ಬೆಂಗಳೂರು: ಹಿಜಾಬ್ ವಿವಾದದ ನಡುವೆಯೇ ರಾಜ್ಯ ಸರಕಾರ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರಿಗಾಗಿ 10 ಪ್ರತ್ಯೇಕ ಕಾಲೇಜುಗಳನ್ನು ಆರಂಭಿಸಲು ಹಸಿರು ನಿಶಾನೆ ತೋರಿಸಿದೆ.
ರಾಜ್ಯ ವಕ್ಫ್ ಬೋರ್ಡ್ ಈ ಸಂಬಂಧ ಸಲ್ಲಿಸಿರುವ ಪ್ರಸ್ತಾವನೆಗೆ ಸರಕಾರ ಒಪ್ಪಿಗೆ ನೀಡಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಂದಿನ ತಿಂಗಳು ಕಾಲೇಜುಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡುವ ನಿರೀಕ್ಷೆಯಿದೆ. ಈ ಕಾಲೇಜುಗಳಲ್ಲಿ ತರಗತಿಯೊಳಗೆ ಹಿಜಾಬ್ ಧರಿಸಲು ಅವಕಾಶ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಮಂಗಳೂರು, ಶಿವಮೊಗ್ಗ, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಈ 10 ಕಾಲೇಜುಗಳು ತಲೆಯೆತ್ತಲಿದ್ದು, ಈ ಕಾಲೇಜುಗಳ ಸ್ಥಾಪನೆಗೆ ವಕ್ಫ್ ಬೋರ್ಡ್ ನಿಂದ ನಿಧಿ ಸಂಗ್ರಹಿಸಲಾಗುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯಾರ್ ಕಣ್ಣೂರಿನ 16 ಎಕರೆ ಜಾಗದಲ್ಲಿ ಮುಸ್ಲಿಂ ಮಹಿಳಾ ಕಾಲೇಜು ಸ್ಥಾಪನೆಗೆ ಜಾಗ ಗುರುತಿಸಲಾಗಿದೆ. ಉಳಿದಂತೆ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಸೇರಿದಂತೆ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕದ ಕೆಲವೆಡೆ ಕಾಲೇಜು ಆರಂಭಿಸಲಾಗುತ್ತದೆ ಎಂದು ತಿಳಿದುಬಂದಿದೆ.
ರಾಜ್ಯಾದ್ಯಂತ ಇರುವ ವಕ್ಫ್ ಆಸ್ತಿಯಲ್ಲೇ ಈ ಕಾಲೇಜುಗಳು ಮುಂದಿನ ಶೈಕ್ಷಣಿಕ ವರ್ಷದಿಂದ ಕಾಲೇಜುಗಳು ಕಾರ್ಯಾರಂಭವಾಗುವ ನಿರೀಕ್ಷೆಯಿದೆ. ಆರಂಭದಲ್ಲಿ ಪ್ರಥಮ ಪಿಯುಸಿ ನಂತರದ ವರ್ಷ ದ್ವಿತೀಯ ಪಿಯುಸಿ ಹೀಗೆ ಪದವಿ ಹಂತದವರೆಗೆ ಇದನ್ನು ವಿಸ್ತರಿಸಲಾಗುತ್ತದೆ ಎಂದು ಹೇಳಲಾಗಿದೆ.
ಹಿಜಾಬ್ ವಿವಾದದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲಿಯೇ ಮುಸ್ಲಿಂ ಶಿಕ್ಷಣ ಸಂಸ್ಥೆಗಳಿಂದ ಕಾಲೇಜು ಸ್ಥಾಪನೆಗೆ 13 ಅರ್ಜಿ ಸಲ್ಲಿಕೆಯಾಗಿದ್ದು, ಇದರಲ್ಲಿ ಎರಡು ಕಾಲೇಜುಗಳು ಈಗಾಗಲೇ ಮಂಜೂರಾಗಿವೆ. ಮುಂದಿನ ವರ್ಷ ಇನ್ನಷ್ಟು ಶಿಕ್ಷಣ ಸಂಸ್ಥೆಗಳಿಗೆ ಅನುಮತಿ ದೊರೆಯುವ ನಿರೀಕ್ಷೆಯಿದೆ.
ವಕ್ಫ್ ಆಸ್ತಿಯಲ್ಲಿ ಸಮುದಾಯದ ಮಕ್ಕಳಿಗೆ ಕಾಲೇಜು ಸ್ಥಾಪನೆಗೆ ಅವಕಾಶವಿದೆ. ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ
ನೀಡುವ ದೃಷ್ಟಿಯಿಂದ ಇವುಗಳನ್ನು ಆರಂಭಿಸಲಾಗುತ್ತಿದೆಯೇ ಹೊರತು ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಅಲ್ಲ ಎಂದು ವಕ್ಫ್ ಸಲಹಾ ಸಮಿತಿ ಹೇಳಿದೆ.