ಚಾಮರಾಜನಗರ: ತಾಲೂಕಿನ ಕೆ.ಮೂಕಳ್ಳಿ ಬಳಿಯ ಭೋಗಪುರದ ಹೊರವಲಯದಲ್ಲಿ ಗುರುವಾರ ಮಧ್ಯಾಹ್ನ ವಾಯುಪಡೆಯ ಸೂರ್ಯಕಿರಣ್ ಲಘು ವಿಮಾನ ಪತನಗೊಂಡು ಹೊತ್ತಿ ಉರಿಯಲು ತಾಂತ್ರಿಕ ದೋಷವೇ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನ ಹೆಚ್ಎಎಲ್ ವಿಮಾನ ನಿಲ್ದಾಣದಿಂದ ಹೊರಟಿದ್ದ ಸೂರ್ಯಕಿರಣ ಲಘು ವಿಮಾನ ಹಾರಾಟ ನಡೆಸುತ್ತಿದ್ದಾಗಲೇ ಬೆಂಕಿ ಹೊತ್ತಿಕೊಂಡು ಭೋಗಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಪ್ಪಯ್ಯನಪುರದಲ್ಲಿ ಪತನಗೊಂಡಿದೆ.
ವಿಮಾನದಲ್ಲಿದ್ದ ವಿಂಗ್ ಕಮಾಂಡರ್ ತೇಜ್ ಪಾಲ್ (50) ಮತ್ತು ತರಬೇತಿ ಪಡೆಯುತ್ತಿದ್ದ ಪೈಲಟ್ ಭೂಮಿಕಾ (28) ಅವರು ವಿಮಾನ ನಿಯಂತ್ರಣ ತಪ್ಪುತ್ತಲೇ ಪ್ಯಾರಚೂಟ್ ಮೂಲಕ ಸುರಕ್ಷಿತವಾಗಿ ಕೆಳಕ್ಕೆ ಇಳಿದಿದ್ದಾರೆ. ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ವಾಯುಪಡೆಯ ಹೆಲಿಕಾಪ್ಟರ್ಗಳು ತಕ್ಷಣವೇ ಆಗಮಿಸಿ ಇಬ್ಬರನ್ನೂ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ದಿವೆ.
‘ತರಬೇತಿ ಹಾರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ವಿಮಾನ ಅಪಘಾತಕ್ಕೀಡಾಗಿದ್ದು, ಇಬ್ಬರೂ ಸಿಬ್ಬಂದಿ ಸುರಕ್ಷಿತವಾಗಿ ಇಳಿದಿದ್ದಾರೆ. ಪತನದ ಕಾರಣವನ್ನು ಪತ್ತೆ ಮಾಡುವುದಕ್ಕಾಗಿ ತನಿಖೆಗೆ ಆದೇಶಿಸಲಾಗಿದೆ’ ಎಂದು ಭಾರತೀಯ ವಾಯುಸೇನೆ ಟ್ವೀಟ್ ಮಾಡಿದೆ.
A Kiran trainer aircraft of the IAF crashed near Chamrajnagar, Karnataka today, while on a routine training sortie. Both aircrew ejected safely. A Court of Inquiry has been ordered to ascertain the cause of the accident.
— Indian Air Force (@IAF_MCC) June 1, 2023
ವಿಂಗ್ ಕಮಾಂಡರ್ ತೇಜ್ಪಾಲ್ ತರಬೇತುದಾರರಾಗಿದ್ದು, ಭೂಮಿಕಾ ತರಬೇತಿ ಪಡೆಯುತ್ತಿದ್ದ ಮಹಿಳಾ ಪೈಲಟ್. ಮಧ್ಯಾಹ್ನ 12:20ರ ವೇಳೆಗೆ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಇದರಿಂದಾಗಿ ಬೆಂಕಿ ಹೊತ್ತಿಕೊಂಡು ವಿಮಾನ ಪತನಗೊಂಡಿದೆ. ವಿಷಯ ತಿಳಿಯುತ್ತಿದ್ದಂತೆ ತಕ್ಷಣವೇ ಬಂದು ಬೆಂಕಿ ನಂದಿಸುವ ಕೆಲಸ ಮಾಡಿದೆವು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ ಹಾಗೂ ಅಗ್ನಿಶಾಮಕ ದಳ ಮುಖ್ಯ ಅಧಿಕಾರಿ ಜಯರಾಮ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಏರ್ಮಾರ್ಷಲ್ ಅಧಿಕಾರಿಗಳು, ಸ್ಥಳೀಯ ಪೊಲೀಸರಿಂದ ಮಾಹಿತಿ ಪಡೆದುಕೊಂಡರು. ಲಘು ವಿಮಾನ ದುರಂತ ನಡೆದ ಸ್ಥಳಕ್ಕೂ ಪೈಲಟ್ ಬಿದ್ದಿದ್ದ ಸ್ಥಳಕ್ಕೂ 2 ಕಿಮೀ ಅಂತರವಿತ್ತು ಎಂದು ಹೇಳಿದ್ದಾರೆ, ಈ ಬಗ್ಗೆ ತನಿಖೆ ಮುಂದುವರಿದೆ.
ಅಗಸದಲ್ಲೇ ಸ್ಫೋಟ
‘ಆಗಸದಲ್ಲಿ ಸ್ಫೋಟದ ಶಬ್ದ ಕೇಳಿತು. ವಿಮಾನ ಎರಡು ಸುತ್ತು ತಿರುಗಿತು. ಅಷ್ಟರಲ್ಲಿ ಇಬ್ಬರು ಪ್ಯಾರಚೂಟ್ ಮೂಲಕ ಕೆಳಕ್ಕೆ ಇಳಿಯುವುದು ಕಾಣಿಸಿತು. ಸ್ವಲ್ಪ ದೂರದಲ್ಲಿ ವಿಮಾನ ಉರಿಯುತ್ತ ಕೆಳಗಡೆ ಬಿತ್ತು. ಸ್ಥಳಕ್ಕೆ ಬಂದು ನೋಡಿದಾಗ ವಿಮಾನದ ಭಾಗಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಜನರು ಯಾರೂ ಇರಲಿಲ್ಲ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದೆವು’ ಎಂದು ಪ್ರತ್ಯಕ್ಷದರ್ಶಿ ಭೋಗಾಪುರದ ಮಹೇಶ್ ತಿಳಿಸಿದ್ದಾರೆ.
ಪೈಲಟ್ ಗಳು ಸುರಕ್ಷಿತ
‘ವಿಮಾನ ಬಿದ್ದ ಸ್ಥಳದಿಂದ 500 ಮೀಟರ್ ದೂರದಲ್ಲಿ ಪೈಲಟ್ ಗಳಿಬ್ಬರೂ ಪ್ಯಾರಚೂಟ್ ಮೂಲಕ ಇಳಿದಿದ್ದರು. ಇಬ್ಬರಿಗೂ ಹೆಚ್ಚು ಗಾಯಗಳಾಗಿರಲಿಲ್ಲ. ಹಿರಿಯ ಪೈಲಟ್ ಅವರ ತುಟಿ ಒಡೆದಿತ್ತು. ಆಸ್ಪತ್ರೆಗೆ ಹೋಗೋಣವೇ ಎಂದು ಕೇಳಿದೆವು. ‘ಅವರು ಬೇಡ, ನಮ್ಮ ರಕ್ಷಣಾ ತಂಡ ಬರಲಿದೆ’ ಎಂದು ಹೇಳಿದರು. ಹತ್ತುನಿಮಿಷಗಳ ಬಳಿಕ ಬೆಂಗಳೂರಿನಿಂದ ವಾಯುಸೇನೆಯ ಮೂರು ಹೆಲಿಕಾಪ್ಟರ್ಗಳು ಬಂದು ಇಬ್ಬರನ್ನೂ ಕರೆದೊಯ್ದವು’ ಎಂದು ಭೋಗಾಪುರ ಗ್ರಾಪಂ ಸದಸ್ಯ ಸೋಮಶೇಖರ್ ಕೆಲ್ಲಂಬಳ್ಳಿ ಅವರು ಮಾಹಿತಿ ನೀಡಿದ್ದಾರೆ.
ಅಗ್ನಿಶಾಮಕದಳ, ಪೊಲೀಸರ ದೌಡು
ವಿಷಯ ಗೊತ್ತಾಗುತ್ತಲೇ ಪೊಲೀಸರು, ಅಗ್ನಿಶಾಮಕ ದಳದ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರು. ಹೊತ್ತಿ ಉರಿಯುತ್ತಿದ್ದ ವಿಮಾನದ ಅವಶೇಷಗಳಿಗೆ ನೀರು ಎರಚಿ ಬೆಂಕಿ ನಂದಿಸಿದರು. ವಾಯುಸೇನೆಯ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ಪರಿಶೀಲಿಸಿದರು. ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದರು. ಮಾಧ್ಯಮಗಳೊಂದಿಗೆ ಮಾತನಾಡಲು ನಿರಾಕರಿಸಿದರು.
ಅಪಘಾತ ಸ್ಥಳಕ್ಕೆ ಜನಸಾಗರ
ಭೋಗಾಪುರ ಮತ್ತು ಸಪ್ಪಯ್ಯನಪುರ ಜನವಸತಿ ಪ್ರದೇಶಗಳ ನಡುವೆ ಇರುವ ಖಾಲಿ ಜಮೀನಿನಲ್ಲಿ ವಿಮಾನ ಪತನಗೊಂಡ ಕಾರಣ ಯಾವುದೇ ಅನಾಹುತ ಸಂಭವಿಸಲಿಲ್ಲ. ವಿಮಾನ ಬಿದ್ದಿರುವ ವಿಷಯ ತಿಳಿಯುತ್ತಲೇ ಎರಡು ಊರುಗಳಲ್ಲದೆ, ಚಾಮರಾಜನಗರ ಸೇರಿದಂತೆ ಸುತ್ತಮುತ್ತಲಿನ ಊರುಗಳ ಜನರು ಭಾರಿ ಸಂಖ್ಯೆಯಲ್ಲಿ ಸೇರಿದ್ದರು. ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.