ಎಸ್​. ನಾರಾಯಣ್​ ಪುತ್ರ ಪಂಕಜ್​ ವಿವಾಹ; ಮೈಸೂರಿನಲ್ಲಿ ಆಪ್ತರ ಸಮ್ಮುಖದಲ್ಲಿ ನಡೆಯಿತು ಮದುವೆ

ಮೈಸೂರು: ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ನಟ ಎಸ್​. ನಾರಾಯಣ್​ ಅವರ ಮನೆಯಲ್ಲಿ ಶುಭ ಸಮಾರಂಭ ನೆರವೇರಿದೆ. ಅವರ ಪುತ್ರ ಪಂಕಜ್​ ನಾರಾಯಣ್​ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕೆಲವೇ ದಿನಗಳ ಹಿಂದೆ ರಕ್ಷಾ ಜೊತೆ ಪಂಕಜ್​ ಅವರ ನಿಶ್ಚಿತಾರ್ಥ ನೆರವೇರಿತ್ತು. ಈಗ ಮೈಸೂರಿನಲ್ಲಿ ಈ ಜೋಡಿ ಸಪ್ತಪದಿ ತುಳಿದಿದೆ. ಕೇವಲ ಆಪ್ತರ ಸಮ್ಮುಖದಲ್ಲಿ ಮದುವೆ ನಡೆದಿದ್ದು, ಚಿತ್ರರಂಗ ಮತ್ತು ರಾಜಕೀಯ ಕ್ಷೇತ್ರದ ಕೆಲವು ಗಣ್ಯರು ನವ ದಂಪತಿಗೆ ಆಶೀರ್ವಾದ ಮಾಡಿದ್ದಾರೆ.

ಪಂಕಜ್​ ಮತ್ತು ರಕ್ಷಾ ಮದುವೆಯ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿವೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸೆಲೆಬ್ರಿಟಿ ವಿವಾಹ ಸಮಾರಂಭ ಅದ್ದೂರಿಯಾಗಿ ನಡೆಯಬೇಕಿತ್ತು. ಆದರೆ ಕೊವಿಡ್ ಹರಡುವ ಭಯ, ಪುನೀತ್​ ರಾಜ್​ಕುಮಾರ್ ನಿಧನದ ನೋವು ಸೇರಿದಂತೆ ಹಲವು ಕಾರಣಗಳಿಂದಾಗಿ ಸಿಂಪಲ್​ ಆಗಿ ಮದುವೆ ಮಾಡಲಾಗಿದೆ.

ಮೈಸೂರಿನ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್​ನಲ್ಲಿ ಮದುವೆ ಸಮಾರಂಭ ಏರ್ಪಡಿಸಲಾಗಿತ್ತು. ಹಿರಿಯ ಕಲಾವಿದೆ ಶ್ರುತಿ, ಭಾರತಿ ವಿಷ್ಣುವರ್ಧನ್​, ಶ್ವೇತಾ ಚೆಂಗಪ್ಪ, ಮಾಜಿ ಶಾಸಕ ಎನ್​. ಚೆಲುವರಾಯಸ್ವಾಮಿ ಸೇರಿದಂತೆ ಅನೇಕರು ಆಗಮಿಸಿದ್ದರು.

× Chat with us