ಮೈಸೂರು : ಸಾಹಿತ್ಯದ ಎಂಬುದು ಒಂದಲ್ಲಾ ಒಂದು ರೀತಿಯಲ್ಲಿ ನಮ್ಮೆಲ್ಲರ ನಿತ್ಯದ ಬದುಕಿನ ಅವಿಭಾಜ್ಯ ಅಂಗ. ಕಾಲ ಕಳೆದಂತೆ ಸಾಹಿತ್ಯದ ಅಭಿವ್ಯಕ್ತಿ, ಅಭಿರುಚಿಯೂ ಬದಲಾಗಿದೆ. ಆದರೆ, ಈ ಕವಿತೆಗಳು ಮಾತ್ರ ಅಂದು, ಇಂದು, ಮುಂದು ತ್ರಿಕಾಲಕ್ಕೂ ಆಪ್ತವಾಗುವ ಮತ್ತು ಚೇತೋಹಾರಿ ಅನ್ನಿಸುವ ಸಾಹಿತ್ಯ ಪ್ರಕಾರ ಎಂಬುದಕ್ಕೆ ಶುಕ್ರವಾರ ರಾಣಿ ಬಹದ್ದೂರ್ ಸಭಾಂಗಣದಲ್ಲಿ ನಡೆದ ದಸರಾ ‘ಯುವ ಕವಿಗೋಷ್ಠಿ’ ಸಾಕ್ಷಿಯಾಯಿತು.
‘ಮೊಸರಿನ ಪಾತ್ರೆಯಲಿ ಕಡೆಗೋಲನಿಟ್ಟು
ನವಭಾವಗಳ ಕಡೆದು
ಮೃದುವಾದ ಬೆಣ್ಣೆಯನೆತ್ತಿ
ತಣ್ಣನೆಯ ನೀರಲ್ಲಿ ನೆನೆಸುತ್ತಾಳೆ
ಕೈಗಂಟಿದ ಬೆಣ್ಣೆಯ
ಬಿಸಿನೀರಿನಲಿ ತೊಳೆದು
ಸೆರಗಿನಂಚಿನಲಿ ಕೈಯನೊರೆಸುತ್ತಾಳೆ
ಇರಬಹುದೊಂದು ಸುಡುವ ಹೃದಯ
ಒದ್ದೆಯಾದ ಸೆರಗಿನಡಿಯಲ್ಲಿ ….’
ಎಂದು ಇಂಪಾದ ದನಿಯಲ್ಲಿ ಕವಯಿತ್ರಿ ಅಂಜನಾ ಹೆಗಡೆ ಅವರು ‘ದುರ್ಗೆ’ ಎಂಬ ಕವಿತೆಯನ್ನು ವಾಚನ ಮಾಡಲು ಆರಂಭಿಸುತ್ತಿದ್ದಂತೆ ರಾಣಿ ಬಹದ್ದೂರ್ ಸಭಾಂಗಣದಲ್ಲಿ ನಿಶ್ಯಬ್ಧ ಆವರಿಸಿತ್ತು. ನೆರೆದಿದ್ದ ಸಾಹಿತ್ಯಾಭಿಮಾನಿಗಳು ತದೇಕಚಿತ್ತರಾಗಿ ಕವಿತೆಗಳನ್ನು ಆಲಿಸುವಲ್ಲಿ ನಿರತರಾಗಿದ್ದರು.
ಅರಿಯಲಾದೀತೇ ಅವಳೆತ್ತಿದ ಅವತಾರಗಳ;
ಅಳೆಯಲಾದೀತೇ ಅಂತರಂಗದಾಳ!…… ಎಂಬ ಅಂತಿಮ ಸಾಲುಗಳನ್ನು ಕೇಳುತ್ತಿದ್ದಂತೆ ಸಭಿಕರು ಚಪ್ಪಾಳೆಯ ಸುರಿಮಳೆಗೈದರು.
ಡಾ.ಬಿ.ಆರ್.ಶ್ರುತಿ ಅವರು ವಾಚಿಸಿದ ‘ಭೇಟಿಯಾಗಿದ್ದರು… ಆ ಹುಡುಗಿಯರು…’ ಎಂಬ ಕವಿತೆಯು ಸಾಹಿತ್ಯಾಸಕ್ತರ ಮೆಚ್ಚುಗೆ ಪಾತ್ರವಾಯಿತು. ಈ ಪದ್ಯದಲ್ಲಿನ ಸಾಲುಗಳಾದ..
‘ಮೈತುಂಬ ಸೆರಗೊದ್ದಿದ್ದರೂ
ಮೆಸೇಜುಗಳಲ್ಲೇ
ಮೈಸವರಿ, ಆನ್ ಲೈನಿನಲ್ಲೇ
ಸ್ಖಲಿಸಿ ಸುಖಿಸುವ
ಇಂದ್ರರ ಕಂಡ ಅಸಹ್ಯದಿಂದ,
ಮತ್ತೆ ಕಲ್ಲಾಗಬೇಕಂತೆ
ಅಹಲ್ಯೆ!
ರಾಧೆಯ ತುಟಿಯ
ಕಡುಗೆಂಪು ಲಿಪ್ ಸ್ಟಿಕ್ಕು
ಅವಳ ಮನೆಯ ದಿನಸಿಗೆ
ದಿಕ್ಕಾಗಿದೆಯಂತೆ!
ಅವಳೀಗ ಶಾಪಿಂಗು ಮಾಲಿನ
ದೊಡ್ಡಗಂಡಿಯಲ್ಲಿ
ಸೇಲ್ಸ್ ಗರ್ಲಂತೆ!’
ಅಶೋಕ ಎನ್. ಕಡೇಶಿವಾಲಯ ಅವರು, ಮಗ್ಗಲು ಮಗುಚುತಿದೆ ಇದೋ ಕವನದಲ್ಲಿ, ಅಂತಿಂತೂ ಕುದಿದಾರಿದ ಊರ ಹಸುವಿನ ಹಾಲಿಗೆ ಹೆಪ್ಪು ಹಾಕಿದ್ದು ಹೊಲಸು ಇತಿಹಾಸದ ಒಟ್ಟಿಗೆ, ಕೋರೆ ಕೊದಂಟರು ಮತ್ಸರದ ಹುಳಿ ಬೆರೆಸಿ, ಉಣಬಡಿಸಿದರು ಇಂಗು ಒಗ್ಗರಣೆ ಹಾಕಿರುವ ಮಜ್ಜಿಗೆ ಎನ್ನುವ ಮೂಲಕ ಶಾಂತಿಯುತವಾಗಿ ಜೀವನ ನಡೆಸುವ ಗ್ರಾಮಗಳಲ್ಲಿ ಒಮ್ಮೆಲೆ ಬುಗಿಲೆದ್ದುವ ದಳ್ಳುರಿಯ ಕುರಿತು ಸೂಚ್ಯವಾಗಿ ನುಡಿದರು.
ಚಿನಕುರುಳಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ವಿ. ಶ್ರೀಧರ್, ನಾನೊಬ್ಬ ವೇಶ್ಯೆ ಕವನ ವಾಚಿಸುತ್ತ, ಕತ್ತಲೆಯ ಪ್ರಪಂಚದ ಬೆತ್ತಲೆಯ ಅನಾವರಣ, ಹೂವಿನ ಮಕರಂದಕ್ಕೆ ದುಂಬಿಗಳ ಆಗಮನ, ಅಸುರ ಕ್ರೂರಿಗಳ ಕಾಮದದಾಹಕ್ಕೆ ನನ್ನ ದೇಹವೇ ಅವರಿಗೆ ಔತಣ ಕವನ ವಾಚಿಸುವ ಮೂಲಕ ವೇಶ್ಯೆಯೊಬ್ಬಳ ಜೀವನಗಾಥೆಯನ್ನು ತಿಳಿಯಪಡಿಸಿದರು.
ಯುವ ಕವಿಗಳು: ಅಕ್ಬರ್ ಸಿ.ಕಾಲಿಮಿರ್ಚಿ, ಅಶೋಕ್, ಡಾ.ಅಜಿತ್ ಹೆಗಡೆ ಹರೀಶಿ, ಕೊಟ್ರೇಶ್ ಅರಸೀಕೆರೆ, ಗೋವಿಂದಸ್ವಾಮಿ ಗುಂಡಾಪುರ, ದಿಲೀಪ್ ಹೊನ್ನವಳ್ಳಿ, ಡಾ.ಕೆ.ಎಲ್.ದಿವ್ಯಾ, ನಿರ್ಮಲಾ ಶೆಟ್ಟರ್, ನಾರಾಯಣಪ್ಪ ಕೋಲಾರ, ಬಸವಣ್ಣ ಎಸ್.ಮೂಕಹಳ್ಳಿ, ಮಹಾದೇವ ಬಸರಕೋಡೆ, ಮಿಲನಾ ಭರತ್, ಜೆ.ಮಹಾದೇವ ಕಲ್ಕುಣಿಕೆ, ಎಂ.ಎನ್.ಮುನಿರಾಜು, ಎಸ್.ಕೆ.ಮಂಜುನಾಥ್, ಯಲ್ಲಪ್ಪ ಎಂ.ಮರ್ಜೇಡ್, ಯೋಗೇಶ್ ಕುಮಾರ್, ರವೀಂದ್ರ, ಮೈ.ನಾ.ಲೋಕೇಶ್, ವಿಶ್ವನಾಥ್ ಎನ್.ನೇರಳಕಟ್ಟೆ, ಸೋಮನಾಥ ಗೀತಯೋಗಿ, ಸಮುದ್ರವಳ್ಳಿ ವಾಸು, ವಸುಂಧರಾ, ಡಾ.ಸತ್ಯಮಂಗಲ ಮಹದೇವ, ಡಾ.ಡಿ.ಸ್ಮಿತಾರೆಡ್ಡಿ, ಸೂರ್ಯಕೀರ್ತಿ, ಡಾ.ಸಮೀರ್ ಹಾದಿಮನಿ, ಸುಜಾತ ವಿಶ್ವನಾಥ್, ಸತೀಶ್ ಕುಮಾರ್, ಡಾ.ಸುಜಾತ ಲಕ್ಷ್ಮೀಪುರ, ಪ್ರಭಾಕರ್ ಹೆಗ್ಗಂದೂರು, ರಾಜೇಶ್ ಹೊನ್ನೇನಹಳ್ಳಿ, ಎಂ.ಡಿ.ಚಂದೇಗೌಡ, ಫರ್ಹಾನಾಜ್ ಮಸ್ಕಿ, ಸಬ್ಬನಹಳ್ಳಿ ಶಶಿಧರ್ ಕವನ ವಾಚನ ಮಾಡಿದರು.
ಮೆಚ್ಚುಗೆ : ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ್ದ ಯುವಕವಿಗಳು ಮಹಿಳೆ, ಪರಿಸರ, ದೌರ್ಜನ್ಯ, ಧರ್ಮ ಇತ್ಯಾದಿ ವಿಷಯಗಳ ಬಗ್ಗೆ ಕವಿತೆಗಳ ಮೂಲಕ ಬೆಳಕು ಚೆಲ್ಲಿದರು. ಇಡೀ ಸಭಾಂಗಣ ಭರ್ತಿಯಾಗಿತ್ತು. ಸಣ್ಣ ಸದ್ದನ್ನು ಮಾಡದೆ ಸಭಿಕರು ಕವಿತೆಗಳನ್ನು ಆಲಿಸಿ, ಪ್ರೋತ್ಸಾಹಿಸಿದರು.