ನವದೆಹಲಿ : ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಚಡ್ಡಿಯನ್ನು ಸುಡುತ್ತಿರುವ ಫೋಟೋವನ್ನು ಕಾಂಗ್ರೆಸ್ ಶೇರ್ ಮಾಡಿಕೊಳ್ಳುವುದರ ಮೂಲಕ ಬಿಜೆಪಿಯನ್ನು ಕಟುವಾಗಿ ಟೀಕಿಸಿದೆ. ಆರ್ಎಸ್ಎಸ್ ಚಡ್ಡಿ ಸುಡುತ್ತಿರುವ ಫೋಟೋವನ್ನು ಕಾಂಗ್ರೆಸ್ ಟ್ವಿಟರ್ನಲ್ಲಿ ಹಂಚಿಕೊಂಡ ಬಳಿಕ ರಾಜಕೀಯದಲ್ಲಿ ಘರ್ಷಣೆ ಶುರುವಾಗಿದೆ. ಬಿಜೆಪಿಯಿಂದ ಟೀಕಿಸುವ ಭರದಲ್ಲಿ ಭಾರತ್ ಜೋಡೋ ಯಾತ್ರೆ ಪ್ರಚಾರ ನಡೆಸುತ್ತಿರುವ ವೇಳೆಯೇ ಕಾಂಗ್ರೆಸ್ ಆರ್ಎಸ್ಎಸ್ ಚಡ್ಡಿಯ ಫೋಟೋವನ್ನು ಶೇರ್ ಮಾಡಿದ್ದು ಎರಡು ಪಕ್ಷಗಳ ನಡುವೆ ಇದೀಗ ವಾಗ್ವಾದ ಆರಂಭವಾಗಿದೆ.
ಚಡ್ಡಿ ಸುಡುತ್ತಿರುವ ಫೋಟೋ ಜೊತೆಗೆ, ದೇಶವನ್ನು ದ್ವೇಷದ ಸಂಕೋಲೆಯಿಂದ ಮತ್ತು ಬಿಜೆಪಿ-ಆರ್ಎಸ್ಎಸ್ ಹಾನಿಯಿಂದ ಮುಕ್ತಗೊಳಿಸಲು ನಾವು ಹಂತ ಹಂತವಾಗಿ ಗುರಿ ತಲುಪುತ್ತಿದ್ದೇವೆ ಎಂದು ಕಾಂಗ್ರೆಸ್ ಬರೆದುಕೊಂಡಿದೆ.ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಅವರು, ನಾನು ರಾಹುಲ್ ಗಾಂಧಿಗೆ ಈ ದೇಶದಲ್ಲಿ ಹಿಂಸೆ ಬೇಕೇ ಎಂಬ ಪ್ರಶ್ನೆಯನ್ನು ಕೇಳಲು ಬಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. 1984ರಲ್ಲಿ ಕಾಂಗ್ರೆಸ್ ಬೆಂಕಿ ದೆಹಲಿಯನ್ನು ಸುಟ್ಟು ಹಾಕಿತು. 2002ರಲ್ಲಿ ಗೋದ್ರಾದಲ್ಲಿ 59 ಕರಸೇವಕರನ್ನು ಜೀವಂತವಾಗಿ ಸುಟ್ಟು ಹಾಕಿತು. ಈಗ ಮತ್ತೆ ಹಿಂಸೆಯ ಕರೆ ನೀಡಿದ್ದಾರೆ ಎಂದು ಮತ್ತೊಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.