ಬೆಂಗಳೂರು: ಕರ್ನಾಟಕದಲ್ಲಿ ಶೀಘ್ರ ಪೌರ ಕಾರ್ಮಿಕರ ನೇಮಕಾತಿ ನಡೆಯಲಿದೆ. ಮೊದಲ ಹಂತದಲ್ಲಿ 11 ಸಾವಿರ ಪೌರ ಕಾರ್ಮಿಕರನ್ನು ನೇಮಿಸಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಪೌರ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಕಾರ್ಮಿಕರೊಂದಿಗೆ ಉಪಾಹಾರ ಸೇವಿಸಿ ಮಾತನಾಡಿದ ಅವರು, ಪೌರ ಕಾರ್ಮಿಕರ ಪರಿಶ್ರಮಕ್ಕೆ ಫಲ ಸಿಗಲಿದೆ. ಮುಖ್ಯಮಂತ್ರಿಯಾಗಿ ನಾನು ನನ್ನ ಕರ್ತವ್ಯ ಮಾಡಿದ್ದೇನೆ ಎಂದು ಹೇಳಿದರು. ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರನ್ನು ಸೇವೆಗೆ ಸೇರಿಸಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಈ ಕುರಿತು ಟ್ವೀಟ್ ಮಾಡಿದ್ದ ಅವರು ಪೌರಕಾರ್ಮಿಕರಿಗೆ ಸಂಬಂಧಿಸಿದಂತೆ ಐಡಿಪಿ ಸಾಲಪ್ಪ ವರದಿ ಅನುಷ್ಠಾನಕ್ಕೆ ಸರ್ಕಾರ ಬದ್ಧವಾಗಿದೆ. ಸಚಿವ ಸಭೆಯಲ್ಲಿ 11 ಸಾವಿರ ಪೌರಕಾರ್ಮಿಕರ ಸೇವೆ ಕಾಯಮಾತಿಗೆ ತೀರ್ಮಾನಿಸಲಾಗಿತ್ತು. ಇನ್ನೂ 43 ಸಾವಿರ ನೌಕರರ ಕಾಯಮಾತಿಯು ಬಾಕಿಯಿದೆ. ಈ ಬಗ್ಗೆ ಸರ್ಕಾರವು ಶೀಘ್ರ ಕ್ರಮ ತೆಗೆದುಕೊಳ್ಳಲಿದೆ ಎಂದು ಭರವಸೆ ನೀಡಿದ್ದರು. ಕರ್ನಾಟಕದ ಬಹುತೇಕ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರು ಮುಖ್ಯಮಂತ್ರಿಯ ಭರವಸೆಯಿಂದ ಖುಷಿಯಾಗಿದ್ದಾರೆ.
"ರಾಜ್ಯದಲ್ಲಿ ಇರುವ ಒಟ್ಟು 43 ಸಾವಿರ ಪೌರ ಕಾರ್ಮಿಕರ ಖಾಯಂ ನೇಮಕಾತಿಗೆ ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗುವುದು. I.P.D ಸಾಲಪ್ಪ ವರದಿ ಅನುಷ್ಠಾನಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ" : ಮುಖ್ಯಮಂತ್ರಿ @BSBommai
— CM of Karnataka (@CMofKarnataka) September 21, 2022