ಬೆಂಗಳೂರು : ಭ್ರಷ್ಟಚಾರ ತೊಲಗಿಸಿ, ಬೆಂಗಳೂರು ಉಳಿಸಿ ಎಂಬ ಘೋಷಣೆಯೊಂದಿಗೆ ಕಾಂಗ್ರೆಸ್ ಬೆಂಗಳೂರಿನಲ್ಲಿ 300ಕ್ಕೂ ಹೆಚ್ಚು ಕಡೆ ಪ್ರತಿಭಟನೆ ನಡೆಸಿದೆ.
ವಾರ್ಡ್ವಾರು ಸ್ಥಳೀಯ ನಾಯಕರು, ಮುಖಂಡರು ಪ್ರತಿಭಟನೆ ನಡೆಸಿ ಬಿಜೆಪಿ ಸರ್ಕಾರದ ಭ್ರಷ್ಟಚಾರ, ಬೆಂಗಳೂರಿನ ರಸ್ತೆಗಳ ಅವ್ಯವಸ್ಥೆ, ಶೇ.40ರಷ್ಟು ಕಮಿಷನ್ ದಂಧೆ ಸೇರಿದಂತೆ ಅನೇಕ ವಿಚಾರಗಳ ಕುರಿತಂತೆ ವಾಗ್ದಾಳಿ ನಡೆಸಿದರು.
ಶಾಂತಿನಗರ ವಿಧಾನಸಭಾ ಕ್ಷೇತ್ರದ ಟ್ರಿನಿಟಿ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ಸಿಂಗ್ ಸುರ್ಜೇವಾಲ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಶಾಸಕರಾದ ಎನ್.ಎ.ಹ್ಯಾರಿಸ್, ರಿಜ್ವಾನ್ ಅರ್ಹದ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಬಿಜೆಪಿ ಸರ್ಕಾರದ ವಿರುದ್ಧ ಆರೋಪಗಳ ಮಾಹಿತಿ ಒಳಗೊಂಡ ಫಲಕಗಳನ್ನು ಹಿಡಿದು ಕಾಂಗ್ರೆಸ್ ನಾಯಕರು ರಸ್ತೆ ಬದಿಯಲ್ಲಿ ನಿಂತು ಮೌನ ಪ್ರತಿಭಟನೆ ನಡೆಸಿದರು. ಭ್ರಷ್ಟಚಾರದಿಂದ ಬೆಂಗಳೂರಿನ ಅಭಿವೃದ್ಧಿ ಹಾಳಾಗಿದ್ದು, ಮಹಾನಗರಿಯನ್ನು ಉಳಿಸಬೇಕಾದರೆ ಬಿಜೆಪಿಯನ್ನು ತೊಲಗಿಸಬೇಕು ಎಂದು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿದರು.
ಈ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್, ಬೆಂಗಳೂರಿನಲ್ಲಿರುವ ರಸ್ತೆಗಳ ಗುಂಡಿಗಳಿಗೆ, ತಾಜ್ಯ ವಿಲೇವಾರಿಯ ಅದ್ವಾನಗಳಿಗೆ ಬಿಜೆಪಿ ಸರ್ಕಾರ ಉತ್ತರ ನೀಡಬೇಕು. ಕಾಂಗ್ರೆಸ್ ಪಕ್ಷ ಹಲವು ದಿನಗಳಿಂದ ನಿರಂತರವಾಗಿ ಪ್ರಶ್ನೆಗಳನ್ನು ಕೇಳುತ್ತಲೇ ಬಂದಿದೆ. ಇದಕ್ಕೆ ಉತ್ತರ ಕೊಡಲು ಬಿಜೆಪಿಯಿಂದ ಸಾಧ್ಯವಾಗಿಲ್ಲ ಎಂದು ಕಿಡಿಕಾರಿದರು.
ಬಿಜೆಪಿ ಆಡಳಿತದಲ್ಲಿ ಭ್ರಷ್ಟಚಾರ ಮುಗಿಲು ಮುಟ್ಟಿದೆ. ಕಮಿಷನ್ ಪ್ರಮಾಣ ಶೇ.40ರಿಂದ 50ಕ್ಕೆ ಹೆಚ್ಚಾಗಿದೆ. ಚುನಾವಣೆಯ ವೇಳೆ ಬಿಜೆಪಿ ನೀಡಿದ್ದ ಯಾವ ಭರವಸೆಗಳನ್ನೂ ಈಡೇರಿಸಿಲ್ಲ ಎಂದು ಆರೋಪಿಸಿದರು.
ಈ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲೂ ವಸೂಲಿ ದಂಧೆಯನ್ನು ವ್ಯಾಪಕವಾಗಿ ಮಾಡುತ್ತಿದೆ. ಪ್ರತಿಠಾಣೆ ವ್ಯಾಪ್ತಿಯಲ್ಲಿ ಪ್ರತಿ ತಿಂಗಳೂ ಬೀದಿ ವ್ಯಾಪಾರಿಗಳಿಂದಲೇ ಒಂದು ಕೋಟಿ ರೂಪಾಯಿ ಲಂಚ ವಸೂಲಿ ಮಾಡಲಾಗುತ್ತಿದೆ. ದಿನ ನಿತ್ಯ 200ರಿಂದ 500 ರೂಪಾಯಿವರೆಗೂ ಲಂಚ ಪಡೆದು ಅವರನ್ನು ಸುಲಿಗೆ ಮಾಡಲಾಗುತ್ತಿದೆ. ಪೆÇಲೀಸಿನವರು, ಬಿಬಿಎಂಪಿಯವರು ಪ್ರತಿದಿನ ಕಿರುಕೂಳ ನೀಡುತ್ತಿದ್ದಾರೆ. ಇನ್ನೂ ಕಸ ಸಾಗಾಣಿಕೆದಾರರಂತೂ ಸರ್ಕಾರದ ವತಿಯಿಂದ ನೀಡುತ್ತಿರುವ ಕಿರುಕುಳದಿಂದ ಬೇಸತ್ತಿದ್ದಾರೆ. ಜನ ಸಾಮಾನ್ಯರು ಭ್ರಷ್ಟಚಾರದಿಂದ ರೋಸತ್ತು ಹೋಗಿದ್ದಾರೆ. ಜನರ ಧ್ವನಿಯಾಗಿ ನಾವಿಂದು ಬೆಂಗಳೂರಿನ ಪ್ರತಿ ವಾರ್ಡ್ನಲ್ಲೂ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಹೇಳಿದರು.
ಬಿಜೆಪಿ ಬೆಂಗಳೂರನ್ನು ಭ್ರಷ್ಟಚಾರ ರಾಜಧಾನಿಯನ್ನಾಗಿ ಮಾಡಿದೆ. ಜನ ಸಂಕಷ್ಟಕ್ಕೆ ಈಡಾಗಿದ್ದಾರೆ. ಸಮಸ್ಯೆಗಳಿಗೆ ಪರಿಹಾರ ಬೇಕೆಂದರೆ ಕಾಂಗ್ರೆಸ್ನಿಂದ ಮಾತ್ರ ಸಾಧ್ಯ ಎಂಬ ಭಾವನೆ ನೆಲೆಯೂರಿದೆ. ಭ್ರಷ್ಟಚಾರದ ಕುರಿತು ಬಹಿರಂಗ ಚರ್ಚೆಗೆ ನಾನು ಸಿದ್ಧನಿದ್ದೇನೆ. ಪ್ರಶ್ನೆ ಕೇಳಲು ಮತ್ತು ಚರ್ಚೆ ಮಾಡಲು ನಾನು ಆಹ್ವಾನಿಸುತ್ತಿದ್ದೇನೆ. ಸಾಮಾಜಿಕ ಜಾಲತಾಣಗಳಲ್ಲಿ ಪೆÇೀಸ್ಟ್ಗಳನ್ನು ಹಾಕುವ ಬದಲು ಮುಖ್ಯಮಂತ್ರಿಯವರು ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
ಸಿದ್ದರಾಮಯ್ಯ ಮಾತನಾಡಿ, ಬಿಜೆಪಿ ಸರ್ಕಾರ ರಾಜ್ಯವನ್ನು ಹಾಳು ಮಾಡಿದೆ. ಭ್ರಷ್ಟಚಾರ ಮುಗಿಲು ಮುಟ್ಟಿದೆ. ಲಂಚ ಕೊಡಲಾಗದೆ ಜನ ಸಂಕಷ್ಟದಲ್ಲಿದ್ದಾರೆ. ಜನರ ಭಾವನೆ ಅರಿತ ಬಿಜೆಪಿ ಬಿಬಿಎಂಪಿ ಚುನಾವಣೆ ಮಾಡುತ್ತಿಲ್ಲ. ಯಾವುದೇ ಕ್ಷಣದಲ್ಲೂ ಪಾಲಿಕೆ ಚುನಾವಣೆ ನಡೆದಿದ್ದರೆ ಕಾಂಗ್ರೆಸ್ ಗೆಲ್ಲುವುದು ಖಚಿತವಾಗಿದೆ. ಅದಕ್ಕಾಗಿಯೇ ವಿಧಾನಸಭೆ ಚುನಾವಣೆ ಬಳಿಕ ಪಾಲಿಕೆ ಚುನಾವಣೆ ನಡೆಸಲು ಸರ್ಕಾರ ಹುನ್ನಾರ ನಡೆಸಿದೆ. ಬಿಜೆಪಿ ಅಕಾರ ವಿಕೇಂದ್ರೀಕರಣಕ್ಕೆ ವಿರೋಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಈ ಬಾರಿ ಕಾಂಗ್ರೆಸ್ ಪರವಾಗಿ ಒಲವು ವ್ಯಕ್ತವಾಗಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 28 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 20ರಲ್ಲಿ ಗೆಲ್ಲುಲಿದೆ. ಅದಕ್ಕೆ ಹೆದರಿಕೊಂಡು ಬಿಜೆಪಿ ಚುನಾವಣೆಗೆ ಹಿಂದೇಟು ಹಾಕುತ್ತಿದೆ ಎಂದು ಹೇಳಿದರು.
ರಾಮಲಿಂಗಾರೆಡ್ಡಿ ಮಾತನಾಡಿ, ಪ್ರಧಾನ ಮಂತ್ರಿಯವರು ಈ ಹಿಂದೆ ರಾಜ್ಯದ ಜನ ಕಷ್ಟದಲ್ಲಿದ್ದಾಗ ಬರಲಿಲ್ಲ. ನೆರೆ ಹಾವಳಿಯಿಂದ ರಾಜ್ಯದ ಬಹುತೇಕ ಜನ ಸಂಕಷ್ಟದಲ್ಲಿದ್ದರು. ಕೊರೊನಾ ಸಮಯದಲ್ಲಿ ಪಡಬಾರದ ಕಷ್ಟ ಪಟ್ಟರು. ಆಗೇಲ್ಲಾ ಪ್ರಧಾನಿ ಬರಲೇ ಇಲ್ಲ. ರಾಜ್ಯದ ಜನರು ಅವರಿಗೆ ನೆನಪಾಗಲಿಲ್ಲ. ತಮಿಳುನಾಡು, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ ಸೇರಿ ಹಲವು ರಾಜ್ಯಗಳಿಗೆ ಭೇಟಿ ನೀಡಿದ್ದರೂ, ರಾಜ್ಯಕ್ಕೆ ಬರಲಿಲ್ಲ. ಇಲ್ಲಿ 25 ಸಂಸದರು ಗೆದ್ದಿದ್ದರೂ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ನೆರವು ನೀಡಲಿಲ್ಲ ಎಂದರು.
ಈಗ ಚುನಾವಣೆ ಹತ್ತಿರ ಬಂದಿದೆ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿ ಎಲ್ಲಾ ನಾಯಕರು ಸಾಲುಗಟ್ಟಿ ಬರುತ್ತಿದ್ದಾರೆ. ಪ್ರಧಾನಿ ಅವರು ಹಕ್ಕು ಪತ್ರ ಕೊಡಲು ಬರುತ್ತಾರೆ, ನಾಳೆ ರೆಷನ್ ಕಾರ್ಡ್ ಕೊಡಲು ಬಂದರೂ ಬರಬಹುದು ಎಂದು ಲೇವಡಿ ಮಾಡಿದರು.