ರಾಜ್ಯ

ಅಧಿವೇಶನ | ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ದೀರ್ಘ ಚರ್ಚೆಯಾಗಲಿ : ಪ್ರತಿಪಕ್ಷ ನಾಯಕ ಆರ್‌.ಅಶೋಕ

ಬೆಂಗಳೂರು : ಈ ಬಾರಿಯ ಅಧಿವೇಶನವನ್ನು 8 ದಿನಗಳ ಬದಲು 20 ದಿನಗಳ ಕಾಲ ನಡೆಸಬೇಕು ಹಾಗೂ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಹೆಚ್ಚು ಚರ್ಚೆ ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ಅಧಿವೇಶನ ಸಂಬಂಧ ನಡೆದ ಬಿಜೆಪಿ-ಜೆಡಿಎಸ್‌ ಸಮನ್ವಯ ಸಮಿತಿ ಸಭೆ ಬಳಿಕ, ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬಿಜೆಪಿ ಮತ್ತು ಜೆಡಿಎಸ್‌ ಒಂದಾಗಿ ಕೆಲಸ ಮಾಡುತ್ತಿದ್ದೇವೆ. ಮುಡಾ ಹಗರಣ, ವಾಲ್ಮೀಕಿ ನಿಗಮದ ಹಗರಣ, ಕಾಲ್ತುಳಿತ ಪ್ರಕರಣ ಸೇರಿದಂತೆ ಹಲವಾರು ಹೋರಾಟಗಳಲ್ಲಿ ಒಂದಾಗಿ ಕೆಲಸ ಮಾಡಿದ್ದೇವೆ. ವಿಧಾನಸಭೆ ಹಾಗೂ ವಿಧಾನಪರಿಷತ್‌ನಲ್ಲಿ ಎರಡೂ ಪಕ್ಷಗಳು ಕಿವಿ ಹಿಂಡುವ ಕೆಲಸ ಮಾಡಿವೆ. ಈಗ ಬೆಳಗಾವಿ ಅಧಿವೇಶನದಲ್ಲಿ ಯಾವೆಲ್ಲ ವಿಷಯಗಳನ್ನು ಪ್ರಸ್ತಾಪಿಸಬೇಕೆಂದು ಚರ್ಚಿಸಲಾಗಿದೆ. ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹಾಗೂ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಸಲಹೆಗಳನ್ನು ಪಡೆಯಲಾಗಿದೆ ಎಂದರು.

ಈ ಬಾರಿಯ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಬಗ್ಗೆ ಚರ್ಚೆಯಾಗಬೇಕಿದೆ. ಆದರೆ ಕೇವಲ ಬೆಂಗಳೂರು ಸಂಬಂಧಿತ ಮಸೂದೆಗಳನ್ನು ತರುತ್ತಿದ್ದಾರೆ. ಹೀಗಾದರೆ ಉತ್ತರ ಕರ್ನಾಟಕದಲ್ಲಿ ಅಧಿವೇಶನ ನಡೆಸುವ ಅಗತ್ಯವಿಲ್ಲ. ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕಿದೆ. 8 ದಿನದ ಬದಲು 20 ದಿನಗಳ ಕಾಲ ಅಧಿವೇಶನ ನಡೆಸಬೇಕೆಂದು ಒತ್ತಾಯಿಸುತ್ತಿದ್ದೇವೆ. ಕಳೆದ ಸಲ ಕೊನೆಯ ಎರಡು-ಮೂರು ದಿನ ಉತ್ತರ ಕರ್ನಾಟಕದ ಬಗ್ಗೆ ಚರ್ಚೆಗೆ ಅವಕಾಶ ನೀಡಲಾಗಿತ್ತು. ನಂತರ ಸಿಎಂ ಸಿದ್ದರಾಮಯ್ಯ ಒಂದಷ್ಟು ಭರವಸೆಗಳನ್ನು ನೀಡಿದ್ದರು. ಅದನ್ನು ಇಂದಿಗೂ ಈಡೇರಿಸಿಲ್ಲ ಎಂದರು.

ಇದನ್ನೂ ಓದಿ:-ಮೈಸೂರು | ಡಿ.1 ರಿಂದ ಒನ್ ನೇಷನ್ ಒನ್ ಕಾರ್ಡ್ ಜಾರಿ : ಸಾರಿಗೆ ಸಚಿವ ರಾಮಲಿಂಗರೆಡ್ಡಿ

ತುಂಗಭದ್ರಾ ಜಲಾಶಯದ ಗೇಟ್‌ ದುರಸ್ತಿಯ 12 ಕೋಟಿ ರೂ. ಬಿಲ್‌ ಇನ್ನೂ ಪಾವತಿಸಿಲ್ಲ. ಇದರಿಂದಾಗಿ ಗುತ್ತಿಗೆದಾರರು ಕೆಲಸ ಸ್ಥಗಿತಗೊಳಿಸಿದ್ದಾರೆ. ಒಟ್ಟು 32 ಗೇಟ್‌ಗಳನ್ನು ಅಳವಡಿಸಬೇಕಿದೆ. ಎರಡನೇ ಬೆಳೆಗೆ ರೈತರಿಗೆ ನೀರು ದೊರೆಯುತ್ತಿಲ್ಲ. ಎಕರೆಗೆ 25,000 ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಲಾಗಿದೆ. ಈಗಿನ ಸನ್ನಿವೇಶ ನೋಡಿದರೆ ಮುಂದಿನ ವರ್ಷಕ್ಕೂ ನೀರು ಸಿಗುವುದಿಲ್ಲ ಎನ್ನಿಸಿದೆ. ಈ ಸರ್ಕಾರ ಉತ್ತರ ಕರ್ನಾಟಕದ ರೈತರಿಗೆ ಮೋಸ ಮಾಡಿದೆ. ಜೊತೆಗೆ ಕಬ್ಬು ಬೆಳೆಗಾರರ ಸಮಸ್ಯೆ ಆಲಿಸಿಲ್ಲ. ಮೆಕ್ಕೆಜೋಳದ ಖರೀದಿ ಕೇಂದ್ರ ಆರಂಭಿಸಿಲ್ಲ. ಈ ಎಲ್ಲ ವಿಷಯಗಳನ್ನು ಮೊದಲಿಗೆ ಚರ್ಚೆ ಮಾಡಬೇಕಿದೆ. ಈ ಬಗ್ಗೆ ಎರಡೂ ಸದನದಲ್ಲಿ ಚರ್ಚಿಸಲಾಗುವುದು ಎಂದರು.

ಬಡವರ ಬಿಪಿಎಲ್‌ ಕಾರ್ಡುಗಳನ್ನು ರದ್ದು ಮಾಡಲಾಗಿದೆ. ಈ ಮೂಲಕ ಗ್ಯಾರಂಟಿಗಳನ್ನು ತಪ್ಪಿಸಬಹುದು ಎಂದು ಸರ್ಕಾರ ಅಂದುಕೊಂಡಿದೆ. ಬಿಜೆಪಿ ಇದ್ದಾಗ ಬಗರ್‌ಹುಕುಂ ಸಾಗುವಳಿಗೆ ಮಂಜೂರಾತಿ ನೀಡಲಾಗಿತ್ತು. ಕಾಂಗ್ರೆಸ್‌ ಬಂದ ನಂತರ ಈ ಕೆಲಸ ಆಗಿಲ್ಲ. ಕಾನೂನು ಸುವ್ಯವಸ್ಥೆ ಹಾಳಾಗಿದ್ದು, ಜೈಲುಗಳಲ್ಲಿ ಮದ್ಯ ತಯಾರಿ ಕೇಂದ್ರ ಆರಂಭವಾಗಿದೆ. ಭಯೋತ್ಪಾದಕ ಕೈದಿಗಳ ಕೈಗೆ ಮೊಬೈಲ್‌ ಬಂದಿದೆ. ಆದರೆ ಗೃಹಸಚಿವರು ಈ ವೀಡಿಯೋ ಸೋರಿಕೆ ಮಾಡಿದವರನ್ನು ಪತ್ತೆ ಮಾಡಲು ಪ್ರಯತ್ನಿಸಿದ್ದಾರೆ. ಇಷ್ಟು ದಿನ ಕಳ್ಳರು ದರೋಡೆ ಮಾಡುತ್ತಿದ್ದರೆ, ಈಗ ಪೊಲೀಸರೇ ದರೋಡೆಗೆ ಇಳಿದಿದ್ದಾರೆ. ಹಗಲಿನಲ್ಲೇ ರಾಜಧಾನಿಯಲ್ಲಿ 7 ಕೋಟಿ ರೂ. ದರೋಡೆಯಾಗಿದೆ ಎಂದರು.

ಸರ್ಕಾರಿ ಶಾಲೆಗಳ ದುಸ್ಥಿತಿ, ಶಿಕ್ಷಕರ ನೇಮಕ, ಬೆಂಗಳೂರಿನಲ್ಲಿ ಗುಂಡಿ ರಸ್ತೆಗಳಿಂದಾಗಿ ಜನರ ಮರಣ ಮೊದಲಾದ ವಿಷಯಗಳ ಬಗ್ಗೆ ಚರ್ಚೆ ಮಾಡಲಾಗುವುದು. ಪೊಲೀಸ್‌ ಠಾಣೆಗಳಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ. ಈ ಬಗ್ಗೆ ಸರ್ಕಾರಕ್ಕೆ ಚಾಟಿ ಬೀಸುತ್ತೇವೆ ಎಂದರು.

ಸಿಎಂ ಯಾರೆಂದು ಗೊತ್ತಿಲ್ಲ
ಸಿಎಂ ಯಾರೆಂದು ಗೊತ್ತಾಗದೆ ಇಬ್ಬರೂ ನಾಯಕರ ನಡುವೆ ಕಾದಾಟ ಜೋರಾಗಿದೆ. ಸಿದ್ದರಾಮಯ್ಯ ಎಂದರೆ ಮಾತು ತಪ್ಪಿದವರು ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಇದರಿಂದಾಗಿ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ. ಸರ್ಕಾರದಲ್ಲಿ ಎಲ್ಲರೂ ಕೆಲಸ ಮಾಡುವುದನ್ನು ಬಿಟ್ಟು ಸಿಎಂ ಯಾರೆಂದು ಚರ್ಚಿಸುತ್ತಿದ್ದಾರೆ. ಬ್ರೇಕ್‌ಫಾಸ್ಟ್‌ ಮೀಟಿಂಗ್‌ನಲ್ಲಿ ಜಗಳ ಬಿಟ್ಟು ಬೇರೇನೂ ಆಗುವುದಿಲ್ಲ. ಅಧಿಕಾರ ಹಂಚಿಕೆ ಒಪ್ಪಂದದ ಕುರಿತು ಡಿ.ಕೆ.ಶಿವಕುಮಾರ್‌ ನೇರವಾಗಿ ಹೇಳಿದ್ದು, ಈ ಬಗ್ಗೆ ದುರ್ಬಲ ಹೈಕಮಾಂಡ್‌ ಪ್ರತಿಕ್ರಿಯೆ ನೀಡುತ್ತಿಲ್ಲ. ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ವಿದೇಶಕ್ಕೆ ಪಲಾಯನ ಮಾಡಿದ್ದಾರೆ ಎಂದರು.

ಆಂದೋಲನ ಡೆಸ್ಕ್

Recent Posts

ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್!

ನವದೆಹಲಿ: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ…

13 mins ago

ಎಸ್‌ಐಆರ್‌ ವಿರುದ್ಧ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

ಬೆಂಗಳೂರು: ದೇಶಾದ್ಯಂತ ತೀವ್ರ ವಿವಾದ ಸೃಷ್ಟಿಸಿರುವ ಮತದಾರರ ಪಟ್ಟಿ ಪರಿಷ್ಕರಣೆ(ಎಸ್‍ಐಆರ್) ಸಂಬಂಧ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‍ಕುಮಾರ್ ವಜಾ ಮತ್ತು…

1 hour ago

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌ಗೆ ಮತ್ತೆ ಶಾಕ್‌

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ಗೆ ಕಾನೂನು ಸಂಕಷ್ಟಗಳು ಮತ್ತಷ್ಟು ಬಿಗಿಯಾಗುತ್ತಿವೆ.…

2 hours ago

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ: 75ನೇ ವಯಸ್ಸಿನಲ್ಲಿ ನಿಧನ

ಮುಂಬೈ: ಬಾಲಿವುಡ್ ಚಿತ್ರರಂಗಕ್ಕೆ ಆಘಾತಕಾರಿ ಸುದ್ದಿ. ಹಿರಿಯ ನಟ ನಾನಾ ಪಾಟೇಕರ್ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಗೋವಾದ…

5 hours ago

ಓದುಗರ ಪತ್ರ: ಪಿಎಚ್‌ಸಿಗಳಲ್ಲಿ ಬಿಪಿ, ಶುಗರ್ ಮಾತ್ರೆಗಳು ಸಿಗುವಂತೆ ಕ್ರಮ ಕೈಗೊಳ್ಳಿ

ಮೈಸೂರು ಜಿ ಎಚ್.ಡಿ.ಕೋಟೆ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶುಗರ್ ಮತ್ತು ಬಿಪಿಗೆ ಹಾಗೂ ಇತರೆ ಕಾಯಿಲೆಗಳಿಗೆ ಸಂಬಂಧಪಟ್ಟ…

6 hours ago

ಓದುಗರ ಪತ್ರ: ಬರ ಅಧ್ಯಯನ: ನೈಜ ಮೌಲ್ಯಮಾಪನ ನಡೆಯಲಿ

ರಾಜ್ಯದಲ್ಲಿ ಈ ಬಾರಿ ತೀವ್ರ ಬರ ಪರಿಸ್ಥಿತಿ ಇದೆ. ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ…

6 hours ago