ಸಿದ್ದರಾಮಯ್ಯ ಗಿಮಿಕ್ ಮಾಡೋದನ್ನು ಬಿಟ್ಟು ಡಿಕೆಶಿ ಜೈಲಿಗೆ ಯಾಕೆ ಹೋದರೆಂದು ತಿಳಿಸಲಿ: ಸಚಿವ ಎಸ್.ಟಿ.ಸೋಮಶೇಖರ್

ಹಾನಗಲ್: ಸಿದ್ದರಾಮಯ್ಯ ಅವರು ಅಪಪ್ರಚಾರ ಮಾಡುವುದನ್ನು ಬಿಟ್ಟು ಡಿ.ಕೆ.ಶಿವಕುಮಾರ್ ಜೈಲಿಗೆ ಯಾಕೆ ಹೋದರು? ಐಟಿ ದಾಳಿ ಯಾಕೆ ಆಯಿತು ಎಂಬುದನ್ನು ಜನತೆಗೆ ತಿಳಿಸಲಿ ಎಂದು ಸಚಿವ ಎಸ್.ಟಿ.ಸೋಮಶೇಖರ್ ಸವಾಲು ಹಾಕಿದರು

ಹಾನಗಲ್‌ನಲ್ಲಿ ಪ್ರಚಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಯಡಿಯೂರಪ್ಪ ಅವರು ಭ್ರಷ್ಟಾಚಾರ ಮಾಡಿದ್ದಾರೆ ಎಂದಾದರೆ ತನಿಖೆಗೆ ಲೋಕಾಯುಕ್ತ, ಐಟಿ ಇದೆ. ಲಿಖಿತವಾಗಿ ದೂರು ಕೊಡಲಿ, ಆದರೆ ಯಾವ ದೂರು ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.

ಸೋಲುವುದು ಗೊತ್ತಾಗುತ್ತಿದ್ದಂತೆ ಈ ರೀತಿ ಗಿಮಿಕ್ ಮಾಡ್ತಾರೆ. ಗೃಹ ಸಚಿವರಾಗಿ, ನೀರಾವರಿ ಸಚಿವರಾಗಿ ಈಗ ಮುಖ್ಯಮಂತ್ರಿ ಆಗಿರುವ ಬಸವರಾಜ್ ಬೊಮ್ಮಾಯಿ‌ ಅವರ ಮೇಲೆ ಯಾವುದಾದರೂ ಆರೋಪವಿದೆಯೇ ಜನರಿಗೆ ಒಳ್ಳೆ ಕೆಲಸ ಮಾಡಬೇಕೆಂದು ಬಂದಿದ್ದಾರೆ. ಮೋದಿ ಅವರಿಗೆ ವಿಶ್ವದಲ್ಲಿ ಒಳ್ಳೆ ಹೆಸರಿದೆ. ಭಾರತಕ್ಕೆ ಹೆಸರು ತಂದುಕೊಟ್ಟವರು ಎಂದರು.

ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಹಣ ಹಂಚಿಕೆ ಮಾಡಲಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಚುನಾವಣೆಯಲ್ಲಿ ಬಿಜೆಪಿ ಹಣ ಹಂಚುವ ಕೆಲಸ ಮಾಡಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಪ್ರಕಾರ ಮತಯಾಚಿಸುತ್ತೇವೆ ಹೊರತು ಮತದಾರರಿಗೆ ಹಣ ಹಂಚುವ ಕೆಲಸ ಮಾಡಿಲ್ಲ. ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಒಬ್ಬರಿಗೊಬ್ಬರಿಗೆ ಬಗೆಹರಿಯುತ್ತಿಲ್ಲ. ಅವರದ್ದು ಬಗೆಹರಿಸಿಕೊಳ್ಳಲು ಹೊಸ ಹೊಸದನ್ನು ಹುಡುಕುತ್ತಾರೆ ಎಂದು ಹೇಳಿದರು.

ಹಾನಗಲ್ ಕ್ಷೇತ್ರದಲ್ಲಿ ಸಿ.ಎಂ.ಉದಾಸಿ ಅವರು ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ‌ ಅವರು ಕೂಡ ಹಲವು ಹೊಸ ಹೊಸ ಕಾರ್ಯಕ್ರಮಗಳನ್ನು ಮಾಡಲು ಉಮ್ಮಸ್ಸು ಹೊಂದಿದ್ದಾರೆ ಎಂದರು.

ಪಕ್ಷದ ಪರ ಮನೆಮನೆ ಪ್ರಚಾರ ಮಾಡಲಾಗುವುದು. ಮುಖ್ಯಮಂತ್ರಿಗಳು ಮತ್ತು ಸಚಿವ ಬಿ.ಸಿ.ಪಾಟೀಲ್ ಅವರು ಇದೇ ಜಿಲ್ಲೆಯವರಾದ್ದರಿಂದ ಬಿಜೆಪಿ ಗೆಲುವು ಸಾಧಿಸಲಿದೆ. ಜನರು ಸಹ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದು ಅದನ್ನು ಮುಖ್ಯಮಂತ್ರಿಗಳು ಈಡೇರಿಸಲಿದ್ದಾರೆ ಎಂದು ಭರವಸೆ ನೀಡಿದರು.

ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌ಗಳಿಗೆ ನೋಟಿಸ್ ನೀಡಿ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ

ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ನಲ್ಲಿ ಜಿಲ್ಲೆಯ ಎಲ್ಲರಿಗೂ ಸಾಲ ನೀಡದೆ ಕೇವಲ ಎರಡು ಮೂರು ಕ್ಷೇತ್ರದವರಿಗಷ್ಟೇ ಸಾಲ‌ ನೀಡುತ್ತಿದ್ದಾರೆ ಎಂಬ ದೂರುಗಳು ಬಂದಿವೆ. ಈ ಕುರಿತು ಸಭೆ ಕೂಡ ಮಾಡಲಾಗಿದೆ. ಕೋಲಾರ ಡಿಸಿಸಿ ಬ್ಯಾಂಕ್ ಗೆ ನೋಟಿಸ್ ನೀಡಿ ಕ್ರಮಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದರು.

ತುಮಕೂರು ಡಿಸಿಸಿ ಬ್ಯಾಂಕ್ ನಲ್ಲಿ ಕೂಡ ಸರಿಯಾಗಿ ಸಾಲ ಕೊಡುತ್ತಿಲ್ಲ ಎಂದು ದೂರು ಬಂದಿದ್ದು ತನಿಖೆ ಮಾಡಲಾಗುತ್ತಿದೆ. ಉಳಿದಂತೆ 19 ಡಿಸಿಸಿ ಬ್ಯಾಂಕ್ ಗಳು ಅಲ್ಪಾವಧಿ, ದೀರ್ಘಾವಧಿ ಸಾಲ ನೀಡುತ್ತಿವೆ. ಎಸ್‌ಸಿ, ಎಸ್‌ಟಿ, ಒಬಿಸಿ ಸೇರಿದಂತೆ ಎಲ್ಲಾ ಜನಾಂಗದವರಿಗೆ ಸಾಲ ನೀಡಬೇಕೆಂದು ಹೇಳಲಾಗಿದೆ. 20,810 ಕೋಟಿ ರೂ. ಕೃಷಿ ಸಾಲವನ್ನು 30.86 ಲಕ್ಷ ರೈತರಿಗೆ ವಿತರಿಸುವ ಗುರಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

× Chat with us