ಜನಪ್ರತಿನಿಧಿಗಳ ಯೋಚನಾ ಶಕ್ತಿಯನ್ನೇ ಹಾಳು ಮಾಡಿದ್ದು ಕಾಂಗ್ರೆಸ್: ಬಿ.ಎಲ್. ಸಂತೋಷ್

ಬೆಂಗಳೂರು: ಕಾಂಗ್ರೆಸ್ ನಮ್ಮ ಯೋಚನಾ ಶಕ್ತಿಯನ್ನೇ ಹಾಳು ಮಾಡುತ್ತದೆ. ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರ, ಕುಟುಂಬ ರಾಜಕಾರಣ, ಪಕ್ಷಪಾತ ಎಲ್ಲರಿಗೂ ತಿಳಿದಿದೆ. ಅದು ಚುನಾಯಿತ ಪ್ರತಿನಿಧಿಗಳ ಯೋಚನಾ ಶಕ್ತಿಯನ್ನೇ ಹಾಳು ಮಾಡಿ, ಅವರ ದಿಕ್ಸೂಚಿಯನ್ನೇ ಬದಲಾಯಿಸಿದ್ದು ದುರಂತ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ತಿಳಿಸಿದರು.
ಯಲಹಂಕದ ಸಿಂಗನಾಯಕನಹಳ್ಳಿಯಲ್ಲಿ ಸೋಮವಾರ ನಡೆದ ಗ್ರಾಮ ಪಂಚಾಯತ್ ಜನಪ್ರತಿನಿಧಿಗಳ ಪ್ರಶಿಕ್ಷಣ ವರ್ಗದಲ್ಲಿ ಅವರು ಮಾತನಾಡಿದರು.

ಕೇವಲ ಪ್ರತಿಷ್ಠೆ, ಅಧಿಕಾರದಿಂದ ಗೌರವ ಸಿಗುವುದಿಲ್ಲ. ಅದನ್ನು ಸದುಪಯೋಗ ಪಡಿಸಿಕೊಂಡು ಬದಲಾವಣೆ ತರಬೇಕು; ಆಗ ಗೌರವ ತಾನಾಗಿಯೇ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದು ತಿಳಿಸಿದರು.
ಗ್ರಾಪಂ ಸದಸ್ಯರ ಅಧಿಕಾರ ಅನ್ನೋದು ಯಾವ ದೆಹಲಿ ನಾಯಕರಿಗೂ ಇಲ್ಲ, ಅಧಿಕಾರ ಅನ್ನೋದೆ ಸೇವೆ ಮಾಡಲಿಕ್ಕೆ, ಒಂದು ಮೈಕ್ ಮೂಲಕ ನೀರು ಬರುವುದನ್ನು ಜನರಿಗೆ ತಿಳಿಸಬಹುದು, ಜನಸಾಮಾನ್ಯರಿಗೆ ಹತ್ತಿರದಿಂದ ಸಮಸ್ಯೆ ನೋಡಲು ಅವಕಾಶ ಸಿಗುತ್ತದೆ. ಅದನ್ನು ಸದುಪಯೋಗ ಪಡಿಸಿಕೊಂಡು ಜನರಿಗೆ ಸಾಕಷ್ಟು ಸವಲತ್ತುಗಳನ್ನು ಕಲ್ಪಿಸಲು ಉತ್ತಮ ವೇದಿಕೆ ಅಗಲಿದೆ, ಅದನ್ನ ಒಳ್ಳೆಯದಕ್ಕೆ ಬಳಸಬೇಕು ಎಂದು ಸಲಹೆ ನೀಡಿದರು.

ಗ್ರಾಮ ಪಂಚಾಯತಿ ಸದಸ್ಯರು ಬಹುತೇಕ ನಿರ್ಣಾಯಕ ಮತ್ತು ಸ್ಥಳೀಯ ಶಕ್ತಿ. ಗ್ರಾಮ ಪಂಚಾಯತಿಯು ವಿಧಾನ ಪರಿಷತ್, ವಿಧಾನಸಭೆಗೆ ಹೆಬ್ಬಾಗಿಲು ಇದ್ದಂತೆ. ವಿಧಾನ ಪರಿಷತ್ ಪ್ರವೇಶಿಸಲು ಇಚ್ಛೆ ಇರುವವರೇ ಹೆಚ್ಚಾಗಿ ಗ್ರಾಮ ಪಂಚಾಯತಿಗಳನ್ನು ಪ್ರವೇಶಿಸುತ್ತಿದ್ದಾರೆ. ಎಲ್ಲ ಪಕ್ಷಗಳಲ್ಲೂ ಇಂಥವರಿದ್ದಾರೆ. ಕೇವಲ ನಮ್ಮ ಪಕ್ಷದಲ್ಲಿ ಅಲ್ಲ ಎಂದು ತಿಳಿಸಿದರು.

ದೇಶದಲ್ಲಿ ಚೆಕ್ ಗೆ ಸಹಿ ಮಾಡುವ ಅಧಿಕಾರವನ್ನು ಕೇವಲ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಜಿಲ್ಲಾಧಿಕಾರಿಗಳಿಗೆ ಮಾತ್ರ ನೀಡಲಾಗಿದೆ. ಬೇರೆ ಯಾವ ಜನಪ್ರತಿನಿಧಿಗಳಿಗೆ ಇಲ್ಲ ಎಂದು ವಿವರಿಸಿದರು.

× Chat with us