ಮಕ್ಕಳ ಟಿಸಿ ಕೊಡಿ: ಪೋಷಕ ಜಾಫರ್; ಶುಲ್ಕ ಕಟ್ಟದಿದ್ದರೆ ಟಿಸಿ ಇಲ್ಲ: ಖಾಸಗಿ ಶಾಲೆ
ಶ್ರೀಧರ್ ಆರ್.ಭಟ್
ನಂಜನಗೂಡು: ತನ್ನ ಮೂರು ಮಕ್ಕಳ ಟಿಸಿ ಗಾಗಿ ಪರದಾಡಿದ ವ್ಯಕ್ತಿಯೊಬ್ಬರು ಕೊನೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಮೊರೆ ಹೋದ ಪ್ರಕರಣ ನಂಜನಗೂಡಲ್ಲಿ ವರದಿಯಾಗಿದೆ.
ಕಳೆದ ವರ್ಷ ಕೊರೊನಾದಿಂದಾಗಿ ನನ್ನ ಮಕ್ಕಳು ಶಾಲೆಗೇ ಹೋಗಿಲ್ಲ. ಶಿಕ್ಷಣವೇ ನೀಡದೆ ಶುಲ್ಕ ಕಟ್ಟಿ ಎಂದರೆ ಹೇಗೆ? ನಿಮ್ಮ ಫೀಜು ಕಟ್ಟಲು ನನ್ನ ಬಳಿ ಹಣ ಇಲ್ಲ. ಹಾಗಾಗಿ ಮೂರೂ ಮಕ್ಕಳ ಟಿಸಿ ನೀಡಿ, ಅವರ ಶೈಕ್ಷಣಿಕ ಮುಂದುವರಿಕೆಗೆ ನೆರವಾಗಿ ಎಂದು ತಂದೆ ಜಾಫರ್ ಮಾಡಿದ ಮನವಿಗೆ ನ್ಯಾಯ ದೊರಕದ ಕಾರಣ ಅವರು ಕೊನೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಬಾಗಿಲಲ್ಲಿ ಒಂಟಿಯಾಗಿ ಪ್ರತಿಭಟನೆ ನಡೆಸಿದರೂ ಮಕ್ಕಳ ವರ್ಗಾವಣೆ ಪತ್ರ ಸಿಕ್ಕಿಲ್ಲ.
ಜಾಫರ್ ತಾಂಡವಪುರ ಖಾಸಗಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಿದ್ದರು. ೪, ೭, ೯ ನೇ ತರಗತಿ ಓದುತ್ತಿದ್ದ ಆ ಮೂವರೂ ಮಕ್ಕಳು ಕಳೆದ ಶೈಕ್ಷಣಿಕ ವರ್ಷದಲ್ಲಿ ಕೊರೊನಾದಿಂದಾಗಿ ಶಾಲೆಗೇ ಹೋಗಿಯೇ ಇರಲಿಲ್ಲ, ಕಳೆದ ವರ್ಷ ಹೃದಯಾಘಾತಕ್ಕೊಳಗಾಗಿದ್ದ ಜಾಫರ್ ಈ ಬಾರಿ ಆ ಖಾಸಗಿ ಶಾಲೆಯ ದುಬಾರಿ ಶುಲ್ಕ ಕಟ್ಟಲು ಸಾಧ್ಯವಿಲ್ಲದ ಕಾರಣ ನಂಜನಗೂಡು ನಗರದ ಯುನಿಟಿ ಕಾಲೇಜಿಗೆ ೫, ೮, ೧೦ನೇ ತರಗತಿಗೆ ದಾಖಲಿಸಿದ್ದರು.
ಯುನಿಟಿ ಕಾಲೇಜಿನಿಂದ ದಾಖಲಾದ ಮಕ್ಕಳ ಟಿಸಿಯನ್ನು ಕಳಿಸಿಕೊಡುವಂತೆ ೧-೬-೨೨ರಂದು ಪತ್ರ ಬರೆದಿದ್ದು ಈವರೆಗೂ ಟಿಸಿ ಬರಲೇ ಇಲ್ಲ.
ಆಗ ಜಾಫರ್ ನೇರವಾಗಿ ತಾಂಡವಪುರದ ಖಾಸಗಿ ಶಾಲೆಯನ್ನು ಸಂಪರ್ಕಿಸಿದಾಗ ತಲಾ ೮,೦೦೦ ರೂ.ನಂತೆ ಒಟ್ಟಾರೆ ೨೪,೦೦೦ ರೂ. ಪಾವತಿಸಿ ಟಿ ಸಿ ಪಡೆದುಕೊಳ್ಳಿ ಎಂದು ತಾಕೀತು ಮಾಡಿ, ಬ್ಯಾಂಕ್ ಚಲನ್ ನೀಡಿದ್ದಾರೆ. ಆದರೆ, ಹಣ ಕಟ್ಟುವ ಸ್ಥಿತಿಯಲ್ಲಿ ಇಲ್ಲದ ಜಾಫರ್ ಮಕ್ಕಳ ಮುಂದಿನ ಶೈಕ್ಷಣಿಕ ಮುಂದುವರಿಕೆಗಾಗಿ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಮುಂದೆ ಧರಣಿ ನಡೆಸಿ, ಕಳೆದ ವರ್ಷ ನನ್ನ ಮಕ್ಕಳು ಶಾಲೆಗೇ ಹೋಗಿಲ್ಲ. ಫೀಜು ಏಕೆ ಕಟ್ಟಬೇಕು ಎಂದು ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ಶುಲ್ಕ, ಟಿಸಿ ಮಧ್ಯೆ ಆ ಅಮಾಯಕ ಮೂರು ಮಕ್ಕಳ ಶೈಕ್ಷಣಿಕ ಭವಿಷ್ಯ ಏನು, ಎತ್ತ ಎಂಬ ಪ್ರಶ್ನೆಗೆ ಉತ್ತರಿಸುವವರಾರು?
ಕಷ್ಟ ಎಂದು ಜಾಫರ್ ಅವರು ಬಂದಾಗ ಅವರ ಮೂರೂ ಮಕ್ಕಳಿಗೆ ರಿಯಾಯಿತಿ ನೀಡಿ ದಾಖಲಿಸಿಕೊಳ್ಳಲಾಗಿತ್ತು. ಆಗ ರಿಯಾಯಿತಿಗಾಗಿ ಬಂದ ಜಾಫರ್ ಈಗಲೂ ತಮ್ಮಲ್ಲಿ ಬಂದಿದ್ದರೆ ನೋಡಬಹುದಿತ್ತು. ಆದರೆ, ಅವರು ಬಂದಿಲ್ಲ, ನಾವು ಹಣಕ್ಕಾಗಿ ಶಾಲೆ ನಡೆಸುತ್ತಿಲ್ಲ. ೩೦ ಮಕ್ಕಳಿಗೆ ಉಚಿತ ಶಿಕ್ಷಣ, ೧೬ ಮಕ್ಕಳಿಗೆ ಊಟ ವಸತಿ ಸಹಿತ ಉಚಿತ ಶಿಕ್ಷಣ ನೀಡುತ್ತಿದ್ದೇವೆ. ಅವರು ಶಾಲೆಗೆ ಬಂದಿದ್ದಾಗ ಟಿಸಿ ನೀಡಬೇಕಾದ ಕಾನೂನಿನ ಪ್ರಕಾರ ನಮ್ಮ ಸಿಬ್ಬಂದಿ ಚಲನ್ ಭರ್ತಿ ಮಾಡಿ, ಅದನ್ನು ನೀಡಿದ್ದಾರೆ.
-ಫಾ.ಸಿಬಸ್ಟಾನ್, ಕ್ರೈಸ್ತ ಶಾಲೆ.
ಟಿಸಿಗಾಗಿ ಶುಲ್ಕ ಪಾವತಿಸುವುದು ಅನಿವಾರ್ಯ. ಈ ಮೊತ್ತ ಕಾನೂನಿಗೆ ಅನುಗುಣವಾಗಿಯೇ ಇದೆ. ಹಣ ನೀಡಲು ಕಷ್ಟ ಎಂದಾದರೆ ಸರ್ಕಾರಿ ಶಾಲೆಗೆ ಸೇರಿಸಬೇಕಿತ್ತು. ಈಗ ೨೪,೦೦೦ ರೂ. ಪಾವತಿಸಿ ಟಿಸಿ ವರ್ಗಾವಣೆ ಮಾಡಿಕೊಳ್ಳಬೇಕಿದೆ. –ರಾಜು, ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ.