ಬೆಂಗಳೂರು : ಉರಿಗೌಡರು ನಂಜೇಗೌಡರು ಟಿಪ್ಪುವನ್ನು ಕೊಂದಂತೆ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕು ಎಂದು ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಅಶ್ವತ್ಥ ನಾರಾಯಣ ಹೇಳಿಕೆ ನೀಡಿದ್ದರು. ಈ ಸಂಬಂಧ ಮೈಸೂರಿನಲ್ಲಿ ಎಫ್ಐಆರ್ ದಾಖಲಾಗಿದ್ದು ಅಶ್ವತ್ಥ ನಾರಾಯಣ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಚಾರದಲ್ಲಿ ಸಿದ್ದರಾಮಯ್ಯ ಅವರಿಗೆ ಇದ್ದ ಟಿಪ್ಪು ಪ್ರೇಮವನ್ನು ಖಂಡಿಸಿದ್ದೇನೆ. ಕಾಂಗ್ರೆಸ್ ಪಕ್ಷವನ್ನು ಚುನಾವಣೆಯಲ್ಲಿ ಸೋಲಿಸಬೇಕು ಎಂಬ ಚಿಂತನೆಯಲ್ಲಿ ಹೇಳಿದ್ದೆ.
ವೈಯಕ್ತಿಕವಾಗಿ ನನಗೆ ಸಿದ್ದರಾಮಯ್ಯ ಮೇಲೆ ಗೌರವ ಇದೆ. ಸೈದ್ದಾಂತಿಕವಾಗಿ ನಮಗೂ ಅವರಿಗೂ ಬಹಳ ವ್ಯತ್ಯಾಸ ಇದೆ. ನಾನು ಸದನದಲ್ಲಿ ಕೂಡಾ ಸ್ಪಷ್ಟವಾಗಿ ಹೇಳಿಕೆ ಕೊಟ್ಟಿದ್ದೇನೆ ಎಂದರು.ನನ್ನ ರಾಜಕೀಯ ಜೀವನದಲ್ಲಿ ಇದುವರೆಗೂ ಯಾರಿಗೂ ಹಾನಿ ಮಾಡಿಲ್ಲ. ಸಿದ್ದರಾಮಯ್ಯ ಮನಸ್ಸಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುವುದಾಗಿಯೂ ಹೇಳಿದ್ದೆ. ಇದ್ದಕ್ಕಿದ್ದಂತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆಯೇ ನನ್ನ ಹೇಳಿಕೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಸಿಎಂ ಮತ್ತು ಡಿಸಿಎಂ ಸಭೆ ತೆಗೆದುಕೊಂಡು ಪೊಲೀಸರಿಗೆ ಯಾಕೆ ಕೇಸ್ ದಾಖಲು ಮಾಡಿಲ್ಲ ಎಂದು ಕೇಳಿದ್ದಾರೆ.
ಅದನ್ನು ಕೊಲೆ ಯತ್ನ ಎಂದು ಬಿಂಬಿಸಿದ್ದಾರೆ. ಅವರ ಗ್ಯಾರಂಟಿ ಅನುಷ್ಠಾನ ಮಾಡುವುದು ಬಿಟ್ಟು, ಸಮಯವನ್ನು ದ್ವೇಷದ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ. ನನ್ನ ಮೇಲೆ ಕೆಂಡ ಕಾರುವುದು ಒಳ್ಳೆಯದಲ್ಲ. ನಾವು ಅಧಿಕಾರದಲ್ಲಿ ಯಾವತ್ತೂ ದ್ವೇಷದ ರಾಜಕೀಯ ಮಾಡಿಲ್ಲ. ನಾವು ಯಾವತ್ತು ಇವರ ಮೇಲೆ ವೈಯಕ್ತಿಕ ಕೇಸ್ ದಾಖಲು ಮಾಡಿಲ್ಲ. ಹೆದರಿಸಲು ಈ ರೀತಿ ಕೇಸ್ ದಾಖಲಿಸಿದ್ದಾರೆ. ರಾಜಕೀಯ ಪಕ್ಷವಾಗಿ, ವೈಯಕ್ತಿಕವಾಗಿ ನಾವು ಇದಕ್ಕೆ ಉತ್ತರ ಕೊಡುತ್ತೇವೆ. ಇವರ ಹಿತ್ತಲು ಗಬ್ಬು ನಾರುತ್ತಿದೆ, ಇವರು ಬಂದ ದಾರಿ ಗೊತ್ತಿದೆ. ಇವರ ಬಾಲ ಮತ್ತೆ ಸೊಟ್ಟಕ್ಕಿದೆ, ಅದೇ ಬುದ್ದಿ ಇದೆ. ಒಳ್ಳೆಯ ಕೆಲಸ ಮಾಡಿ, ಅಧಿಕಾರ ದುರ್ಬಳಕೆಯ ಕೆಲಸದಿಂದ ಆಚೆ ಬನ್ನಿ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಅವರು ಏನೇನು ಅಧಿಕಾರ ದುರ್ಬಳಕೆ ಮಾಡಿಕೊಳ್ಳಬೇಕು ಅಂತಿದ್ದಾರೋ ಮಾಡಲಿ. ಮೊನ್ನೆ ಸಭೆಯಲ್ಲಿ ಅಧಿಕಾರಿಗಳನ್ನು ಬಾಯಿಗೆ ಬಂದಂತೆ ತರಾಟೆಗೆ ತೆಗೆದುಕೊಂಡಿದ್ದಾರೆ. ತುಷ್ಟೀಕರಣದ ರಾಜಕೀಯ ಮಾಡುತ್ತೇವೆ, ನಮ್ಮ ಒರಿಜಿನಲ್ ಬುದ್ದಿಯನ್ನೇ ತೋರಿಸುತ್ತೇವೆ ಅಂತಾ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯನವರಿಗೆ ಇಷ್ಟೆಲ್ಲಾ ಹಿರಿತನ ಅನುಭವ ಇದ್ದು ಈ ರೀತಿ ದುರ್ಬಳಕೆ ಎಷ್ಟು ಸರಿ? ಸಿಎಂ ಉಪಸ್ಥಿತಿಯಲ್ಲಿ ಡಿಸಿಎಂ ಸಭೆಯಲ್ಲಿ ಹೇಳಿಕೆ ಕೊಡುವುದು ಎಷ್ಟರ ಮಟ್ಟಿಗೆ ಸರಿ? ಹೃದಯವಂತಿಕೆ, ಪ್ರೀತಿ ವಿಶ್ವಾಸ ಇರಬೇಕು. ಹೃದಯವಂತಿಕೆ ಬಿಟ್ಟು ಅಧಿಕಾರ ದುರ್ಬಳಕೆಯನ್ನು ನಾವು ರಾಜಕೀಯವಾಗಿ ಎದುರಿಸುತ್ತೇವೆ. ಅಧಿಕಾರ ಇವರ ತಲೆಗೆ ಹೋಗಿದೆ. ದುರಹಂಕಾರದ ಮಾತುಗಳಿಂದ ಅವರು ಆಚೆ ಬರಬೇಕು ಎಂದರು.