ಬೆಂಗಳೂರು : ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹೊಸ್ತಿಲಲ್ಲೇ ಮತ್ತೊಂದು ಹೊಸ ಅಸ್ತ್ರ ಪ್ರಯೋಗಿಸಲು ಮುಂದಾಗಿರುವ ಆಡಳಿತಾರೂಢ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಮುಂದಾಗಿದೆ.
ಈಗಾಗಲೇ ಉತ್ತರಖಂಡ್ನಲ್ಲಿ ಈ ಮಸೂದೆ ಅನುಷ್ಠಾನವಾಗಿದ್ದು, ವಿಧಾನಸಭೆ ಚುನಾವಣೆ ನಡೆಯುತ್ತಿರುವ ಹಿಮಾಚಲ ಪ್ರದೇಶ ಹಾಗೂ ಗುಜರಾತ್ನಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿ ಮಾಡಲು ಅಲ್ಲಿನ ಸರ್ಕಾರಗಳು ಮುಂದಾಗಿವೆ.
ಇದರ ಬೆನ್ನಲ್ಲೇ ಕರ್ನಾಟಕ ಸರ್ಕಾರವು ಈ ಮಸೂದೆಯನ್ನು ಡಿಸೆಂಬರ್ನಲ್ಲಿ ನಡೆಯಲಿರುವ ಬೆಳಗಾವಿ ಅಧಿವೇಶನದಲ್ಲಿ ಮಂಡನೆ ಮಾಡಲು ಚಿಂತನೆ ನಡೆಸಿದ್ದು, ಕೇಂದ್ರ ವರಿಷ್ಠರು ಅನುಮತಿ ನೀಡುವುದಷ್ಟೇ ಬಾಕಿ ಇದೆ.
ಗುಜರಾತ್ ಸರ್ಕಾರದ ಮಾದರಿಯಲ್ಲೇ ಕರ್ನಾಟಕದಲ್ಲೂ ಈ ಮಸೂದೆಯನ್ನು ಯಥಾವತ್ತಾಗಿ ಬರುವ ಡಿಸೆಂಬರ್ ತಿಂಗಳ ಚಳಿಗಾಲದ ಅವೇಶನದಲ್ಲಿ ಅನುಷ್ಠಾನ ಮಾಡಲು ಚಿಂತನೆ ನಡೆದಿದೆ.
ಗುಜರಾತ್ನಂತೆ ಇಲ್ಲೂ ಕೂಡ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಲಿದ್ದು, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಯ ಅಧಿಕಾರಿಗಳು ಸಮಿತಿಯ ಸದಸ್ಯರಾಗಿರುತ್ತಾರೆ.
ಒಂದು ತಿಂಗಳು ಸುದೀರ್ಘ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡಲಿದ್ದು, ಬಳಿಕ ಅಧಿವೇಶನದಲ್ಲಿ ಈಮಸೂದೆಯನ್ನು ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಡಿಸಿ ನಂತರ ಸುದೀರ್ಘ ಚರ್ಚೆ ಬಳಿಕ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಟ್ಟ ಬಳಿಕ ಜಾರಿಯಾಗಲಿದೆ.
ವಾಸ್ತವವಾಗಿ ಈ ಮಸೂದೆಯನ್ನು ಈ ಹಿಂದೆ ಜಾರಿಗೆ ತಂದಿರುವ ಧಾರ್ಮಿಕ ಸ್ವತಂತ್ರ ಸಂರಕ್ಷಣೆ ಹಕ್ಕು 2021 ಕಾಯ್ದೆಗೂ ಮುನ್ನವೇ ಜಾರಿ ಮಾಡಬೇಕೆಂದು ಆರ್ಎಸ್ಎಸ್ ನಾಯಕರು ಸರ್ಕಾರಕ್ಕೆ ಸಲಹೆ ಕೊಟ್ಟಿದ್ದರು.
ಆ ವೇಳೆ ಉತ್ತರಖಂಡ್ ಹೊರತುಪಡಿಸಿದರೆ ಯಾವುದೇ ರಾಜ್ಯಗಳು ಈ ಮಸೂದೆಯನ್ನು ಜಾರಿ ಮಾಡಲು ಮುಂದಾಗಿರಲಿಲ್ಲ. ಈಗ ಬಿಜೆಪಿ ಆಡಳಿತವಿರುವ ರಾಜ್ಯಗಳು ಹಂತ ಹಂತವಾಗಿ ಅನುಷ್ಠಾನ ಮಾಡುತ್ತಿರುವುದರಿಂದ ರಾಜ್ಯ ಸರ್ಕಾರವು ಜಾರಿ ಮಾಡಲು ಮುಂದಾಗಿದೆ.
2019ರ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿ ಮಾಡುವುದಾಗಿ ಘೋಷಣೆ ಮಾಡಿತ್ತು. ಪರಿಣಾಮ ಬಿಜೆಪಿ 303 ಸ್ಥಾನಗಳನ್ನು ಗೆದ್ದು ಪ್ರಚಂಡ ಬಹುಮತದ ಮೂಲಕ 2ನೇ ಬಾರಿಗೆ ಅಧಿಕಾರಕ್ಕೆ ಬಂದಿತ್ತು.
ದೇಶಾದ್ಯಂತ ಮಸೂದೆಗೆ ಜನರು ಬೆಂಬಲ ಸೂಚಿಸಿದ್ದಾರೆ ಎಂಬರ್ಥದ ಮೇಲೆ ಸರ್ಕಾರ ಇದನ್ನು ಅನುಷ್ಠಾನ ಮಾಡಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಏನೇನು ನಿಯಮಗಳು:
ಒಂದು ವೇಳೆ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾದರೆ ರಾಜ್ಯಾದ್ಯಂತ ಎಲ್ಲ ಸಮುದಾಯದವರಿಗೂ ಒಂದೇ ನೀತಿ, ನಿಯಮಗಳು ಅನ್ವಯವಾಗಲಿದೆ. ಹಿಂದು, ಮುಸ್ಲಿಂ, ಕ್ರಿಶ್ಚಿಯನ್, ಸಿಖ್ಖರ್, ಜೊರಾಸ್ಟ್ರಿಯನ್ ಸೇರಿದಂತೆ ಪ್ರತಿಯೊಂದು ಸಮುದಾಯಕ್ಕೆ ಒಂದೇ ನೀತಿ ಜಾರಿಗೆ ಬರುತ್ತದೆ.
ಹಿಂದೂ, ಮುಸ್ಲಿಂ ಸಿಖ್ಖರು ಸೇರಿದಂತೆ ದೇಶದ ವಿವಿಧ ಧರ್ಮಗಳ ಜನರು ವಿವಾಹ, ಆಸ್ತಿ ಹಂಚಿಕೆ ಸೇರಿ ವಿವಿಧ ಉದ್ದೇಶಗಳೊಗೆ ತಮ್ಮ ಸಮುದಾಯದ ವೈಯಕ್ತಿಕ ಕಾನೂನುಗಳನ್ನು ಪಾಲಿಸುತ್ತಿದ್ದಾರೆ. ಹಾಗಾಗಿ ಎಲ್ಲ ಧರ್ಮದವರಿಗೂ ವಿವಾಹ ವಿಚ್ಛೇದನ, ಅಸ್ತಿ ದತ್ತುಗೆ ಸಂಬಂಸಿದ ವಿಚಾರಗಳಿಗೆ ಒಂದೇ ಕಾನೂನು ರೂಪಿಸುವುದೇ ಏಕರೂಪ ನಾಗರಿಕ ಸಂಹಿತೆಯಾಗಿದೆ.
ಸಂಹಿತೆ ಏಕೆ?:
ರಾಜ್ಯದಲ್ಲಿ ಹಿಂದೂ ವಿವಾಹ ಕಾನೂನುಗಳು ಬೇರೆ-ಬೇರೆಯಾಗಿದ್ದು, ವಿವಿಧ ಸಮಸ್ಯೆಗಳಿಗೆ ಕಾರಣವಾಗಿದೆ. ಅಲ್ಲದೇ ಆಯಾ ವೈಯಕ್ತಿಕ ಧರ್ಮಗಳಲ್ಲಿ ಪ್ರತ್ಯೇಕ ನಿಯಮ ಇರುವ ಕಾರಣ. ಆಸ್ತಿ ವ್ಯಾಜ್ಯಗಳೂ ಹೆಚ್ಚಾಗಿವೆ. ಮಹಿಳೆಯರಿಗೆ ಪತಿ ಅಥವಾ ತಂದೆಯ ಆಸ್ತಿಯಲ್ಲಿ ಪಾಲು ಸಿಗುತ್ತಿಲ್ಲ ಎಂಬ ದೂರುಗಳಿದ್ದು, ಇದೆಲ್ಲದಕ್ಕೂ ಅಂತ್ಯವಾಡಲು ಒಂದೇ ಕಾನೂನು ರೂಪಿಸಿ ಏಕರೂಪದ ನಾಗರಿಕ ಸಂಹಿತೆ ಜಾರಿಗೆ ತರಲಾಗುತ್ತಿದೆ.