ಹಾಸನದಲ್ಲಿ ರಾತ್ರಿಯಿಡಿ ಸುರಿದ ಮಳೆಗೆ ಇಬ್ಭಾಗವಾದ ರಸ್ತೆ

ಹಾಸನ: ರಾಜ್ಯದ ಹಲವೆಡೆ ಸುರಿದ ಮಳೆಯಿಂದ ಅವಾಂತರ ಸೃಷ್ಟಿಯಾಗಿದ್ದು, ಜಿಲ್ಲೆಯಲ್ಲಿ ಸುರಿದ ಮಳೆಗೆ ರಸ್ತೆ ಕೊಚ್ಚಿ ಹೋಗಿದೆ. ಚನ್ನರಾಯಪಟ್ಟಣ ತಾಲೂಕಿನ ಕೆಂಬಾಳು ಗ್ರಾಮದ ಬಳಿ ಈ ಘಟನೆ ನಡೆದಿದೆ. ರಸ್ತೆ ಸಂಪರ್ಕ ಕಡಿತದಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಪರದಾಡುತ್ತಿದ್ದಾರೆ. ಭಾರಿ ಮಳೆಗೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ತೋಟ, ಗದ್ದೆಗಳು ಜಲಾವೃತವಾಗಿವೆ. ರಸ್ತೆಯಲ್ಲಿ ನೀರು ರಭಸವಾಗಿ ಹರಿದ ಪರಿಣಾಮ ರಸ್ತೆ ಕೊಚ್ಚಿ ಹೋಗಿದೆ. ಹೀಗಾಗಿ ಸಾರಿಗೆ ಬಸ್​ಗಳ ಸಂಚಾರವೂ ಸ್ಥಗಿತವಾಗಿದೆ.

ಮಳೆ ಅವಾಂತರದಿಂದ ಅರಸೀಕೆರೆ ತಾಲೂಕಿನ ಅಗ್ಗುಂದ ತಾಂಡಾದಲ್ಲಿ ವೃದ್ಧ ದಂಪತಿ ಪರದಾಟ ಪರದಾಡುತ್ತಿದ್ದಾರೆ. ಮಳೆ ನೀರು ನುಗ್ಗಿದ ಪರಿಣಾಮ ಮನೆಯಲ್ಲಿದ್ದ ದಿನಸಿ ವಸ್ತುಗಳು ನೀರುಪಾಲಾಗಿವೆ. ಇನ್ನು ಚಿಕ್ಕಮಗಳೂರು ಜಿಲ್ಲೆ ಬಯಲುಸೀಮೆಯಲ್ಲಿ ನೂರಾರು ಎಕರೆ ಪ್ರದೇಶದಲ್ಲಿದ್ದ ರಾಗಿ ಬೆಳೆ ಮುಳುಗಡೆಯಾಗಿದೆ. ಕಡೂರು, ಅಜ್ಜಂಪುರ ತಾಲೂಕಿನಲ್ಲಿ ಅಪಾರ ಬೆಳೆ ಹಾನಿಯಾಗಿದೆ. ಮನೆ, ಅಂಗಡಿಗಳಿಗೂ ಮಳೆ ನೀರು ನುಗ್ಗಿದೆ.

ಭೂಮಿ ಬಿರುಕು
ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಗಂಡಸಿ ಗ್ರಾಮದಲ್ಲಿ ನೂರಾರು ಮೀಟರ್ ಭೂಮಿ ಬಿರುಕು ಬಿಟ್ಟಿದೆ. ಗಂಡಸಿ ಗ್ರಾಮದ ದೊಡ್ಡ ಕೆರೆಯ ಬಳಿಯೇ ಬಿರುಕು ಬಿಟ್ಟಿದೆ. ಘಟನಾ ಸ್ಥಳಕ್ಕೆ ಶಾಸಕ ಶಿವಲಿಂಗೇಗೌಡ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. 1.5 ಅಡಿ ಅಗಲ, 200 ಮೀ. ಉದ್ದಕ್ಕೆ 15 ಅಡಿ ಆಳ ಭೂಮಿ ಬಿರುಕು ಬಿಟ್ಟಿದೆ ಅಂತ ತಿಳಿದುಬಂದಿದೆ.

ಧರೆಗುರುಳಿದ ಮನೆ
ಮಂಡ್ಯದಲ್ಲಿ ಭಾರಿ ಮಳೆಗೆ ಮನೆಯೊಂದು ಧರೆಗುರುಳಿದೆ. ಕೆ.ಆರ್.ಪೇಟೆ ತಾಲೂಕಿನ ಮಲ್ಲೇನಹಳ್ಳಿ ಗ್ರಾಮದ ಕಾಳೇಗೌಡ ಎಂಬುವವರಿಗೆ ಸೇರಿದ ಮನೆ ಕುಸಿದು ಬಿದ್ದಿದೆ. ಮನೆ ಬಿದ್ದು ಎಮ್ಮೆ ಮೃತಪಟ್ಟಿದ್ದು, ಮೇಕೆಗಳಿಗೆ ಗಾಯವಾಗಿದೆ. ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ರೈತ ಆಗ್ರಹಿಸಿದ್ದಾರೆ.

× Chat with us