ಮಂಡ್ಯ: ಕಬ್ಬಿನ ಗದ್ದೆಗೆ ಬಿದ್ದ ಬೆಂಕಿ ನಂದಿಸಲು ಮುಂದಾದ ರೈತರೊಬ್ಬರು ಬೆಂಕಿಯ ಕೆನ್ನಾಲಗೆಗೆ ಸಿಲುಕಿ ಸುಟ್ಟು ಕರಕಲಾದ ಘಟನೆ ತಾಲ್ಲೂಕಿನ ಮೊಡಚಾಕನಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ. ಘಟನೆಯಲ್ಲಿ ಐವರು ರೈತರು ಸುಮಾರು 20 ಎಕರೆಯಲ್ಲಿ ಬೆಳೆದಿದ್ದ ಕಬ್ಬು, ಬಾಳೆ, ತೆಂಗು ಸುಟ್ಟು ಹೋಗಿದೆ.
ಭಾನುವಾರ ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಮಹಾಲಿಂಗಯ್ಯ (60) ಅವರ ಕಬ್ಬಿನ ಗದ್ದೆಯಲ್ಲಿ ಬೆಂಕಿ ಕಾಣಿಸಿಕೊಂಡಿತು. ಕೆಲವೇ ನಿಮಿಷಗಳಲ್ಲಿ ಬೆಂಕಿ ಅಕ್ಕಪಕ್ಕದ ಗದ್ದೆಗಳಿಗೂ ವ್ಯಾಪಿಸಿತು. ಬೆಂಕಿ ನಂದಿಸಲು ಯತ್ನಿಸುತ್ತಿದ್ದ ಮಹಾಲಿಂಗಯ್ಯ ಅವರು ಕಾಲು ಜಾರಿ ಬಿದ್ದರು. ಹರಡುತ್ತಿದ್ದ ಬೆಂಕಿಯ ಜ್ವಾಲೆಯಲ್ಲಿ ಸಿಲುಕಿದ ಅವರು ಹೊರಗೆ ಬರಲಾಗದೆ ಸುಟ್ಟು ಕರಕಲಾದರು.
ದಟ್ಟ ಹೊಗೆ ವ್ಯಾಪಿಸಿದ್ದನ್ನು ಕಂಡು ಗ್ರಾಮಸ್ಥರು ಸ್ಥಳಕ್ಕೆ ತೆರಳುವಷ್ಟರಲ್ಲಿ ಮಹಾಲಿಂಗಯ್ಯ ಸುಟ್ಟು ಕರಕಲಾಗಿದ್ದರು. ಘಟನೆಯಲ್ಲಿ ಒಟ್ಟು ಐವರು ರೈತರ ಕಬ್ಬಿನ ಬೆಳೆ ಸುಟ್ಟು ಕರಕಲಾಗಿದೆ. ಈ ಪೈಕಿ ಮಹೇಶ್ 8 ಎಕರೆ, ಜವರೇಗೌಡ 1.5 ಎಕರೆ, ಪಾಪಣ್ಣ 2 ಎಕರೆ, ಶಂಕರ್ ಎಂಬುವವರ 1 ಎಕರೆ ಕಬ್ಬು ಸುಟ್ಟು ಬೂದಿಯಾಗಿದೆ. ಜೊತೆಗೆ, ಮಹೇಶ್ ಎಂಬವರ ಒಂದೂವರೆ ಎಕರೆ ಬಾಳೆ ತೋಟವೂ ಬೆಂಕಿಗಾಹುತಿಯಾಗಿದೆ. ಶಿವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.