ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75ನೇ ಹುಟ್ಟುಹಬ್ಬವನ್ನು ಅವರ ಕಾರ್ಯಕ್ರಮ ಯಶಸ್ವಿಯಾಗಿದೆ. ಸಿದ್ದರಾಮಯ್ಯನವರ ಅಮೃತ ಮಹೋತ್ಸಕ್ಕೆ ರಾಜ್ಯದ ಮೂಲೆ-ಮೂಲೆಗಳಿಂದ ಜನಸಾಗರವೇ ಹರಿದುಬಂದಿತ್ತು.
ಅದರಲ್ಲೂ ದಾವಣೆಗರೆಯಲ್ಲಿ ಸಿದ್ದರಾಮಯ್ಯನವರ ಬ್ಯಾನರ್, ಬಟ್ಟಿಂಗ್ಸ್ ರಾರಾಜಿಸಿದ್ದವು. ಇತ್ತ, ಬೆಂಗಳೂರಿನಲ್ಲಿ ಸಿದ್ದರಾಮಯ್ಯನವರಿಗೆ ಶುಭಕೋರಿ ಬ್ಯಾನರ್ ಹಾಕಿದ್ದವರಿಗೆ ಬಿಬಿಎಂಪಿ ಅಧಿಕಾರಿಗಳು ಬಿಗ್ ಶಾಕ್ ಕೊಟ್ಟಿದ್ದಾರೆ.
ಹೌದು..ಸಿದ್ದರಾಮಯ್ಯನವರ ಜನ್ಮದಿನಕ್ಕೆ ಶುಭಾಶಯ ಕೋರಿ ಬೆಂಗಳೂರಿನಲ್ಲಿ ಬ್ಯಾನರ್ ಹಾಕಿದ್ದ ಕಾಂಗ್ರೆಸ್ ಮುಖಂಡರ ವಿರುದ್ಧ ದೂರು ದಾಖಲಾಗಿದೆ. ಪಾಲಿಕೆಯಿಂದ ಅನುಮತಿ ಪಡೆಯದೆ ಬೃಹತ್ ಬ್ಯಾನರ್ ಅಳವಡಿಸಿದ್ದವರ ವಿರುದ್ಧ ಬಿಬಿಎಂಪಿ ಅಧಿಕಾರಿಗಳು ವಿಧಾನಸೌಧ ಠಾಣೆಗೆ ದೂರು ನೀಡಿದ್ದಾರೆ.
ವಸಂತನಗರ ಉಪ ವಿಭಾಗ ಪಾಲಿಕೆ ಸಹಾಯಕ ಕಂದಾಯ ಅಧಿಕಾರಿ ಬಿ.ವಿ. ವೀಣಾ, ದೂರು ನೀಡಿದ್ದಾರೆ. ಇದರ ಮೇರೆಗೆ ಕಾಂಗ್ರೆಸ್ ಮುಖಂಡರಾದ ಟಿ.ಎಸ್. ರಮೇಶ್ ಬಾಬು ಮತ್ತು ಜಯಬಾಲ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಗರದ ಚಾಲುಕ್ಯ ಜಂಕ್ಷನ್‌ನಲ್ಲಿ ಸಿದ್ದರಾಮಯ್ಯ ಅವರ ಹುಟ್ಟುಹಬ್ಬದ ಸಲುವಾಗಿ ಬೃಹತ್ ಬ್ಯಾನರ್ ಅಳವಡಿಸಲಾಗಿದೆ. ಪಾಲಿಕೆಯಿಂದ ಅನುಮತಿ ಪಡೆದಿಲ್ಲ. ಇದರಿಂದ ಬೆಂಗಳೂರು ನಗರ ಸೌಂದರ್ಯಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.