ನವದೆಹಲಿ : ಈ ಬಾರಿ ಜೂನ್ನಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಆದರೆ ಒಟ್ಟಾರೆ ಮಳೆಗಾಲದಲ್ಲಿ ಮುಂಗಾರು ಸಾಮಾನ್ಯವಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐಎಂಡಿಯ ಪರಿಸರ ಮೇಲ್ವಿಚಾರಣೆ ಮತ್ತು ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಿ. ಶಿವಾನಂದ ಪೈ, ‘ಜೂನ್ನಲ್ಲಿ ದಕ್ಷಿಣದ ಪರ್ಯಾಯ ಪ್ರಸ್ಥಭೂಮಿ, ವಾಯವ್ಯ ಭಾರತ, ತುದಿಯ ಉತ್ತರ ಭಾರತದ ಕೆಲ ಹಾಗೂ ಇತರ ಪ್ರದೇಶಗಳನ್ನು ಹೊರತುಪಡಿಸಿ ದೇಶದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಪ್ರಮಾಣದ ಮಳೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ’ ಎಂದರು.
ಅಲ್ಲದೆ, ‘ಎಲ್ ನಿನೋ ಪ್ರಭಾವದ ಕಾರಣ ಫೆಸಿಫಿಕ್ ಸಾಗರದ ಸಮಭಾಜಕ ವೃತ್ತದ ಪ್ರದೇಶದಲ್ಲಿನ ಹೆಚ್ಚಿನ ತಾಪಮಾನ ಇದ್ದರೂ ನೈಋತ್ಯ ಮುಂಗಾರು ಕೂಡ ಸಾಮಾನ್ಯವಾಗಲಿದೆ. ಮಾನ್ಸೂನ್ ಮಳೆಯನ್ನೇ ಅವಲಂಬಿಸಿರುವ ಕೃಷಿ ವಲಯಗಳಲ್ಲಿ ಮಳೆ ಸಾಮಾನ್ಯವಾಗಿರಲಿದ್ದು ಈ ಬಾರಿಯ ಮಳೆ ಸರಾಸರಿ ಪ್ರಮಾಣ ಶೇ. 94 ರಿಂದ 106 ರಷ್ಟು ಇರಲಿದೆ’ ಎಂದರು.
ಎಲ್ ನಿನೋ – ಲಾ ನಿನಾ : ದಕ್ಷಿಣ ಅಮೆರಿಕ ಸಮೀಪ ಪೆಸಿಫಿಕ್ ಸಾಗರದಲ್ಲಿ ನೀರು ಬಿಸಿ ಆಗುತ್ತದೆ. ಇದಕ್ಕೆ ‘ಎಲ್ ನಿನೋ’ ಎನ್ನುತ್ತಾರೆ. ಇದು ಮುಂಗಾರು ಮಾರುತಗಳನ್ನು ದುರ್ಬಲಗೊಳಿಸುತ್ತದೆ. ಇನ್ನು ದಕ್ಷಿಣ ಅಮೆರಿಕ ಸಮೀಪ ಪೆಸಿಫಿಕ್ ಸಾಗರದಲ್ಲಿ ನೀರು ತಣ್ಣಗಾಗುತ್ತದೆ. ಇದಕ್ಕೆ ‘ಲಾ ನಿನಾ’ ಎನ್ನುತ್ತಾರೆ. ಇದು ಮುಂಗಾರು ಮಾರುತಗಳಿಗೆ ಬಲ ನೀಡಿ ಭಾರತಕ್ಕೆ ಉತ್ತಮ ಮಳೆ ಸುರಿಸುತ್ತದೆ. ಲಾ ನಿನಾ ಪ್ರಭಾವದ ಕಾರಣ 2019ರಿಂದ ಭಾರತದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಆಗುತ್ತಿದೆ. 2019ರಲ್ಲಿ 971.8 ಮಿ.ಮೀ., 2020ರಲ್ಲಿ 961.4 ಮಿ.ಮೀ., 2021ರಲ್ಲಿ 874 ಮಿ.ಮೀ., ಹಾಗೂ 2022ರಲ್ಲಿ 924.8 ಮಿ.ಮೀ. ಮಳೆ ಆಗಿತ್ತು.
ಮಳೆ ಮಾಪನಗಳು : ಶೇ.90 ರಿಂದ 95ರಷ್ಟು ಮಳೆ ಸುರಿದರೆ ಅದನ್ನು ಸಾಮಾನ್ಯಕ್ಕಿಂತ ಕಡಿಮೆ ಮಳೆ ಎನ್ನುತ್ತಾರೆ. ಶೇ.96 ರಿಂದ ಶೇ.104ರ ನಡುವೆ ಮಳೆ ಆದರೆ ಸಾಮಾನ್ಯ ಮುಂಗಾರು ಎನ್ನುತ್ತಾರೆ. ಶೇ.105ರಿಂದ ಶೇ.110 ಮಳೆ ಸುರಿದರೆ ಸಾಮಾನ್ಯಕ್ಕಿಂತ ಹೆಚ್ಚು ಎಂದು ಶೇ.110ಕ್ಕಿಂತ ಅಧಕ ಮಳೆ ಆದರೆ ಹೆಚ್ಚುವರಿ ಮಳೆ ಎನ್ನುತ್ತಾರೆ.