ಮೈಸೂರು: ಸುಪ್ರೀಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಅವರನ್ನು ಆಂಧ್ರಪ್ರದೇಶದ ನೂತನ ರಾಜ್ಯಪಾಲರಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ನೇಮಕ ಮಾಡಿದ್ದಾರೆ. ಈ ಮೂಲಕ ರಾಜ್ಯದಿಂದ ರಾಜಕೀಯೇತರ ವ್ಯಕ್ತಿಯೊಬ್ಬರು ರಾಜ್ಯಪಾಲರ ಹುದ್ದೆ ಅಲಂಕರಿಸುತ್ತಿದ್ದಾರೆ.
ತಮ್ಮ ಸರಳತೆಗೆ ಹೆಸರಾದ ನ್ಯಾ. ಮೂ. ಅಬ್ದುಲ್ ನಜೀರ್ ಪ್ರಚಾರ ಬೆಳಕಿನಲ್ಲಿ ಕಾಣಿಸಿಕೊಂಡಿದ್ದು ಕಡಿಮೆ. ತಮ್ಮ ನಿವೃತ್ತಿಗೆ ಮುನ್ನ ಸಂದರ್ಶನವೊಂದರಲ್ಲಿ ಅವರು ಪೊಲೀಸ್ ಠಾಣೆಗಳು ಸಿವಲ್ ವ್ಯಾಜ್ಯ ಇತ್ಯರ್ಥ ಮಾಡುವ ತಾಣಗಳಾಗಿವೆ ಎಂದು ಕಳವಳ ವ್ಯಕ್ತಪಡಿಸಿದ್ದರು.ಸುಪ್ರೀಕೋರ್ಟ್ ನ್ಯಾಯಮೂರ್ತಿಯಾಗಿ ದೀರ್ಘ ಕಾಲ ಸೇವೆ ಸಲ್ಲಿಸಿದ ಹೆಗ್ಗಳಿಕೆ ಅವರದ್ದು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗದೆ ನೇರವಾಗಿ ಸುಪ್ರೀಕೋರ್ಟ್ಗೆ ಆಯ್ಕೆಯಾದ ಬೆರಳೆಣಿಕೆಯ ನ್ಯಾಯಮೂರ್ತಿಗಳಲ್ಲಿ ಅಬ್ದುಲ್ ನಜೀರ್ ಕೂಡ ಒಬ್ಬರು.
ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದ ಅಬ್ದುಲ್ ನಜೀರ್ ಅವರು ದಕ್ಷಿಣ ಕನ್ನಡದ ಮೂಡಬಿದಿರೆ ತಾಲ್ಲೂಕಿನ ಬೆಳುವಾಯಿ ಮೂಲದವರು. 1958ರ ಜನವರಿ 5ರಂದು ಮೂಡಬಿದಿರೆ ತಾಲ್ಲೂಕಿನ ಬೆಳುವಾಯಿಯಲ್ಲಿ ಜನಿಸಿದ ನಜೀರ್ ಅವರು ಅಲ್ಲಿನ ಮಹಾವೀರ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದ ಬಳಿಕ ಎಸ್ಡಿಎಂ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದರು. ಫೆಬ್ರವರಿ 18, 1983 ರಂದು ವಕೀಲರಾಗಿ ನೋಂದಾಯಿಸಿ ಹಲವು ವರ್ಷಗಳ ಕಾರ್ಯ ನಿರ್ವಹಣೆ ಬಳಿಕ 2003ರ ಮೇ 12 ರಂದು ಹೈಕೋರ್ಟ್ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. 2017ರ ಫೆಬ್ರವರಿಯಲ್ಲಿ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ಸಂದರ್ಭದಲ್ಲೇ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದಿದ್ದರು.
ಐತಿಹಾಸಿಕ ಅಯೋಧ್ಯೆ ರಾಮಜನ್ಮ ಭೂಮಿ ತೀರ್ಪು ನೀಡಿದ ಪೀಠದಲ್ಲಿ ನಜೀರ್ ಸದಸ್ಯರಾಗಿದ್ದರು. 2017ರಲ್ಲಿ ತ್ರಿವಳಿ ತಲಾಖ್ ಅಸಿಂಧುಗೊಳಿಸಿ ತೀರ್ಪು ನೀಡಿದ ನ್ಯಾಯಪೀಠದಲ್ಲೂ ನಜೀರ್ ಇದ್ದರು. ಕಳೆದ ತಿಂಗಳು ಜನವರಿ 4ರಂದು ಅವರು ಸೇವೆಯಿಂದ ನಿವೃತ್ತರಾಗಿದ್ದರು.
ತಮ್ಮ ಸರಳತೆಗೆ ಹೆಸರುವಾಸಿಯಾದ ನಜೀರ್ ಅವರು 2019 ರವರೆಗೆ ಪಾಸ್ಪೋರ್ಟ್ ಹೊಂದಿರಲಿಲ್ಲ. ಇತ್ತೀಚೆಗೆ ಮೊದಲ ಬಾರಿಗೆ ಹೊರದೇಶಕ್ಕೆ ಪ್ರಯಾಣಿಸಿದ್ದರು ಎಂದು ಹಾಲಿ ಮುಖ್ಯ ನ್ಯಾಯ ಮೂರ್ತಿ ಡಿ. ವೈ ಚಂದ್ರಚೂಡ್ ಅವರು ನಿವೃತ್ತಿ ಸಂದರ್ಭದಲ್ಲಿ ನಜೀರ್ ಅವರ ಗುಣಗಾನ ಮಾಡಿದ್ದರು.
ನೂತನವಾಗಿ ಆಂದ್ರ ಪ್ರದೇಶದ ರಾಜ್ಯಪಾಲರಾಗಿ ನಿಯುಕ್ತಿಗೊಂಡಿರುವ ಹೆಮ್ಮೆಯ ಕನ್ನಡಿಗ ಶ್ರೀ ಎಸ್. ಅಬ್ದುಲ್ ನಜೀರ್ ರವರಿಗೆ ಹಾರ್ದಿಕ ಅಭಿನಂದನೆಗಳು. ಮೂಲತಃ ಮಂಗಳೂರಿನ ಬೆಳುವಾಯಿಯವರಾದ ಇವರು ಕರ್ನಾಟಕದ ಉಚ್ಛ ನ್ಯಾಯಾಲಯದಲ್ಲಿ ವಕೀಲರಾಗಿ ಸೇವೆ ಸಲ್ಲಿಸಿ, ನಂತರ ಸುಪ್ರಿಂ ಕೋರ್ಟ್ ನಲ್ಲಿ ನ್ಯಾಯಾಧೀಶರಾಗಿ, ನಿವೃತ್ತರಾಗಿದ್ದರು. pic.twitter.com/kAcLOxxv8C
— Basavaraj S Bommai (@BSBommai) February 12, 2023
ಅಬ್ದುಲ್ ನಜೀರ್ ನೇಮಕಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿದ್ದಾರೆ. “ನೂತನವಾಗಿ ಆಂದ್ರ ಪ್ರದೇಶದ ರಾಜ್ಯಪಾಲರಾಗಿ ನಿಯುಕ್ತಿಗೊಂಡಿರುವ ಹೆಮ್ಮೆಯ ಕನ್ನಡಿಗ ಶ್ರೀ ಎಸ್. ಅಬ್ದುಲ್ ನಜೀರ್ ರವರಿಗೆ ಹಾರ್ದಿಕ ಅಭಿನಂದನೆಗಳು. ಮೂಲತಃ ಮಂಗಳೂರಿನ ಬೆಳುವಾಯಿಯವರಾದ ಇವರು ಕರ್ನಾಟಕದ ಉಚ್ಛ ನ್ಯಾಯಾಲಯದಲ್ಲಿ ವಕೀಲರಾಗಿ ಸೇವೆ ಸಲ್ಲಿಸಿ, ನಂತರ ಸುಪ್ರಿಂ ಕೋರ್ಟ್ ನಲ್ಲಿ ನ್ಯಾಯಾಧೀಶರಾಗಿ, ನಿವೃತ್ತರಾಗಿದ್ದರು” ಎಂದು ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.