ರಾಜ್ಯ

ಶುಶ್ರೂಷಕರ ನೋಂದಣಿಗಾಗಿ ವಿಶೇಷ ಡಿಜಿ ಲಾಕರ್‌ ತಂತ್ರಜ್ಞಾನ : ದೇಶದಲ್ಲೇ ಮೊದಲು

ಬೆಂಗಳೂರು : ದೇಶದಲ್ಲೇ ಮೊದಲ ಬಾರಿಗೆ ಶುಶ್ರೂಷಕರ ನೊಂದಣಿಗಾಗಿ, ಕರ್ನಾಟಕ ರಾಜ್ಯ ಶುಶ್ರೂಷ ಪರಿಷತ್‌ ಅಭಿವೃದ್ಧಿಪಡಿಸಿರುವ ವಿಶೇಷ ಡಿಜಿ ಲಾಕರ್‌ ತಂತ್ರಜ್ಞಾನ ಜಾರಿಗೆ ಬಂದಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ್‌ ತಿಳಿಸಿದರು.

ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಸಚಿವರು, ಆಧಾರ್‌, ಡಿಜಿ ಲಾಕರ್‌ ಇ-ಕೆವೈಸಿ ಮೂಲಕ ನೋಂದಣಿ ಪ್ರಮಾಣ ಪತ್ರಗಳನ್ನು ವಿತರಿಸುವ ತಂತ್ರಜ್ಞಾನದ ಲೋಕಾರ್ಪಣೆ ಜುಲೈ 15 ಮಂಗಳವಾರ ನಡೆಯಲಿದೆ ಎಂದರು.

ಯುಐಡಿಎಐ (UIDAI), ಸಿ-ಇಜಿ (C-eG), ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಹಾಗೂ ಕರ್ನಾಟಕ ರಾಜ್ಯ ಶುಶ್ರೂಷ ಪರೀಕ್ಷಾ ಮಂಡಳಿ ಸಹಯೋಗದೊಂದಿಗೆ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಈ ತಂತ್ರಜ್ಞಾನದ ನೆರವಿನಿಂದ ಆಧಾರ್‌ ಇ-ಕೆವೈಸಿ (E-Kyc)ಯಿಂದ ಶುಶ್ರೂಷಕರ ವೈಯಕ್ತಿಕ ಡಾಟಾ, ವಿಳಾಸ, ಫೋಟೋ, ಹಾಗೂ ಇತರೆ ಮಾಹಿತಿಗಳನ್ನು ಆಧಾರ್‌ ಸರ್ವರ್‌ ನಿಂದ ನೇರವಾಗಿ ಕರ್ನಾಟಕ ಶುಶ್ರೂಷ ಪರಿಷತ್‌ ಪಡೆದುಕೊಳ್ಳಬಹುದಾಗಿದೆ. ಈ ಹಿಂದೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ನೋಂದಣಿಗಾಗಿ ಕರ್ನಾಟಕ ರಾಜ್ಯ ಶುಶ್ರೂಷ ಪರಿಷತ್ತಿನ ಬೆಂಗಳೂರಿನ ಕೇಂದ್ರ ಕಚೇರಿಗೆ ಬರಬೇಕಾಗಿತ್ತು ಎಂದರು.

ತೊಂದರೆ ತಪ್ಪಿಸಲು ನೂತನ ತಂತ್ರಜ್ಞಾನ: ರಾಜ್ಯ ಮತ್ತು ಹೊರ ರಾಜ್ಯದ ಶುಶ್ರೂಷ ಸಮೂಹ ಕೇವಲ ನೋಂದಣಿಯ ಉದ್ದೇಶದಿಂದ ಊಟ, ವಸತಿಗಾಗಿ ಸಾವಿರಾರು ರೂಪಾಯಿ ವ್ಯಯಿಸಿ ಪರದಾಡುವ ಪರಿಸ್ಥಿತಿ ಇತ್ತು. ಜೊತೆಗೆ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ನೋಂದಣಿಗಾಗಿ ಸರತಿಯಲ್ಲಿ ನಿಂತು ಕಾಯಬೇಕಾಗಿತ್ತು. ಮಹಿಳೆಯರು, ಗರ್ಭಿಣಿಯರು, ಹಸುಗೂಸುಗಳ ತಾಯಂದಿರು ಸಾಕಷ್ಟು ತೊಂದರೆ ಅನುಭವಿಸಬೇಕಾಗಿತ್ತು. ನೂತನ ತಂತ್ರಜ್ಞಾನದ ಅಳವಡಿಕೆಯಿಂದ ಈ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ದೊರಕಿದಂತಾಗಿದೆ ಎಂದು ಡಾ. ಪಾಟೀಲ್‌ ತಿಳಿಸಿದರು.

ಕರ್ನಾಟಕ ರಾಜ್ಯ ಶುಶ್ರೂಷ ಪರಿಷತ್ತಿಗೆ ನೋಂದಣಿ ಉದ್ದೇಶದಿಂದ ನಾಡಿನ ನಾನಾ ಮೂಲೆಗಳಿಂದ ಮತ್ತು ವಿವಿಧ ಹೊರರಾಜ್ಯಗಳಿಂದ ಬರುತ್ತಿದ್ದ ಶುಶ್ರೂಷಕರ ತೊಂದರೆಗಳನ್ನು ತಪ್ಪಿಸಲು ದೇಶದಲ್ಲೇ ಪ್ರಥಮ ಬಾರಿಗೆ ಆಧಾರ್‌ ಮತ್ತು ಡಿಜಿ ಲಾಕರ್‌ ಇ-ಕೆವೈಸಿ ಮೂಲಕ ಅವಕಾಶ ಮಾಡಿಕೊಡಲಾಗುತ್ತಿದೆ. ವ್ಯಾಪಕವಾಗಿ ಅಭಿವೃದ್ಧಿಗೊಳ್ಳುತ್ತಿರುವ ಡಿಜಿಟಲ್‌ ತಂತ್ರಜ್ಞಾನ ಹಾಗೂ ಕೃತಕ ಬುದ್ದಿಮತ್ತೆಯ ನೆರವಿನಿಂದ ನಮ್ಮ ಸರ್ಕಾರ ಅಳವಡಿಸಿಕೊಂಡಿರುವ ಈ ನೂತನ ತಂತ್ರಜ್ಞಾನ ಲಕ್ಷಾಂತರ ಶುಶ್ರೂಷಕರ ತೊಂದರೆ ತಾಪತ್ರಯಗಳಿಗೆ ಅಂತ್ಯ ಹಾಡಲಿದೆ ಎಂದು ಸಚಿವರು ಹೇಳಿದರು.

ನಕಲಿ ಹಾವಳಿ ತಡೆಗಟ್ಟಲು ಸಹಕಾರಿ: ಹೊಸ ಡಿಜಿ ಲಾಕರ್‌ (Digi Locker-Requester) ತಂತ್ರಜ್ಞಾನದಿಂದ ಶುಶ್ರೂಷಕರ ಆಧಾರ್‌ ಕಾರ್ಡ್‌, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಅಂಕಪಟ್ಟಿ ಮತ್ತಿತರ ಪ್ರಮಾಣಪತ್ರಗಳನ್ನು ಸಂಬಂಧಪಟ್ಟ ಆಯಾ ಪರೀಕ್ಷಾ ಬೋರ್ಡ್‌ಗಳಿಂದ ನೇರವಾಗಿ ಪಡೆದುಕೊಳ್ಳಬಹುದು. ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಹಾಗೂ ಕರ್ನಾಟಕ ರಾಜ್ಯ ಶುಶ್ರೂಷ ಪರೀಕ್ಷಾ ಮಂಡಳಿಗಳು ಅಳವಡಿಸಿಕೊಂಡಿರುವ ಈ ತಂತ್ರಜ್ಞಾನದಿಂದ ಪರೀಕ್ಷಾ ಫಲಿತಾಂಶವನ್ನು ನೇರವಾಗಿ ಕರ್ನಾಟಕ ರಾಜ್ಯ ಶುಶ್ರೂಷ ಪರಿಷತ್‌ ಪಡೆದುಕೊಳ್ಳಲಿದೆ. ನಂತರ ಡಿಜಿ ಲಾಕರ್‌ ತಂತ್ರಜ್ಞಾನ (Digi Locker-Issuer)ದಿಂದ ಶುಶ್ರೂಷಕರಿಗೆ ನೇರವಾಗಿ ನೋಂದಣಿ ಪತ್ರವನ್ನು ವಿತರಿಸಬಹುದಾಗಿದೆ ಎಂದು ಶುಶ್ರೂಷ ಪರಿಷತ್ತಿನ ಕುಲಸಚಿವರಾದ ಡಾ.ಕೆ.ಮಲ್ಲು ತಿಳಿಸಿದರು.

ಈ ತಂತ್ರಜ್ಞಾನದ ಮತ್ತೊಂದು ಪ್ರಮುಖವಾದ ಅಂಶ ಎಂದರೆ, ನಕಲಿ ನೋಂದಣಿ ಪ್ರಮಾಣ ಪತ್ರಗಳ ಹಾವಳಿಯನ್ನೂ ತಡೆಗಟ್ಟಬಹುದಾಗಿದೆ ಎಂದು ‌ಡಾ.ಕೆ.ಮಲ್ಲು ಮಾಹಿತಿ ನೀಡಿದರು.

ಆಂದೋಲನ ಡೆಸ್ಕ್

Recent Posts

ಮೈಸೂರು| ರಾಜ್ಯಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದ ಮಾಜಿ ಸಚಿವ ಸಿ.ಟಿ.ರವಿ

ಮೈಸೂರು: ಮಾಜಿ ಸಚಿವ ಸಿ.ಟಿ.ರವಿ ಅವರಿಂದು ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ. ರಾಜ್ಯಪಾಲರಾದ ಥಾವರ್‌ ಚಂದ್‌ ಗೆಹ್ಲೋಟ್‌…

16 mins ago

ಮಹಾರಾಷ್ಟ್ರ ಡಿಸಿಎಂ ಆಗಿ ಅಜಿತ್‌ ಪವಾರ್‌ ಪತ್ನಿ ಸುನೇತ್ರಾ ಆಯ್ಕೆ, ಇಂದು ಸಂಜೆ ಪ್ರಮಾಣವಚನ ಸ್ವೀಕಾರ?

ಮುಂಬೈ: ವಿಮಾನ ಪತನ ದುರಂತದಲ್ಲಿ ಸಾವನ್ನಪ್ಪಿದ ಡಿಸಿಎಂ ಅಜಿತ್‌ ಪವಾರ್‌ ಪತ್ನಿ ಸುನೇಂದ್ರ ಪವಾರ್‌ ಅವರನ್ನು ಉಪಮುಖ್ಯಮಂತ್ರಿ ಸ್ಥಾನಕ್ಕೆ ನೇಮಿಸಲು…

34 mins ago

ಉದ್ಯಮಿ ಸಿ.ಜೆ.ರಾಯ್‌ ಸಾವಿನ ಬಗ್ಗೆ ಸಚಿವ ಪರಮೇಶ್ವರ್‌ ಮಾಹಿತಿ

ಬೆಂಗಳೂರು: ರಿಯಲ್‌ ಎಸ್ಟೇಟ್‌ ಉದ್ಯಮಿ, ಕಾನ್ಪಿಡೆಂಟ್‌ ಗ್ರೂಪ್‌ ಚೇರ್ಮನ್‌ ಸಿ.ಜೆ.ರಾಯ್‌ ಆತ್ಮಹತ್ಯೆ ಪ್ರಕರಣದ ಬಗ್ಗೆ ಗೃಹ ಸಚಿವ ಪರಮೇಶ್ವರ್‌ ಪ್ರತಿಕ್ರಿಯೆ…

1 hour ago

ನಾಳೆ ಕೇಂದ್ರ ಬಜೆಟ್‌ ಮಂಡನೆ ಮಂಡನೆ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ನಾಳೆ 9ನೇ ಬಾರಿಗೆ ಬಜೆಟ್‌ ಮಂಡನೆ ಮಾಡಲಿದ್ದಾರೆ. ಈ ಮೂಲಕ…

2 hours ago

ಬನ್ನೇರುಘಟ್ಟದ ಕಾಸಾಗ್ರ್ಯಾಂಡ್‌ನಲ್ಲಿ ಇಂದು ಸಂಜೆ ಉದ್ಯಮಿ ಸಿ.ಜೆ.ರಾಯ್ ಅಂತ್ಯಕ್ರಿಯೆ

ಬೆಂಗಳೂರು: ಖ್ಯಾತ ಉದ್ಯಮಿ ಮತ್ತು ಕಾನ್ಪಿಡೆಂಟ್‌ ಗ್ರೂಪ್‌ ಸಂಸ್ಥಾಪಕ ಹಾಗೂ ಅಧ್ಯಕ್ಷರಾಗಿದ್ದ ಸಿ.ಜೆ.ರಾಯ್‌ ಅವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು,…

2 hours ago

ಓದುಗರ ಪತ್ರ: ಮೈಸೂರಿನಲ್ಲಿ ಮಳೆ ನೀರು ಕೊಯ್ಲು ಥೀಮ್ ಪಾರ್ಕ್ ಕನ್ನಡಿಯೊಳಗಿನ ಗಂಟು

ಮೈಸೂರು ನಗರದಲ್ಲಿ ಮಳೆನೀರು ಕೊಯ್ಲು ಥೀಮ್ ಪಾರ್ಕ್ ಸ್ಥಾಪಿಸುವ ಹಿಂದಿನ ಹಾಗೂ ಈಗಿನ ಸರ್ಕಾರಗಳ ಭರವಸೆ ಇನ್ನೂ ಕನ್ನಡಿಯೊಳಗಿನ ಗಂಟಾಗಿಯೇ…

6 hours ago