Mysore
17
overcast clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ರಾಜ್ಯದಲ್ಲಿ ಪ್ರತಿಯೊಂದಕ್ಕೂ ರೇಟ್ ಫಿಕ್ಸ್ ಆಗಿದೆ: ಕುಮಾರಸ್ವಾಮಿ ಗಂಭೀರ ಆರೋಪ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರದಲ್ಲಿ ಪ್ರತಿಯೊಂದಕ್ಕೆ ರೇಟ್ ಕಾರ್ಡ್ ಫಿಕ್ಸ್ ಆಗಿದೆ. ಕಂದಾಯ ಇಲಾಖೆಯಲ್ಲಿ ಎಲ್ಲಾ ಪೋಸ್ಟ್ ಗಳಿಗೂ ರೇಟ್ ನಿಗದಿ ಮಾಡಲಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ನೇರ ಆರೋಪ ಮಾಡಿದರು.

ಬೆಂಗಳೂರಿನಲ್ಲಿ ಶನಿವಾರ ಬೆಳಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, 60% ಕಮೀಷನ್ ಆರೋಪವನ್ನು ಪುನರುಚ್ಚರಿಸಿದರು.

60% ಕಮೀಷನ್ ಆರೋಪಕ್ಕೆ ಕುಮಾರಸ್ವಾಮಿ ದಾಖಲೆ ಕೊಡಲಿ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಮುಖಂಡರು, ಗುತ್ತಿಗೆದಾರರೇ ಪರ್ಸಂಟೇಜ್ ಆರೋಪ ಮಾಡುತ್ತಿದ್ದಾರೆ. ಅವರನ್ನು ಪರ್ಸಂಟೇಜ್ ಕೇಳದಿದ್ದರೆ ಅವರು ಯಾಕೆ ಆರೋಪ ಮಾಡುತ್ತಿದ್ದರು. ಸರ್ಕಾರ ಅವರನ್ನೇ ಕೇಳಿ ದಾಖಲೆ ಪಡೆದುಕೊಳ್ಳಬೇಕು ಎಂದರು.

ಸಿದ್ದರಾಮಯ್ಯ ಅವರು ಮಹಾನ್ ನಾಯಕರು. ಪೇ ಸಿಎಂ ಅಂತ ಪೋಸ್ಟರ್ ಅಂಟಿಸಲು ಹೋಗಿದ್ದರು. ಅವರು ಇಲ್ಲಿಯವರೆಗೆ ಯಾವ ದಾಖಲೆ ಇಟ್ಟಿದ್ದಾರೆ ಜನರ ಮುಂದೆ. ಕೆಂಪಣ್ಣ ಹೇಳಿದರು ಕೆಂಪಣ್ಣ ಹೇಳಿದರು ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ, ಕೆಂಪಣ್ಣ ಅವರಿಂದ ಸಿದ್ದರಾಮಯ್ಯ ಅವರು ದಾಖಲೆ ಪಡೆದುಕೊಳ್ಳಬೇಕಿತ್ತಲ್ಲವೇ? ಈಗ ಕಂಟ್ರಾಕ್ಟರ್ ಗಳೇ 60% ವಸೂಲಿ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಅದಕ್ಕಿಂತ ಸಾಕ್ಷಿ ಬೇಕಾ ಇವರಿಗೆ? ಈ ಆಟ ಸರಕಾರ ಬಿಡಬೇಕು ಎಂದು ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.

ಕೃಷ್ಣಭೈರೇಗೌಡ ವಿರುದ್ದ ಕುಮಾರಸ್ವಾಮಿ ವಾಗ್ದಾಳಿ

ಮಗ ಸೋತಿರುವುದಕ್ಕೆ ಹತಾಶರಾಗಿ ಕುಮಾರಸ್ವಾಮಿ 60% ಆರೋಪ ಮಾಡುತ್ತಿದ್ದಾರೆ ಎಂದು ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ. ನಾನು ಮಗ ಸೋತಿರುವುದಕ್ಕೆ ಹತಾಶನಾಗಿದ್ದೇನೋ ಇಲ್ಲವೋ. ಎಂಬುದ್ಧು ಇರಲಿ. ಅದನ್ನು ಬಿಟ್ಟು ಮೊದಲು 60% ಕಮೀಷನ್ ಬಗ್ಗೆ ಉತ್ತರ ಹೇಳಲಿ ಎಂದು ಸಚಿವರು ಸವಾಲು ಹಾಕಿದರು.

ಕಂದಾಯ ಇಲಾಖೆ ಸತ್ಯ ಮಾರ್ಗದಲ್ಲಿ ನಡೆಯುತ್ತಿದೆಯಾ? ಬೆಂಗಳೂರು AC ಪೋಸ್ಟ್ ಗೆ ಎಷ್ಟು ದುಡ್ಡು ತೆಗೆದುಕೊಳ್ಳುತ್ತಿದ್ದೀರಿ? ಎಷ್ಟು ರೇಟ್ ಫಿಕ್ಸ್ ಮಾಡಿಕೊಂಡಿದ್ದೀರಾ? ಆ ಹಣ ಯಾರು ಯಾರಿಗೆ ಹೋಗುತ್ತದೆ? ಏನೇನು ದಂಧೆ ನಡೆಸುತ್ತಿದ್ದೀರಿ ಎನ್ನುವುದು ನಮಗೆ ಗೊತ್ತಿಲ್ಲವಾ? ಎಂದು ಕಂದಾಯ ಇಲಾಖೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.

Tags:
error: Content is protected !!