ಶ್ರೀರಂಗಪಟ್ಟಣ: ವಿಶ್ವ ಹಿಂದೂ ಪರಿಷತ್, ಭಜರಂಗ ಕಾರ್ಯಕರ್ತರು ಜೂನ್ 4ರಂದು (ಶನಿವಾರ) ‘ಶ್ರೀರಂಗಪಟ್ಟಣ ಚಲೋ’ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ಪಟ್ಟಣದಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗಿದ್ದು, ಪೊಲೀಸರು ಕಟ್ಟೆಚ್ಚರ ವಹಿಸಲಾಗಿದೆ.
ಹಿಂದೂ ಸಂಘಟನೆಗಳು ಪಟ್ಟಣದಲ್ಲಿ ಮೂಡಲಬಾಗಿಲು ಆಂಜನೇಯಸ್ವಾಮಿ ದೇವಾಲಯದ ಮೂಲ ಸ್ಥಾನ ಎನ್ನಲಾದ ಟಿಪ್ಪು ಮಸೀದಿ (ಜಾಮಿಯಾ ಮಸೀದಿ)ಗೆ ಜಾಥಾ ಹಮ್ಮಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಮಸೀದಿಯತ್ತ ಯಾರೂ ಸುಳಿಯದಂತೆ ಕಬ್ಬಿಣದ ತಾತ್ಕಾಲಿಕ ಬೇಲಿ ನಿರ್ಮಿಸಲಾಗಿದೆ, ಡ್ರೋನ್ ಕ್ಯಾಮೆರಾ ಮೂಲಕ ಕಣ್ಗಾವಲು ಇರಿಸಲಾಗಿದೆ.
ಮಸೀದಿಯ ಸುತ್ತ 600 ಮೀಟರ್ ಕಬ್ಬಿಣದ ಬೇಲಿ ಎದ್ದಿದೆ. ಪೂರ್ವ ಕೋಟೆ ದ್ವಾರದಿಂದ ಮಸೀದಿಯತ್ತ ಬಂದು ಹೋಗುವವರ ಮೇಲೆ ನಿಗಾ ಇಡಲು ಪೊಲೀಸ್ ಇಲಾಖೆ ಡ್ರೋನ್ ಕ್ಯಾಮೆರಾದ ಕಣ್ಗಾವಲು ವ್ಯವಸ್ಥೆ ಮಾಡಿಕೊಂಡಿದೆ. ಈಗಾಗಲೇ ಪಟ್ಟಣಕ್ಕೆ ವಿವಿಧೆಡೆಗಳಿಂದ ಪೊಲೀಸರನ್ನು ಕರೆಸಲಾಗಿದೆ. ಮಸೀದಿಯ ಭದ್ರತೆಗೆ ಡಿಎಆರ್ ಮತ್ತು ಕೆಎಸ್ಆರ್ಪಿ ತುಕಡಿಗಳ ಕೂಡ ನಿಯೋಜನೆಗೊಂಡಿವೆ. ಶುಕ್ರವಾರ ಸಂಜೆಯಿಂದಲೇ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಮಸೀದಿಯಲ್ಲಿ ನಡೆಯುತ್ತಿರುವ ಮದರಸಾ ತೆರವು ಮತ್ತು ಹಿಂದೂ ದೇವರ ಮೂರ್ತಿಗಳಿಗೆ ಪೂಜೆಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿ ವಿಎಚ್ಪಿ, ಭಜರಂಗದಳ ಸಂಘಟನೆಗಳ ಕಾರ್ಯಕರ್ತರು ಕೋರಿದ್ದಾರೆ. ಪಟ್ಟಣದ ಕುವೆಂಪು ವೃತ್ತದಿಂದ ಮೂಡಲಬಾಗಿಲು ಆಂಜನೇಯಸ್ವಾಮಿಯ ಮೂಲಸ್ಥಾನದವರೆಗೆ ಜಾಥಾ ನಡೆಸುವುದಾಗಿ ತಿಳಿಸಿದ್ದಾರೆ. ಹಾಗಾಗಿ ಜಾಥಾ ನಡೆಯುವ ದಾರಿಯ ಉದ್ದಕ್ಕೂ ಚಲನವಲನಗಳ ಮೇಲೆ ಹದ್ದಿನ ಕಣ್ಣಿಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Karnataka | Section 144 CrPC imposed in Srirangapatna town of Mandya district from 6 am to 6 pm today in wake of 'Srirangapatna Chalo' call given by VHP for today.
Over 500 police personnel deployed, 4 check posts installed. Route march taken out in the presence of SP N Yatish. pic.twitter.com/vBMXQ3GXpO
— ANI (@ANI) June 4, 2022
ಜಿಲ್ಲಾಧಿಕಾರಿ ಎಸ್.ಅಶ್ವತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಉಪ ವಿಭಾಗಾಧಿಕಾರಿ ಶಿವಾನಂದ್ ಮೂರ್ತಿ, ಶ್ರೀರಂಗಪಟ್ಟಣ ತಹಶೀಲ್ದಾರ್ ಶ್ವೇತಾ ಸ್ಥಳಕ್ಕೆ ಭೇಟಿ ನೀಡಿ ಭದ್ರತೆಯ ಪರಿಶೀಲನೆ ನಡೆಸಿದ್ದಾರೆ.
ಮದ್ಯ ಮಾರಾಟ ನಿಷೇಧ
‘ಶ್ರೀರಂಗಪಟ್ಟಣ ಚಲೋ’ ಯಾತ್ರೆ ನಡೆದರೆ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಜೂನ್ 3, ಸಂಜೆ 6 ಗಂಟೆಯಿಂದ ಜೂನ್ 5ರ ಬೆಳಿಗ್ಗೆ 6ಗಂಟೆಯವರೆಗೆ ಶ್ರೀರಂಗಪಟ್ಟಣ ಪುರಸಭಾ ವ್ಯಾಪ್ತಿಯ 05 ಕಿ.ಮೀ ಸುತ್ತಳತೆ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಪುರಸಭಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮಾದರಿಯ ಮದ್ಯದ ಅಂಗಡಿ, ಬಾರ್ ಮತ್ತು ರೆಸ್ಟೋರಂಟ್ಗಳನ್ನು ಮುಚ್ಚುವಂತೆ, ಮದ್ಯ ಮಾರಾಟ, ಮದ್ಯ ಸಂಗ್ರಹಣೆ, ಮದ್ಯ ಸಾಗಾಣಿಕೆ ಮತ್ತು ಶೇಖರಣೆ ಮಾಡುವುದನ್ನು ಸ್ಥಗಿತಗೊಳಿಸುವಂತೆ ಆದೇಶಿಸಿದ್ದಾರೆ.