ಮೀಸಲು: ಅಮಿತ್ ಶಾ ಸೂಚನೆಗೆ ಸ್ವಾಮೀಜಿ ಆಗ್ರಹ
ಬೆಂಗಳೂರು: ಪಂಚಮಸಾಲಿಗಳಿಗೆ ಮೀಸಲಾತಿ ಕೊಡಿಸುವ ವಿಚಾರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸೂಚನೆ ನೀಡಬೇಕು ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು ಆಗ್ರಹಿಸಿದ್ದಾರೆ.
ಮೀಸಲಾತಿಗಾಗಿ ನಾವು ನಡೆಸುತ್ತಿರುವ ಹೋರಾಟ 15ನೇ ದಿನಕ್ಕೆ ಕಾಲಿಟ್ಟಿದೆ. ಬೇಡಿಕೆ ಈಡೇರಿಸುವುದಾಗಿ ಮುಖ್ಯಮಂತ್ರಿಗಳು ಆರು ಬಾರಿ ಮಾತು ಕೊಟ್ಟು ಮಾತು ತಪ್ಪಿದ್ದಾರೆ. ಹೀಗಾಗಿ ನಾವು ರಾಜ್ಯ ಸರ್ಕಾರದ ಬದಲು ಕೇಂದ್ರ ಸರ್ಕಾರದ ಮೊರೆ ಹೋಗಲು ತೀರ್ಮಾನಿಸಿದ್ದೇನೆ ಎಂದರು.
ಈಗಾಗಲೇ ನಾವು ಪ್ರಧಾನಿ ನರೇಂದ್ರ ಮೋದಿ, ನಡ್ಡಾ ಹಾಗೂ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದೇವೆ. ಅಮಿತ್ ಶಾ ಅವರು ಭೇಟಿ ಮಾಡುತ್ತಿರುವ ಪ್ರದೇಶಗಳಲ್ಲೆಲ್ಲಾ ಪಂಚಮಸಾಲಿ ಸಮುದಾಯದವರೆ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ನಮ್ಮ ಬೇಡಿಕೆಯತ್ತ ಗಮನ ಹರಿಸಿ ಎಂದು ಅವರಿಗೆ ನಾವು ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.
ರಾಜ್ಯದಲ್ಲಿರುವ ಶೇ.80ರಷ್ಟು ಪಂಚಮಸಾಲಿಗಳು ಬಿಜೆಪಿಯನ್ನೇ ಬೆಂಬಲಿಸಿಕೊಂಡು ಬರುತ್ತಿದ್ದಾರೆ. ನಮ್ಮ ಈ ಹೋರಾಟದ ಬಗ್ಗೆ ರಾಜ್ಯದ ಬಿಜೆಪಿ ಮುಖಂಡರು ಕೇಂದ್ರದವರಿಗೆ ಸರಿಯಾಗಿ ವಿವರಣೆ ನೀಡಿರುವ ಸಾಧ್ಯತೆ ಇಲ್ಲ. ಆದ್ದರಿಂದಲೇ ನಾವು ನೇರವಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವಂತಾಯಿತು ಎಂದು ಅವರು ಹೇಳಿದರು.
ನಾವು ಕೇಳಿರೋದು 2ಎ ಮೀಸಲಾತಿ, ನಮಗೆ ಅದಕ್ಕೆ ಪರ್ಯಾಯವಾಗಿ ಯಾವುದೇ ಮೀಸಲಾತಿ ನೀಡಿದರೂ ಅದನ್ನು ನಾವು ಸ್ವಾಗತಿಸುತ್ತೇವೆ ಎಂದು ಅವರು ವಿವರಿಸಿದರು.
ಮೀಸಲಾತಿ ಹೋರಾಟದಲ್ಲಿ ಪಾಲ್ಗೊಂಡವರನ್ನು ಪಶುಗಳಿಗೆ ಹೊಲಿಕೆ ಮಾಡಿರುವ ಮಾಜಿ ಸಚಿವ ರಮೇಶ್ ಜಾರಕಿಹೋಳಿ ಅವರು ಈ ಕೂಡಲೆ ಕ್ಷಮೆ ಯಾಚಿಸಬೇಕು ಎಂದು ಶ್ರೀಗಳು ಇದೇ ಸಂದರ್ಭದಲ್ಲಿ ಆಗ್ರಹಿಸಿದರು.