎಂದು ಅಭಿಪ್ರಾಯಪಟ್ಟರು.
‘ಜನಸಾಮಾನ್ಯರಿಂದ ಉತ್ಪಾದನೆ ಆಗುವ ಏಕೈಕ ವಲಯವೆಂದರೆ ಜವಳಿ ಉದ್ಯಮ. ಸಮೂಹ ಉತ್ಪಾದನೆ ಮತ್ತು ಸಮೂಹ ಉದ್ಯೋಗ ಸೃಷ್ಟಿ ಇಲ್ಲದೆ ದೇಶದ ಆರ್ಥಿಕತೆಯನ್ನು ಸದೃಢವಾಗಿ ಕಟ್ಟಲು ಸಾಧ್ಯವಿಲ್ಲ. ಈ ದೃಷ್ಟಿಯಲ್ಲಿ ಜವಳಿ ಉದ್ಯಮವು ಆರ್ಥಿಕತೆಯ ಪ್ರಮುಖ ಅಂಗ’ ಎಂದು ಹೇಳಿದರು.
‘ವಿದೇಶ ನೇರ ಬಂಡವಾಳ ಹೂಡಿಕೆಯಲ್ಲಿ ದೇಶದಲ್ಲೇ ಕರ್ನಾಟಕ ಅಗ್ರ ಸ್ಥಾನ ಪಡೆದಿದೆ. ಉದ್ಯೋಗ ನೀತಿಯನ್ನು ಅನುಷ್ಠಾನಕ್ಕೆ ತಂದ ಮೊದಲ ರಾಜ್ಯವೂ ಕರ್ನಾಟಕವಾಗಿದೆ. ಉದ್ಯೋಗ ಸೃಷ್ಟಿ ಮತ್ತು ಉದ್ದಿಮೆಗಳ ಅನುಕೂಲಕ್ಕಾಗಿ ಜವಳಿ ನೀತಿ, ಕಾರ್ಮಿಕ ನೀತಿ, ಕಾರ್ಮಿಕರಿಗೆ ₹3,000 ಉತ್ತೇಜನ, ವಿಶೇಷ ನೀತಿಯಡಿ ವಿದ್ಯುತ್ ದರದಲ್ಲಿ ರಿಯಾಯಿತಿ ಕೊಡುತ್ತಿದ್ದೇವೆ. ಉದ್ಯಮಿಗಳಿಗೆ ಇನ್ನೇನು ಬೇಕು’ ಎಂದು ಪ್ರಶ್ನಿಸಿದರು.
ರಾಜ್ಯ ಕೈಮಗ್ಗ ಮತ್ತು ಜವಳಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ‘ಮುಖ್ಯಮಂತ್ರಿಗಳು ಚುನಾವಣೆ ದೃಷ್ಟಿ ಇರಿಸಿಕೊಂಡು ಜವಳಿ ಪಾರ್ಕ್ ಯೋಜನೆ ತಂದಿಲ್ಲ. ಕಲ್ಯಾಣ ಕರ್ನಾಟಕ ಭಾಗದ ಆರ್ಥಿಕತೆ ಮತ್ತು ರೈತರಿಗೆ ಶಕ್ತಿ ತುಂಬಲು ಹಾಗೂ ಭವಿಷ್ಯದ ನೆಲೆಗಟ್ಟನ್ನು ಇರಿಸಿಕೊಂಡು ಈ ಯೋಜನೆ ತಂದಿದ್ದಾರೆ. ರಾಜ್ಯದಲ್ಲಿ ಎಲ್ಲಿ ನಿರ್ಮಿಸಬೇಕು ಎಂಬ ಪ್ರಶ್ನೆ ಬಂದಾಗ, ಅಳೆದು ತೂಗಿ ಈ ಭಾಗದ ಕಲ್ಯಾಣಕ್ಕಾಗಿ ಸಮರ್ಪಿಸಲಾಗಿದೆ’ ಎಂದರು.
ಕಾರ್ಯಕ್ರಮದಲ್ಲಿ ಕೇಂದ್ರ ರೈಲ್ವೆ ಮತ್ತು ಜವಳಿ ಖಾತೆಯ ರಾಜ್ಯ ಸಚಿವೆ ದರ್ಶನ ವಿ. ಜರ್ದೋಶ್, ಕೇಂದ್ರದ ರಾಜ್ಯ ಸಚಿವ ಭಗವಂತ ಖೂಬಾ, ಕೆಕೆಆರ್ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಸಂಸದ ಡಾ. ಉಮೇಶ ಜಾಧವ, ಶಾಸಕರಾದ ಸುಭಾಷ ಆರ್. ಗುತ್ತೇದಾರ, ಬಸವರಾಜ ಮತ್ತಿಮಡು, ವಿಧಾನ ಪರಿಷತ್ ಸದಸ್ಯರಾದ ಸುನಿಲ್ ವಲ್ಲ್ಯಾಪುರೆ, ಬಿ.ಜಿ. ಪಾಟೀಲ, ಶಶೀಲ್ ಜಿ.ನಮೋಶಿ, ಮೇಯರ್ ವಿಶಾಲ ದರ್ಗಿ, ಕೇಂದ್ರ ಸರ್ಕಾರದ ಜವಳಿ ಮಂತ್ರಾಲಯದ ಕಾರ್ಯದರ್ಶಿ ರಚನಾ ಷಾ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ಜವಳಿ ಅಭಿವೃದ್ಧಿ ಅಧಿಕಾರಿ ಟಿ.ಎಚ್.ಕುಮಾರ್, ಜಿಲ್ಲಾಧಿಕಾರಿ ಯಶವಂತ ಗುರುಕರ್, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ, ನಗರ ಪೊಲೀಸ್ ಕಮಿಷನರ್ ಚೇತನ್ ಆರ್., ಎಸ್.ಪಿ. ಇಶಾ ಪಂತ್, ಡಿ.ಸಿ.ಪಿ ಅಡ್ಡೂರು ಶ್ರೀನಿವಾಸಲು ಇದ್ದರು.
₹1,900 ಕೋಟಿ ಹೂಡಿಕೆ ಒಡಂಬಡಿಕೆ : ಕಲ್ಯಾಣ ಕರ್ನಾಟಕ ಭಾಗದ ಮಹತ್ವಾಕಾಂಕ್ಷಿ ಯೋಜನೆಯಾದ ಮೆಗಾ ಟೆಕ್ಸ್ಟೈಲ್ ಪಾರ್ಕ್ಗೆ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಚಾಲನೆ ನೀಡಿದ್ದು, ಒಂಬತ್ತು ಸಂಸ್ಥೆಗಳು ₹1,900 ಕೋಟಿ ಹೂಡಿಕೆ ಒಡಂಬಡಿಕೆಗೆ ಸಹಿ ಹಾಕಿದವು.
ಶಾಹಿ ಎಕ್ಸ್ಪೋರ್ಟ್ಸ್ ಮತ್ತು ಹಿಮತ್ಸಿಂಕಾ ಸೀಡೆ ಲಿಮಿಟೆಡ್ ತಲಾ ₹ 500 ಕೋಟಿ, ಟೆಕ್ಸ್ಪೋರ್ಟ್ ಇಂಡಸ್ಟ್ರೀಸ್, ಕೆಪಿಆರ್ ಮಿಲ್ಸ್ ಲಿಮಿಟೆಡ್ ಮತ್ತು ಪ್ರತಿಭಾ ಸಿಂಟೆಕ್ಸ್ ತಲಾ ₹200 ಕೋಟಿ, ಗೋಕುಲದಾಸ್ ಎಕ್ಸ್ಪೋರ್ಟ್ಸ್ ಲಿಮಿಟೆಡ್ ಮತ್ತು ಇಂಡಿಯನ್ ಡಿಸೈನ್ಸ್ ತಲಾ ₹100 ಕೋಟಿ, ಸೂರ್ಯವಂಶಿ ಪ್ರೈವೇಟ್ ಲಿಮಿಟೆಡ್ ಮತ್ತು ಸೋನಾಲ್ ಅಪರೆಲ್ ಪ್ರೈವೇಟ್ ಲಿಮಿಟೆಡ್ ತಲಾ ₹50 ಕೋಟಿ ಬಂಡವಾಳ ಹೂಡುವುದಾಗಿ ಘೋಷಿಸಿದವು.
ಕೇಂದ್ರ ರೈಲ್ವೆ ಮತ್ತು ಜವಳಿ ಖಾತೆಯ ರಾಜ್ಯ ಸಚಿವೆ ದರ್ಶನ ವಿ. ಜರ್ದೋಶ್ ಮಾತನಾಡಿ, ‘ಟೆಕ್ಸ್ಟೈಲ್ ಪಾರ್ಕ್ ಸ್ಥಾಪನೆಗಾಗಿ 12 ರಾಜ್ಯಗಳಿಂದ ಅರ್ಜಿ ಬಂದಿದ್ದವು. ಪಿಎಂ ಗತಿ ಶಕ್ತಿ ರಾಷ್ಟ್ರೀಯ ಯೋಜನೆಯನ್ನು ಗಮನದಲ್ಲಿ ಇರಿಸಿಕೊಂಡು 7 ಪಾರ್ಕ್ಗಳಿಗೆ ಮಂಜೂರಾತಿ ನೀಡಲಾಗಿದೆ’ ಎಂದರು.
‘ಜಾಗತಿಕ ಮಾರುಕಟ್ಟೆಯಲ್ಲಿ ಎಂಎಂಎಫ್(ಮಾನವ ನಿರ್ಮಿತ ಫೈಬರ್) ಉಡುಪು, ತಾಂತ್ರಿಕ ಜವಳಿ ಉತ್ಪನ್ನಗಳ ಬಳಕೆ ಹೆಚ್ಚಾಗಲಿದೆ. ಕರ್ನಾಟಕವು ಸಿದ್ಧ ಉಡುಪು, ರೇಷ್ಮೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಅದರಲ್ಲಿ ಮುಖ್ಯವಾಗಿ ರೇಷ್ಮೆ ರಫ್ತಿನಲ್ಲಿ ಜಪಾನ್ ಬಳಿಕ ಭಾರತ ಎರಡನೇ ರಫ್ತು ರಾಷ್ಟ್ರವಾಗಲಿದೆ. ಈ ಬಗ್ಗೆ ತರಬೇತಿ, ಬೆಂಬಲದ ಅವಶ್ಯಕತೆ ಇದೆ’ ಎಂದರು.
‘ಸ್ಥಳೀಯ ಉದ್ದಿಮೆಗಳು ಹೂಡಿಕೆ ಮಾಡಲಿ’
‘ಮುಖ್ಯಮಂತ್ರಿಗಳು ಮೂಲತಃ ಎಂಜಿನಿಯರ್ ಆಗಿದ್ದು ನಿರುದ್ಯೋಗಿಗಳಿಗೆ ಕೆಲಸ ಕೊಡುವಂತ ದೃಷ್ಟಿಯಿಂದ ಇಂತಹ ಬೃಹತ್ ಯೋಜನೆ ಕೈಗೆತ್ತಿಕೊಂಡಿದ್ದಾರೆ. ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಆದ್ಯತೆ ನೀಡಿದ್ದ. 18 ದಿನದಲ್ಲಿ 58 ಬಾರಿ ಭೇಟಿ ನೀಡಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಹೇಳಿದರು.
‘ಇವತ್ತು ಹೊರಗಿನ ಉದ್ದಿಮೆಗಳು ಒಡಂಬಡಿಕೆಗೆ ಸಹಿ ಹಾಕುತ್ತಿದ್ದಾರೆ. ಮುಂದಿನ ಬಾರಿ ಕಲಬುರಗಿಯ ಉದ್ದಿಮೆಗಳು ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡಬೇಕು. ಬೇರೆಯವರ ಹೂಡಿಕೆಗೆ ಚಪ್ಪಾಳೆ ತಟ್ಟುತ್ತಿದ್ದರೆ ಅಕ್ಕಪಕ್ಕದವರು ಬಂದು ಲಾಭ ಪಡೆಯುತ್ತಾರೆ. ನೀವು ಕೆಲಸಗಾರರಾಗಿ ದುಡಿಯಬೇಕಾಗುತ್ತದೆ. ರಾಜ್ಯ ಸರ್ಕಾರ ಶೇ 50ರಷ್ಟು ಉದ್ಯಮಿಗಳಿಗೆ ಸಬ್ಸಿಡಿ ನೀಡುತ್ತಿದೆ. ಸ್ಥಳೀಯರೇ ಉದ್ಯಮ ಸ್ಥಾಪಿಸಿ ಇಲ್ಲಿನವರಿಗೆ ಉದ್ಯೋಗ ನೀಡಲು ಮುಂದಾಗಬೇಕು’ ಎಂದರು.