ಬಸ್ ಸಂಚಾರದಲ್ಲಿ ವ್ಯತ್ಯಯವಾಗಿ ಸಾರ್ವಜನಿಕರಿಗೆ ಬಿಸಿತಟ್ಟುವ ಸಾಧ್ಯತೆ
ಬೆಂಗಳೂರು: ವೇತನ ಪರಿಷ್ಕರಣೆ, ಕೆಲಸದ ಅವಧಿ ಕಡಿತ ಸೇರಿದಂತೆ ತಮ್ಮ 14 ಬೇಡಿಕೆಗಳನ್ನು ಈಡೇರಿಸದ ರಾಜ್ಯ ಸರ್ಕಾರದ ವಿರುದ್ಧ ಸಾರಿಗೆ ನೌಕರರು ರಾಜ್ಯಾದ್ಯಂತ ಮಂಗಳವಾರ ಪ್ರತಿಭಟನೆ ನಡೆಸಲು ಮುಂದಾಗಿದ್ದು, ಬಸ್ ಸಂಚಾರದಲ್ಲಿ ವ್ಯತ್ಯಯವಾಗಿ ಸಾರ್ವಜನಿಕರಿಗೆ ಬಿಸಿತಟ್ಟುವ ಸಾಧ್ಯತೆ ಇದೆ. ಆದರೆ, ಪ್ರತಿಭಟನೆಯಿಂದ ಬಸ್ ಸಂಚಾರಕ್ಕೆ ತೊಂದರೆಯಾಗುವುದಿಲ್ಲ ಎಂದು ಒಕ್ಕೂಟಗಳು ಸ್ಪಷ್ಟಪಡಿಸಿವೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳ ಸಿಬ್ಬಂದಿಗಳು ಇಂದು ಪ್ರತಿಭಟನೆ ನಡೆಸಲಿದ್ದಾರೆ.
ಬಸ್ ಡಿಪೋಗಳ ಮುಂಭಾಗ, ಹುಬ್ಬಳ್ಳಿ, ಕಲಬುರಗಿ, ಬೆಂಗಳೂರು ಸಾರಿಗೆ ನಿಗಮಗಳ ಕಚೇರಿ ಮುಂಭಾಗ ಮತ್ತು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಯಲಿದೆ.
ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ ಮಾಡುತ್ತಿದ್ದ ನಿಗಮಗಳು ಆರು ವರ್ಷ ಕಳೆದರೂ ವೇತನ ಪರಿಷ್ಕರಣೆ ಬಗ್ಗೆ ಪ್ರಸ್ತಾಪ ಮಾಡಿಲ್ಲ. ನಿಯಮದಂತೆ 2020ರ ಮಾರ್ಚ್ನಲ್ಲೇ ವೇತನ ಪರಿಷ್ಕರಣೆಯಾಗಬೇಕಿತ್ತು. ಆದರೆ ಸರ್ಕಾರ ಇದುವರೆಗೆನ ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸಿಲ್ಲ. ಹೀಗಾಗಿ, ಸರ್ಕಾರದ ನಿರ್ಲಕ್ಷ್ಯ ಧೋರಣೆ ವಿರುದ್ಧ ಪ್ರತಿಭಟನೆ ಮುಂದಾಗಿದ್ದೇವೆ ಎಂದು ರಾಜ್ಯ ಸಾರಿಗೆ ನೌಕರರ ಮುಖಂಡ ಅನಂತ ಸುಬ್ಬರಾವ್ ಹೇಳಿದ್ದಾರೆ.
ಪ್ರಮುಖ ಬೇಡಿಕೆಗಳು
೧. ವೇತನ ಪರಿಷ್ಕರಣೆ
೨. ಕೆಲಸದ ಅವಧಿಯನ್ನು ಕಡಿತ
೩. ಎಲ್ಲಾ ಕಾರ್ಮಿಕರಿಗೆ, ವಿಶೇಷವಾಗಿ ಮಹಿಳೆಯರಿಗೆ ಕೆಲಸದ ಪರಿಸ್ಥಿತಿ ಸುಧಾರಣೆ
೪. ನೌಕರರ ವಿರುದ್ಧ ದಾಖಲಾಗಿರುವ ಎಫ್ಐಆರ್ಗಳನ್ನು ಹಿಂಪಡೆಯುವುದು
೫. ವಜಾಗೊಂಡ ನೌಕರರನ್ನು ಮರು ನೇಮಕಗೊಳಿಸುವುದು
ಈಡೇರದ ಬೇಡಿಕೆಗಳು
ಕಳೆದ ಮುಷ್ಕರದ ಸಂದರ್ಭದಲ್ಲಿ ಹತ್ತು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ಪ್ರತಿಭಟನೆ ನಡೆಸಿದ್ದರು. ಇದರಲ್ಲಿ ಒಂಬತ್ತು ಬೇಡಿಕೆಗಳನ್ನು ಮಾತ್ರ ಈಡೇರಿಸುತ್ತೇವೆ ಎಂದು ರಾಜ್ಯ ಸರ್ಕಾರ ನೌಕರರಿಗೆ ಮಾತು ಕೊಟ್ಟಿತ್ತು. ಇದರಿಂದ ಸಾರಿಗೆ ನೌಕರರು ಪ್ರತಿಭಟನೆ ಹಿಂಪಡೆದು ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ ಇದುವರೆಗೂ ರಾಜ್ಯ ಸರ್ಕಾರ ನಮ್ಮ ಒಂದೇ ಒಂದು ಬೇಡಿಕೆಯನ್ನು ಈಡೇರಿಸಿಲ್ಲ ಎಂದು ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾಲ್ಕು ನಿಗಮಗಳು 1.30 ಲಕ್ಷ ನೌಕರರು
ಹಿಂದಿನ ಮುಷ್ಕರ
* ಡಿಸೆಂಬರ್ರಿಂ11,2020ದ 14ರವರೆ 4 ದಿನಗಳ ಕಾಲ ಮುಷ್ಕರ
* ಏಪ್ರಿಲ್ 07,2021ರಿಂದ ಏ.21ರವರೆಗೆ 15 ದಿನಗಳ ಮುಷ್ಕರ
ಸಾರಿಗೆ ನಿಗಮಕ್ಕೆ 125 ಕೋಟಿ ರೂ.ನಷ್ಟ
ಕಳೆದ ಬಾರಿ ಸಾರಿಗೆ ನೌಕರರು ಮುಷ್ಕರ ನಡೆಸಿದ ಪರಿಣಾಮ ನಾಲ್ಕು ನಿಗಮಗಳಿಗೆ ಸುವಾರು 152 ಕೋಟಿ ರೂ. ನಷ್ಟವಾಗಿತ್ತು. 2022ರ ಏಪ್ರಿಲ್ 7 ರಿಂದ ನಾಲ್ಕು ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ಸೇರಿದ 60 ಬಸ್ಗಳು ಹಾನಿಗೊಳಗಾಗಿದ್ದವು.
ಕಲ್ಲು ತೂರಾಟದಿಂದ ಕೆಎಸ್ಆರ್ಟಿಸಿಯ 34 ಬಸ್ಗಳ ಗಾಜು, ಕಿಟಕಿ ಮತ್ತು ಹಿಂಬದಿಯ ಗ್ಲಾಸ್ಗಳು ಒಡೆದಿದ್ದವು. 121 ನೌಕರರನ್ನು ಒಳಗೊಂಡ 34 ಪ್ರಕರಣಗಳು ದಾಖಲಾಗಿದ್ದವು.
ಶಿಸ್ತುಕ್ರಮದ ಎಚ್ಚರಿಕೆ
ವೇತನ ಹೆಚ್ಚಳಕ್ಕೆ ಆಗ್ರಹಿಸಿ ರಾಜ್ಯವ್ಯಾಪಿ ಪ್ರತಿಭಟನೆಗೆ ಸಜ್ಜಾಗಿದ್ದ ಸಾರಿಗೆ ನೌಕರರಿಗೆ ನಾಲ್ಕು ನಿಗಮಗಳು ಶಿಸ್ತು ಕ್ರಮದ ಎಚ್ಚರಿಕೆ ನೀಡಿವೆ.
ವೇತನ ಹೆಚ್ಚಳಕ್ಕೆ ಆಗ್ರಹಿಸಿ ಸರ್ಕಾರದ ವಿರುದ್ಧ ಸಾರಿಗೆ ನೌಕರರು ಪ್ರತಿಭಟನೆ ನಡೆಸಲು ಸಜ್ಜಾಗುತ್ತಿದ್ದಾರೆ. ಪ್ರತಿಭಟನೆಯಲ್ಲಿ ಭಾಗಿಯಾಗದಂತೆ ಬಿಎಂಟಿಸಿ, ಕೆಎಸ್ಆರ್ಟಿಸಿ ವಾಯುವ್ಯ, ಈಶಾನ್ಯ ನಿಗಮಗಳಿಂದ ಎಚ್ಚರಿಕೆ ನೀಡಲಾಗಿದೆ. ಇದನ್ನು ಉಲ್ಲಂಘಿಸಿ ಪ್ರತಿಭಟನೆಯಲ್ಲಿ ಭಾಗಿಯಾದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸೂಚನೆ ಕೊಟ್ಟಿವೆ.
ವಾರದ ರಜೆ ಹೊರತುಪಡಿಸಿ ಅನಗತ್ಯ ರಜೆ ಹಾಕುವಂತಿಲ್ಲ. ಕರ್ತವ್ಯಕ್ಕೆ ಗೈರಾದರೆ ವೇತನ ಕಡಿತದ ಜೊತೆಗೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಎಲ್ಲ ನೌಕರರು ಕರ್ತವ್ಯಕ್ಕೆ ಹಾಜರಾಗುವಂತೆ ಎಲ್ಲ ನಿಗಮಗಳಿಂದ ಮೌಖಿಕ ಸೂಚನೆ ನೀಡಲಾಗಿದೆ. ಸಾವಿರಾರು ನೌಕರರು ಪ್ರತಿಭಟನೆಯಲ್ಲಿ ಭಾಗಿಯಾದರೆ ಪ್ರಯಾಣಿಕರಿಗೆ ತೊಂದರೆಯಾಗಲಿದೆ.. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಲ್ಲರೂ ಕರ್ತವ್ಯಕ್ಕೆ ಹಾಜರಾಗಬೇಕೆಂದು ನಿಗಮಗಳಿಂದ ನಿರ್ದೇಶನ ನೀಡಿದೆ.
ಸಾರಿಗೆ ನೌಕರರು ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದ ಆಗ್ರಹಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಬಸ್ಗಳ ಸಂಚಾರ ಮತ್ತು ಕಾರ್ಯಚರಣೆಯಗೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ. ಯಾರೊಬ್ಬರು ಕೂಡ ಬಸ್ಗಳನ್ನು ಹಾನಿಗೊಳಪಡಿಸಬಾರದು. ಖಾಸಗಿ ಬಸ್ಗಳು ರೂಟ್ಗಳಲ್ಲಿ ನಿಗದಿಪಡಿಸಿದ ದರವನ್ನಷ್ಟೇ ಪಡೆಯಬೇಕು. ಒಂದು ವೇಳೆ ಪ್ರಯಾಣಿಕರಿಂದ ಹೆಚ್ಚಿನ ಹಣ ವಸೂಲಿ ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ.
-ಸತ್ಯವತಿ,
ಕೆಎಸ್ಆರ್ಟಿಸಿ ನಿರ್ದೇಶಕಿ