ಬೆಂಗಳೂರು: ಕೊನದಾಸಪುರದಲ್ಲಿ ಬಿಡಿಎಯಿಂದ ಫ್ಲಾಟ್ ನಿರ್ಮಾಣದಲ್ಲಿ ಅಕ್ರಮ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧದ ತನಿಖೆಗೆ ಸುಪ್ರೀಂಕೋರ್ಟ್ ಮಧ್ಯಂತರ ತಡೆ ನೀಡಿದೆ .ಯಡಿಯೂರಪ್ಪ ಜನಪ್ರತಿನಿಧಿಯಾಗಿರುವ ಹಿನ್ನೆಲೆಯಲ್ಲಿ ತನಿಖೆಗೆ ತಡೆ ನೀಡಲಾಗಿದೆ. ರಾಜ್ಯಪಾಲರ ಪೂರ್ವಾನುಮತಿ ಅಗತ್ಯ ಎಂದು ವಾದಿಸಿದ ಬಿಎಸ್ ವೈ ಪರ ವಕೀಲರು ಇಂದು ಸುಪ್ರೀಂಕೋರ್ಟ್ ನಲ್ಲಿ ವಾದಿಸಿದ್ದು, ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ತನಿಖೆಗೆ ತಡೆ ಆದೇಶ ನೀಡಿದೆ. ‘ತಮ್ಮ ವಿರುದ್ಧದ ಭ್ರಷ್ಟಾಚಾರ ಆರೋಪದ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯಪಾಲರ ಪೂರ್ವಾನುಮತಿ ಇರಲಿಲ್ಲ. ಹಾಗಿದ್ದರೂ ತನಿಖೆ ನಡೆಸುವಂತೆ ಕರ್ನಾಟಕ ಹೈಕೋರ್ಟ್ ಆದೇಶ ಮಾಡಿದೆ. ಇದಕ್ಕೆ ತಡೆ ನೀಡಬೇಕು ಎಂದು ಯಡಿಯೂರಪ್ಪ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.
ಸಚಿವ ಎಸ್ ಟಿ ಸೋಮಶೇಖರ್ ಬಿಡಿಎ ಅಧ್ಯಕ್ಷ ಆಗಿದ್ದ ವೇಳೆ ನಡೆದಿದೆ ಎನ್ನಲಾದ ಅಕ್ರಮ ಪ್ರಕರಣದಲ್ಲಿ ಬಿಎಸ್ ವೈ ಪುತ್ರ ವಿಜಯೇಂದ್ರ ಕೂಡ ಆರೋಪಿ ಆಗಿದ್ದಾರೆ. ಒಟ್ಟು ಒಂಭತ್ತು ಮಂದಿ ವಿರುದ್ಧ ತನಿಖೆಗೆ ಹೈಕೋರ್ಟ್ ಆದೇಶ ನೀಡಿತ್ತು.
ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದ ಸುಪ್ರೀಂಕೋರ್ಟ್ 4 ವಾರಗಳ ಒಳಗೆ ಉತ್ತರಿಸುವಂತೆ ಸೂಚನೆ ನೀಡಿದೆ. ಅದೇ ವೇಳೆ ವಿಜಯೇಂದ್ರ ಸೇರಿ ಉಳಿದವರ ವಿರುದ್ಧ ತನಿಖೆ ಮುಂದುವರಿಯಲಿದೆ.
ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದ ಪ್ರಕರಣದಲ್ಲಿ ಹೈಕೋರ್ಟ್ ಸೂಚನೆ ಮೇರೆಗೆ ಲೋಕಾಯುಕ್ತಕ್ಕೆ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಸೂಚಿಸಲಾಗಿತ್ತು.