ರಾಜ್ಯ

ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ತರಬೇಕು: ಪ್ರತಿಪಕ್ಷ ನಾಯಕ ಆರ್‌.ಅಶೋಕ್‌

ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಕಾಂಗ್ರೆಸ್‌ ಸರ್ಕಾರ ಕಾನೂನು ಹಾಳುಗೆಡವಿದೆ. ಆದ್ದರಿಂದ ರಾಷ್ಟ್ರಪತಿ ಆಡಳಿತ ತರಬೇಕೆಂದು ರಾಜ್ಯಪಾಲರಿಗೆ ಮನವಿ ಮಾಡುತ್ತೇನೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಹೇಳಿದರು.

ರಾಜ್ಯ ಸರ್ಕಾರದ ವಿರುದ್ಧ ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗ ಬಿಜೆಪಿ-ಜೆಡಿಎಸ್‌ನಿಂದ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಉಪಮುಖ್ಯಮಂತ್ರಿಯೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕು. ಆದರೆ ಅವರು ಕಲ್ಲು ಹೊಡೆಯಿರಿ, ಟಯರ್‌ ಸುಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಬಿಜೆಪಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದೆ. ಈ ಸರ್ಕಾರವೇ ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡುತ್ತಿದೆ. ಕಾಂಗ್ರೆಸ್‌ ನಾಯಕರು, ತಮ್ಮವರು ಪ್ರತಿಭಟನೆ ಮಾಡುತ್ತಾರೆ, ನೀವು ಸಹಕಾರ ನೀಡಿ ಎಂದು ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಪೊಲೀಸರ ಕೈ ಕಟ್ಟಿ ಹಾಕಿ ಕಾನೂನು ಸುವ್ಯವಸ್ಥೆ ಹಾಳುಗೆಡವಿದ್ದಾರೆ. ಆದ್ದರಿಂದ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ತರಬೇಕೆಂದು ರಾಜ್ಯಪಾಲರಿಗೆ ಮನವಿ ಮಾಡುತ್ತೇನೆ ಎಂದರು.

ಮುಡಾ ಹಗರಣದಲ್ಲಿ 4-5 ಸಾವಿರ ಕೋಟಿ ರೂ. ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ 187 ಕೋಟಿ ರೂ. ಅಕ್ರಮ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಸ್ವತಃ ಲೂಟಿಕೋರರಾಗಿದ್ದು, ಅವರು ಅಧಿಕಾರದಿಂದ ಕೆಳಕ್ಕಿಳಿಯಬೇಕೆಂದು ಜನರು ಹೇಳುತ್ತಿದ್ದಾರೆ. ಮುಖ್ಯಮಂತ್ರಿಯವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸದಿದ್ದರೂ ಅವರು ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಕಳ್ಳತನ ಮಾಡಿದ್ದಾರೆ, ಲೂಟಿ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಆದರೆ ಮುಖ್ಯಮಂತ್ರಿಯವರು ಶಾಸಕಾಂಗ ಪಕ್ಷದ ಬೆಂಬಲವನ್ನು ತೋರಿಸುತ್ತಿದ್ದಾರೆ. ಇದರಿಂದ ಏನು ಪ್ರಯೋಜನ ಎಂದು ಪ್ರಶ್ನೆ ಮಾಡಿದರು.

ವಿಧಾನಸಭೆಯಲ್ಲಿ ಮುಡಾ ಹಗರಣ ಕುರಿತು ಬಿಜೆಪಿ ಚರ್ಚಿಸಲು ಮುಂದಾದಾಗ ಸಿಎಂ ಸಿದ್ದರಾಮಯ್ಯ ಪಲಾಯನ ಮಾಡಿದ್ದಾರೆ. ಅಲ್ಲಿ 224 ಶಾಸಕರು, ಮಾಧ್ಯಮಗಳು, ಅಧಿಕಾರಿಗಳಿದ್ದರೂ, ಉತ್ತರ ನೀಡಲಿಲ್ಲ. ವಿರೋಧ ಪಕ್ಷವಾಗಿ ಕರ್ತವ್ಯದಂತೆ ಬಿಜೆಪಿ ಪಾದಯಾತ್ರೆ ಮಾಡಿದೆ. ಆದರೆ ಸರ್ಕಾರದ ಅಧಿಕಾರ ಬಳಸಿಕೊಂಡು ಕಾಂಗ್ರೆಸ್‌ ಸಮಾವೇಶ ಮಾಡಿದೆ. ಇದನ್ನು ಸರ್ಕಾರ ಎನ್ನುತ್ತಾರೆಯೇ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ ಸರ್ಕಾರದ ಹಗರಣದ ಕುರಿತು ಬಿಜೆಪಿ, ಜೆಡಿಎಸ್‌ ಮಾತ್ರ ಪ್ರತಿಭಟಿಸುತ್ತಿಲ್ಲ. ಮಾಧ್ಯಮಗಳು ನಮಗಿಂತ ಮೊದಲೇ ಹಗರಣದ ತನಿಖೆಯ ಸುದ್ದಿಗಳನ್ನು ಪ್ರಕಟ ಮಾಡಿವೆ. ಜನರಿಗೂ ಈಗ ಸರ್ಕಾರದ ಮೇಲೆ ಅನುಮಾನ ಬಂದಿದೆ. ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಟಿ.ಜೆ.ಅಬ್ರಹಾಂ ಕೋರಿದ್ದಾರೆಯೇ ಹೊರತು ಬಿಜೆಪಿ ಕಾರ್ಯಕರ್ತರು ಕೋರಿಕೆ ಸಲ್ಲಿಸಿಲ್ಲ. ಸಾರ್ವಜನಿಕರು, ಸಾಮಾಜಿಕ ಕಾರ್ಯಕರ್ತರು ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ರಾಜ್ಯಪಾಲರು ತನಿಖೆಗೆ ಅವಕಾಶ ನೀಡಿದ್ದಾರೆಯೇ ಹೊರತು ಸರ್ಕಾರ ವಜಾ ಮಾಡಿಲ್ಲ ಎಂದರು.

ಬಿ.ಎಸ್‌.ಯಡಿಯೂರಪ್ಪ, ಎಲ್‌.ಕೆ.ಅಡ್ವಾಣಿ, ರಾಮಕೃಷ್ಣ ಹೆಗಡೆ ಅವರ ಮೇಲೆ ಆರೋಪ ಬಂದಾಗ ರಾಜೀನಾಮೆ ಪಡೆಯಲಾಗಿತ್ತು. ಸಚಿವ ಬಿ.ನಾಗೇಂದ್ರ ಅವರ ತಪ್ಪು ಇಲ್ಲವಾದರೆ ರಾಜೀನಾಮೆ ಕೊಟ್ಟಿದ್ದು ಏಕೆ? ದಲಿತರಾದರೆ ರಾಜೀನಾಮೆ ಕೊಡಬೇಕು. ಆದರೆ ಸಿದ್ದರಾಮಯ್ಯ ಮಾತ್ರ ರಾಜೀನಾಮೆ ಕೊಡಬಾರದು ಎಂದರೆ ಹೇಗೆ? 5 ಲಕ್ಷ ರೂ.ಗೆ ಜಮೀನು ಪಡೆದು 62 ಕೋಟಿ ರೂ. ಕೇಳುವ ಯೋಜನೆ ರಾಜ್ಯದಲ್ಲಿದ್ದರೆ ಎಲ್ಲರಿಗೂ ತಿಳಿಸಲಿ. ಇಂತಹ ಲೂಟಿಕೋರರಿಗೆ ಶಿಕ್ಷೆಯಾಗಬೇಕು ಎಂದರು.

ರಾಜ್ಯಪಾಲರ ಚಿತ್ರ ಸುಡುವುದು ಸಂವಿಧಾನಕ್ಕೆ ಮಾಡುವ ಅಪಚಾರ. ಕಳೆದ ವರ್ಷ ಮಾಡಿದ ಪ್ರತಿಭಟನೆಗೆ ಈಗ ನಮ್ಮ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಇಂತಹ ದ್ವೇಷ ರಾಜಕಾರಣ ಮಾಡುವ ಕಾಂಗ್ರೆಸ್‌ ನಾಯಕರು ಎಷ್ಟು ದಿನ ಅಧಿಕಾರದಲ್ಲಿರುತ್ತಾರೆ? ಅನ್ಯಾಯದ ವಿರುದ್ಧ, ಜನರ ಪರವಾಗಿ ಹೋರಾಡುವ ಹಕ್ಕು ವಿರೋಧ ಪಕ್ಷದಲ್ಲಿರುವ ಎಲ್ಲ ಶಾಸಕರಿಗೂ ಇದೆ. ಬಿಜೆಪಿ ಕೂಡ ಕಾನೂನು ಪ್ರಕಾರ ಮುಂದೆ ಹೆಜ್ಜೆ ಇಡಲಿದೆ ಎಂದರು.

ವಾಸು ವಿ ಹೊಂಗನೂರು

ಮೂಲತಃ ಚಾಮರಾಜನಗರ ಜಿಲ್ಲೆಯ ಹೊಂಗನೂರು ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಪದವಿಯಲ್ಲಿ ಪತ್ರಿಕೋದ್ಯಮ ವಿಭಾಗ ಆಯ್ದುಕೊಂಡು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ 2020ರಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದೆ. ಪತ್ರಿಕೋದ್ಯಮದಲ್ಲಿ 3 ವರ್ಷಗಳ ಅನುಭವವಿದ್ದು, ಕಳೆದ ಒಂದು ವರ್ಷದಿಂದ ಆಂದೋಲನ ದಿನಪತ್ರಿಕೆಯಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಕಳೆದ 6 ತಿಂಗಳಿನಿಂದ ಆಂದೋಲನ ಡಿಜಿಟಲ್‌ ವಿಭಾಗದಲ್ಲಿ ತೊಡಗಿಸಿಕೊಂಡಿದ್ದೇನೆ. ಕ್ರಿಕೆಟ್‌ ಮೇಲೆ ಎಲ್ಲಿಲ್ಲದ ಪ್ರೀತಿಯಿದ್ದು, ಪ್ರವಾಸ, ಇತಿಹಾಸ ಅಧ್ಯಯನ ಕಡೆ ಒಲವು ಹೆಚ್ಚು. ಪತ್ರಿಕಾ ರಂಗದಲ್ಲಿ ಕ್ರೀಡಾ ವಿಭಾಗದಲ್ಲಿ ಹೆಚ್ಚು ಆಸಕ್ತಿ ಇದೆ‌. ಮೊಬೈಲ್‌ ನಂಬರ್:‌ 9620318288

Recent Posts

ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ: ಇಬ್ಬರ ಬಂಧನ

ಮಹೇಂದ್ರ ಹಸಗೂಲಿ, ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು ಗುಂಡ್ಲುಪೇಟೆ: ಪಟ್ಟಣದ ಜನತಾ ಕಾಲೋನಿಯ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿ ವೇಶ್ಯಾವಾಟಿಕೆ…

8 hours ago

ಭಾರತ-ಯುರೋಪ್‌ ಒಕ್ಕೂಟ ವ್ಯಾಪಾರ ಒಪ್ಪಂದಕ್ಕೆ ಸಹಿ

ನವದೆಹಲಿ: ಮದರ್‌ ಆಫ್‌ ಆಲ್‌ ಡೀಲ್ಸ್‌ ಎಂದೇ ಕರೆಯಲ್ಪಡುವ ಭಾರತ-ಯುರೋಪ್‌ ಒಕ್ಕೂಟವು ಮುಕಕ್ತ ವ್ಯಾಪಾರ ಒಪ್ಪಂದಕ್ಕೆ ಇಂದು ಅಧಿಕೃತವಾಗಿ ಸಹಿ…

12 hours ago

ಶಿಡ್ಲಘಟ್ಟ ಕೇಸ್‌ನಲ್ಲಿ ಕಾನೂನಿನಂತೆ ಕ್ರಮ: ಸಚಿವ ಭೈರತಿ ಸುರೇಶ್‌

ಬೆಂಗಳೂರು: ಶಿಡ್ಲಘಟ್ಟದಲ್ಲಿ ಪೌರಾಯುಕ್ತಗೆ ಧಮ್ಕಿ ಹಾಕಿದ ಪ್ರಕರಣದಲ್ಲಿ ಕಾಂಗ್ರೆಸ್‌ ಮುಖಂಡ ರಾಜೀವ್‌ಗೌಡನನ್ನು ಸರ್ಕಾರ ರಕ್ಷಣೆ ಮಾಡಲ್ಲ. ಕಾನೂನು ಪ್ರಕಾರ ಶಿಕ್ಷೆ…

12 hours ago

ಪಿರಿಯಾಪಟ್ಟಣ: ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ: ಸವಾರ ಸಾವು

ಪಿರಿಯಾಪಟ್ಟಣ: ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್‌ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗೋಣಿಕೊಪ್ಪ-ಪಿರಿಯಾಪಟ್ಟಣ ರಸ್ತೆಯಲ್ಲಿ ನಡೆದಿದೆ. ತಾಲ್ಲೂಕಿನ…

13 hours ago

ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ: ಲೇಖಕಿಯರಿಂದ ಕಥಾಸಂಕಲನ ಆಹ್ವಾನ

ಮೈಸೂರು: ಮೈಸೂರಿನ ಸಮತಾ ಅಧ್ಯಯನ ಕೇಂದ್ರ(ರಿ)ವು ಸಂಸ್ಥಾಪಕ ಅಧ್ಯಕ್ಷೆ, ಖ್ಯಾತ ಸ್ತ್ರೀವಾದಿ ವಿಮರ್ಶಕಿ ಹಾಗೂ ಲೇಖಕಿ ಡಾ.ವಿಜಯಾ ದಬ್ಬೆ ಅವರ ಹೆಸರಿನಲ್ಲಿ 2022…

13 hours ago

ಗುಂಡ್ಲುಪೇಟೆ: ಬೊಮ್ಮಲಾಪುರದಲ್ಲಿ ವಾಸದ ಮನೆಗೆ ನುಗ್ಗಿದ ಕಡವೆ

ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು ಗುಂಡ್ಲುಪೇಟೆ: ತಾಲ್ಲೂಕಿನ ಬೊಮ್ಮಲಾಪುರ ಗ್ರಾಮದ ದೊರೆ ಎಂಬುವವರ ವಾಸದ ಮನೆಗೆ ನುಗ್ಗಿದ ಕಡವೆಯನ್ನು…

13 hours ago