ಶೇ.೪೦ ರಷ್ಟು ಕಮಿಷನ್ ಆರೋಪ ಸಾಬೀತು
ಮೈಸೂರು: ರಾಜ್ಯ ಸರ್ಕಾರದ ವಿರುದ್ಧ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಮೈಸೂರು ನಗರದಲ್ಲಿ ವಿವಿಧ ಖಾಸಗಿ ಕಾರ್ಯಕ್ರದಲ್ಲಿ ಭಾಗಿಯಾಗಲು ವಿಶೇಷ ವಿಮಾನದ ಮೂಲಕ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ವೇಳೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಇದು 40% ಸರ್ಕಾರ ಎಂಬುದು ಎಂದೋ ಸಾಬೀತಾಗಿದೆ. ಈ ಕುರಿತು ಹಲವಾರು ಗುತ್ತಿಗೆದಾರರು ಪ್ರಧಾನಿಗೇ ಪತ್ರ ಬರೆದಿದ್ದಾರೆ. ಬಿಜೆಪಿಯವರು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಇದೀಗ ಪತ್ರಕರ್ತರಿಗೇ ಗಿಫ್ಟ್ ಕೊಟ್ಟಿದ್ದಾರೆ.
ಇವರ ಹಗರಣಗಳನ್ನು ಬಿಂಬಿಸದಂತೆ ಕೋರಲು ಪತ್ರಕರ್ತರಿಗೆ ಗಿಫ್ಟ್ ರೂಪದಲ್ಲಿ ಹಣ ಹಂಚಿಕೆ ಮಾಡಿದ್ದಾರೆ. ಈ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು. ಪತ್ರಕರ್ತರಿಗೆ ಹಂಚಿಕೆಯಾಗಿರುವ ಹಣದ ಮೂಲವನ್ನು ಪತ್ತೆ ಹಚ್ಚಬೇಕು. ಬಿಜೆಪಿಯವರು ಮಹಾನ್ ಭ್ರಷ್ಟರು, ಭಂಡರಾಗಿದ್ದು, ಅವರ ತಪ್ಪನ್ನೂ ಸಮರ್ಥಿಸಿಕೊಳ್ಳುವಂತಹ ಕೀಳು ಮಟ್ಟಕ್ಕೆ ಇಳಿದಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿಯವರು ಸುಳ್ಳಿನ ಫ್ಯಾಕ್ಟರಿ ಇಟ್ಟಿದ್ದಾರೆ. ಆರ್ ಎಸ್ ಎಸ್ ಸುಳ್ಳಿನ ಫ್ಯಾಕ್ಟರಿಯ ರೂವಾರಿಯಾಗಿದೆ. ಆರ್ ಎಸ್ ಎಸ್ ನಾಯಕರು ಹೇಳಿದಂತೆ ಬಿಜೆಪಿ ನಾಯಕರು ಕೇಳುತ್ತಿದ್ದಾರೆ. ಆರ್ ಎಸ್ ಎಸ್ ನವರು ನನ್ನನ್ನು ಟಾರ್ಗೆಟ್ ಮಾಡುವಂತೆ ಬಿಜೆಪಿಯವರಿಗೆ ಹೇಳಿಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ಶ್ರೀರಾಮುಲು ಕೂಡಾ ಆರ್ ಎಸ್ ಎಸ್ ನವರು ಹೇಳಿಕೊಟ್ಟಿದ್ದನ್ನೇ ಹೇಳ್ತಿದಾನೆ. ನಳಿನ್ ಕುಮಾರ್ ಕಟೀಲ್ ಯಾವುದೇ ಹೋರಾಟ ಮಾಡಿದವನಲ್ಲ. ಅವನೊಬ್ಬ ಜೋಕರ್ ಇದ್ದಂತೆ ಎಂದು ಹೇಳಿದರು.