ನವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ಈ ಹಿಂದೆ ಬಳಸಿದ್ದ ವಿದ್ಯುನ್ಮಾನ ಮತ ಯಂತ್ರಗಳನ್ನು (ಇವಿಎಂ) ಕರ್ನಾಟಕ ಚುನಾವಣೆಯಲ್ಲಿ ಬಳಸಲಾಗಿದೆ ಎಂದು ಕಾಂಗ್ರೆಸ್ ಮಾಡಿರುವ ಆರೋಪಗಳನ್ನು ಚುನಾವಣಾ ಆಯೋಗ ಗುರುವಾರ ತಳ್ಳಿಹಾಕಿದೆ.
ಈ ಆಪಾದನೆಗೆ ಯಾವುದೇ ನಿಖರತೆ ಇಲ್ಲ ಮತ್ತು ಅದರ ಮೂಲಗಳು ವಿಶ್ವಾಸಾರ್ಹವಲ್ಲ ಎಂದು ಹೇಳಿದೆ.
ಇವಿಎಂಗಳನ್ನು ಎಂದಿಗೂ ದಕ್ಷಿಣ ಆಫ್ರಿಕಾಕ್ಕೆ ಕಳುಹಿಸಿರಲಿಲ್ಲ. ಅಲ್ಲಿ ಇವಿಎಂಗಳನ್ನು ಬಳಕೆ ಮಾಡುವುದೂ ಇಲ್ಲ ಎಂದು ಸ್ಪಷ್ಟಪಡಿಸಿರುವ ಆಯೋಗ, ಕರ್ನಾಟಕದಲ್ಲಿ ಚುನಾವಣೆಗೆ ಕೇವಲ ಎರಡು ದಿನ ಬಾಕಿ ಇರುವಾಗ ಇವಿಎಂಗಳ ಬಳಕೆ ಕುರಿತಂತೆ ತನ್ನ ಸ್ಪಷ್ಟೀಕರಣ ಕೇಳಿರುವ ಕಾಂಗ್ರೆಸ್ ಸಂಸದ ರಣದೀಪ್ ಸಿಂಗ್ ಸುರ್ಜೇವಾಲ ಅವರ ಪ್ರಶ್ನೆಗಳ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದೆ.
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹೈದರಾಬಾದ್ನ ಎಲೆಕ್ಟ್ರಾನಿಕ್ ಕಾರ್ಪೊರೇಷನ್ ಆಫ್ ಇಂಡಿಯಾ (ಇಸಿಐಎಲ್) ತಯಾರಿಸಿದ ಹೊಸ ಯಂತ್ರಗಳನ್ನೇ ಬಳಸಲಾಗುತ್ತಿದೆ ಎನ್ನುವುದು ಕಾಂಗ್ರೆಸ್ಗೆ ಸಂಪೂರ್ಣ ಅರಿವಿದೆ ಎಂದು ಚುನಾವಣಾ ಆಯೋಗ ಹೇಳಿದೆ.
ಮೊದಲನೆಯದಾಗಿ, ಚುನಾವಣಾ ಆಯೋಗವು ದಕ್ಷಿಣ ಆಫ್ರಿಕಾ ಸೇರಿದಂತೆ ಯಾವ ದೇಶಕ್ಕೂ ಇವಿಎಂಗಳನ್ನು ರವಾನಿಸಿಲ್ಲ. ಹಾಗೆಯೇ ಆಮದು ಕೂಡ ಮಾಡಿಕೊಂಡಿಲ್ಲ ಎಂದು ತಿಳಿಸಿದೆ.
ಫಲಿತಾಂಶಕ್ಕೂ ಹಿಂದಿನ 48 ಗಂಟೆಗಳ ಪಾವಿತ್ರ್ಯವನ್ನು ವಿಷದಪಡಿಸುವ ಕಾರಣಕ್ಕೆ ಸುರ್ಜೇವಾಲಾ ಅವರ ಆರೋಪಕ್ಕೆ ತತ್ಕ್ಷಣದ ಪ್ರತಿಕ್ರಿಯೆ ನೀಡಲಾಗಿದೆ ಎಂದು ತಿಳಿಸಿದೆ.
ಕರ್ನಾಟಕದಲ್ಲಿ ಯಾವುದೇ ಸೂಕ್ತ ಶಿಷ್ಟಾಚಾರಗಳ ಪಾಲನೆ ಮಾಡದೆ ಇವಿಎಂಗಳ ಮರು ನಿಯೋಜನೆ ನಡೆಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತಹ ‘ಮಾಹಿತಿ’ ಹಿಂದಿರುವ ‘ಕುಚೇಷ್ಟೆಯ ಮೂಲಗಳು’ ಯಾವುದು ಎಂದು ಕಾಂಗ್ರೆಸ್ ಸಾರ್ವಜನಿಕವಾಗಿ ಬಹಿರಂಗಪಡಿಸುವಂತೆ ಕಾಂಗ್ರೆಸ್ಗೆ ಆಯೋಗ ಆಗ್ರಹಿಸಿದೆ.
ಇದು ವಾಸ್ತವಾಂಶಗಳ ಆಧಾರಿತವಾಗಿಲ್ಲ ಎಂದು ಹೇಳಿದೆ. ಹಾಗೆಯೇ ಈ ರೀತಿ ವದಂತಿಗಳನ್ನು ಸೃಷ್ಟಿಸುವವರನ್ನು ಶಿಕ್ಷಿಸುವಂತೆ ಕಾಂಗ್ರೆಸ್ಗೆ ಮನವಿ ಮಾಡಿರುವ ಇಸಿ, ಇದರಿಂದ ಭಾರತೀಯ ಚುನಾವಣಾ ವ್ಯವಸ್ಥೆಯಲ್ಲಿ ಕಾಂಗ್ರೆಸ್ ಸುದೀರ್ಘ ಕಾಲದಿಂದ ಹೊಂದಿರುವ ಪ್ರತಿಷ್ಠೆಗೆ ಕಳಂಕ ಉಂಟಾಗುವುದಿಲ್ಲ ಎಂದಿದೆ.
ಇಡೀ ಪ್ರಕ್ರಿಯೆ ಸಮ್ಮುಖದಲ್ಲಿ ನಡೆದಿದೆ
ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ಪತ್ರ ಬರೆದಿರುವ ಚುನಾವಣಾ ಆಯೋಗ, ಮೇ 15ರ ಸಂಜೆ 5 ಗಂಟೆ ಒಳಗೆ ಕಾಂಗ್ರೆಸ್ ತೆಗೆದುಕೊಂಡ ಕ್ರಮದ ಬಗ್ಗೆ ಖಚಿತತೆ ನೀಡಬೇಕು ಎಂದು ಒತ್ತಾಯಿಸಿದೆ.
ಕರ್ನಾಟಕ ಚುನಾವಣೆಯಲ್ಲಿ ಇಸಿಐಎಲ್ ತಯಾರಿಸಿದ ಹೊಸ ಇವಿಎಂಗಳನ್ನು ಮಾತ್ರವೇ ಬಳಸಲಾಗಿದೆ ಎಂದು ಮಾರ್ಚ್ 29ರಂದೇ ರಾಜ್ಯ ಮುಖ್ಯ ಚುನಾವಣಾ ಆಯುಕ್ತರು ಕರ್ನಾಟಕ ಕಾಂಗ್ರೆಸ್ಗೆ ಪತ್ರ ಬರೆದಿದ್ದಾರೆ.
ಅದರಲ್ಲಿ ಮೊದಲ ಹಂತದಲ್ಲಿ ಪರೀಕ್ಷಿಸಿದ ಇವಿಎಂ ಮತ್ತು ವಿವಿ ಪ್ಯಾಟ್ಗಳ ಪಟ್ಟಿಯನ್ನು ನೀಡಲಾಗಿತ್ತು. ಇದಲ್ಲದೆ ಇವಿಎಂ ಪಡೆದುಕೊಂಡ ಸ್ಥಳದ ವಿವರಗಳನ್ನು ಎಲ್ಲ ಮಾನ್ಯತೆ ಪಡೆದ ರಾಷ್ಟ್ರೀಯ ಹಾಗೂ ರಾಜ್ಯ ಪಕ್ಷಗಳ ಪ್ರತಿನಿಧಿಗಳಿಗೆ ಇವಿಎಂ ಶಿಷ್ಟಾಚಾರಕ್ಕೆ ಅನುಗುಣವಾಗಿ ನೀಡಲಾಗಿದೆ ಮತ್ತು ಪ್ರಕ್ರಿಯೆಯನ್ನು ವಿಡಿಯೋಗ್ರಫಿ ಮಾಡಲಾಗಿದೆ.
ಅಣಕು ಕಾರ್ಯಾಚರಣೆ ಸೇರಿದಂತೆ ಇವಿಎಂಗಳಿಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳಲ್ಲೂ ಹಾಜರಾಗುವಂತೆ ಪಕ್ಷಗಳ ಪ್ರತಿನಿಧಿಗಳಿಗೆ ಸೂಚಿಸಲಾಗಿತ್ತು ಎಂದು ಹೇಳಿದೆ.