ಬೆಂಗಳೂರು : ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು ಮೆಟ್ರೋ ಯೋಜನೆಯಂತಹ ದೂರದೃಷ್ಟಿಯುಳ್ಳ ಮಹತ್ವದ ಯೋಜನೆಗಳನ್ನು ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿಗೆ ತಂದು ಬೆಂಗಳೂರಿಗೆ ಅಂತಾರಾಷ್ಟ್ರೀಯ ಮನ್ನಣೆಯನ್ನು ತಂದುಕೊಟ್ಟವರು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಚಿತ್ರಕಲಾ ಪರಿಷತ್ನಲ್ಲಿ ಹಮ್ಮಿಕೊಂಡಿದ್ದ ಸ್ವಪ್ನ ಬುಕ್ಹೌಸ್ ಪ್ರಕಾಶನದಿಂದ ಪ್ರಕಟಗೊಂಡ ಡಾ.ಎನ್.ಜಗದೀಶ್ ಕೊಪ್ಪ ಅವರು ರಚಿಸಿರುವ ಎಸ್.ಎಂ.ಕೃಷ್ಣ ಅವರ ಜೀವನಗಾಥೆ ಆಧರಿಸಿದ ನೆಲದ ಸಿರಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾಡಿನ ಹಿತಕ್ಕಾಗಿ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಸ್ಥಾನವನ್ನು ತ್ಯಾಗ ಮಾಡಲು ಮುಂದಾಗಿದ್ದರು ಎಂದು ಹೇಳಿದರು.
ಅವರ ರಾಜಕೀಯ ಜೀವನದಲ್ಲಿ ಸಾಕಷ್ಟು ಜನರಿಗೆ ಒಳ್ಳೆಯದನ್ನು ಮಾಡಿರುವುದು ಬಿಟ್ಟರೆ ಬೇರೆಯವರಿಗೆ ತೊಂದರೆ ಕೊಡಲಿಲ್ಲ. ರಾಜಕೀಯವಾಗಿ ನನ್ನಂತಹ ಹತ್ತಾರು ನಾಯಕರನ್ನು ಎಲ್ಲ ಸಮುದಾಯದಲ್ಲೂ ಬೆಳೆಸಿದ್ದಾರೆ ಎಂದರು.
ಮುಖ್ಯಮಂತ್ರಿಯಾಗಿ ನಾಲ್ಕೂವರೆ ವರ್ಷದ ಆಡಳಿತಾವಯಲ್ಲಿ ಎಸ್.ಎಂ.ಕೃಷ್ಣ ಅವರು ಇತಿಹಾಸ ಸೃಷ್ಟಿ ಮಾಡಿದ್ದಾರೆ. ಅವರು ಏನನ್ನು ತೆಗೆದುಕೊಂಡು ಹೋಗಲಿಲ್ಲ. ಅವರ ಆದರ್ಶ, ನಾಯಕತ್ವವನ್ನು ನೀಡಿದ್ದಾರೆ. ನನಗೆ ರಾಜಕೀಯ ಮರುಜನ್ಮ ನೀಡಿದವರು ಎಂದು ಹೇಳಿದರು.
ಅವರ ಆಡಳಿತ ಅವಧಿಯಲ್ಲಿ ರಾಜ್ಯವು ತೀವ್ರ ಬರ, ಕಾವೇರಿ ನೀರಿನ ಹಂಚಿಕೆ ಸಮಸ್ಯೆ, ವರನಟ ಡಾ.ರಾಜ್ಕುಮಾರ್ ಅಪಹರಣ, ಆರ್ಥಿಕ ಸಂಕಷ್ಟ ಇದ್ದರೂ ರಾಜ್ಯವು ಯಶಸ್ಸನ್ನು ಕಂಡಿತ್ತು. ಕೃಷ್ಣ ಅವರ ಕಾಲ ಎಂದು ಬಿಂಬಿಸುವಂತಾಯಿತು ಎಂದರು.
ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ವಿಕಾಸಸೌಧ, ಉದ್ಯೋಗಸೌಧ ಹಾಗೂ ಬೆಂಗಳೂರು ಮೆಟ್ರೊ ಯೋಜನೆ ಅವರ ಆಡಳಿತಾವಧಿಯ ಕೊಡುಗೆಗಳು ಎಂದು ಬಣ್ಣಿಸಿದರು.
ಶಾಲೆ ಬಿಡುವ ಮಕ್ಕಳನ್ನು ಮರಳಿ ಶಾಲೆಗೆ ತರಲು ದೇಶದಲ್ಲಿಯೇ ಮೊದಲ ಬಾರಿಗೆ ಮಧ್ಯಾಹ್ನ ಬಿಸಿಯೂಟ ಯೋಜನೆ ಜಾರಿಗೆ ತಂದರು. ಅದು ಈಗಲೂ ಮುಂದುವರೆದಿದೆ. ಹೆಣ್ಣುಮಕ್ಕಳ ಆರ್ಥಿಕ ಸಬಲೀಕರಣಕ್ಕಾಗಿ ಸ್ತ್ರೀ ಶಕ್ತಿ ಸಂಘಗಳ ಕಾರ್ಯಕ್ರಮಗಳನ್ನು ಜಾರಿಗೆ ತರಲಾಯಿತು. ಸುಮಾರು ನಾಲ್ಕೂವರೆ ಕೋಟಿ ಮಹಿಳೆಯರು ವಿವಿಧ ಸಂಘಗಳ ಸದಸ್ಯರಾಗಿದ್ದು, ಶೇ.95ರಷ್ಟು ಹಣ ಮರುಪಾವತಿಯಾಗುತ್ತಿದೆ.
ಗ್ರಾಮೀಣ ಹಾಗೂ ಬಡಜನರ ಆರೋಗ್ಯಕ್ಕಾಗಿ ಯಶಸ್ವಿನಿ ಯೋಜನೆಯನ್ನು ಜಾರಿಗೆ ತರಲಾಯಿತು. ಮೊದಲ ಬಾರಿಗೆ ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಲಾಯಿತು ಎಂದರು.
ವಿಮಾನ ನಿಲ್ದಾಣದ ಉದ್ಘಾಟನೆಗೆ ಬಂದಿದ್ದ ಆಗಿನ ಪ್ರಧಾನಿ ವಾಜಪೇಯಿ ಅವರು ಕೃಷ್ಣ ಅವರ ಆಡಳಿತದಿಂದಾಗಿ ವಿಶ್ವದ ನಾಯಕರು ಬೆಂಗಳೂರಿನತ್ತ ಗಮನಹರಿಸುವಂತಾಗಿದೆ ಎಂದು ಬಣ್ಣಿಸಿದ್ದರೆಂದು ಡಿ.ಕೆ.ಶಿವಕುಮಾರ್ ಸ್ಮರಿಸಿದರು.
ಭೂಮಿ ಯೋಜನೆ , ಪಾನೀಯ ನಿಗಮ ಅವರ ಕಾಲದಲ್ಲೇ ಸ್ಥಾಪನೆಯಾಯಿತು. ಅವರಿಗೆ ರಾಜ್ಯದ ಹಿತ ಮುಖ್ಯವಾಗಿತ್ತೇ ಹೊರತು ಬೇರೆನೂ ಇಲ್ಲ ಎಂದು ಹಲವು ನಿದರ್ಶನಗಳನ್ನು ನೀಡಿ ವಿಶ್ಲೇಷಿಸಿದರು.
ಅವರನ್ನು ಕುರಿತಾದ ನೆಲದಸಿರಿ ಪುಸ್ತಕ ಮುಂದಿನ ಪೀಳಿಗೆಗೆ ಮಾರ್ಗದರ್ಶಕವಾಗಿದೆ. ಅವರು ತಮ್ಮದೇ ಆದ ಇತಿಹಾಸವನ್ನು ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ನಿರ್ಮಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಹಿರಿಯ ಸಾಹಿತಿ ಡಾ.ಹಂಪಾನಾಗರಾಜಯ್ಯ, ಕೃತಿಕಾರ ಎನ್.ಜಗದೀಶ್ ಕೊಪ್ಪ, ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ.ಬಿ.ಎಲ್.ಶಂಕರ್, ಮಾಜಿ ಸಚಿವರಾದ ಡಾ.ಕೆ.ಸುಧಾಕರ್, ನಫೀಜ ಫಜಲ್, ವಿಧಾನಪರಿಷತ್ ಸದಸ್ಯರಾದ ಅ.ದೇವೇಗೌಡ, ದಿನೇಶ್ ಗೂಳಿಗೌಡ, ಡಿ.ಕೆ.ಶಿವಕುಮಾರ್ ಅವರ ಪತ್ನಿ ಉಷಾ, ಎಸ್.ಎಂ.ಕೃಷ್ಣ ಅವರ ಪತ್ನಿ ಪ್ರೇಮಾ ಕೃಷ್ಣ ಮತ್ತಿತರರು ಇದ್ದರು.