prajwal revanna
ಬೆಂಗಳೂರು : ದೇಶದ್ಯಾಂತ ಭಾರೀ ಸಂಚಲನ ಸೃಷ್ಟಿಸಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಮೊಮ್ಮಗ ಹಾಗೂ ಮಾಜಿ ಸಚಿವ ಹೆಚ್.ಡಿ ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಆತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಆರೋಪದಡಿ ಜೈಲು ಪಾಲಾಗಿ ಇಂದಿಗೆ ಸರಿಯಾಗಿ ಒಂದು ವರ್ಷ!
ಸದ್ಯ ಪರಪ್ಪನ ಆಗ್ರಹಾರ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ ಅಂದಿನಿಂದ ಇಂದಿನವರೆಗೂ ಜಾಮೀನು ಪಡೆಯಲು ಹೈಕೋರ್ಟ್ ನಿಂದ ಸುಪ್ರೀಂಕೋರ್ಟ್ ನವರೆಗೂ ಜಾಮೀನು ಪಡೆಯಲು ನಡೆಸಿದ ಎಲ್ಲಾ ಪ್ರಯತ್ನಗಳು ವಿಫಲವಾಗಿವೆ.
ಪರಪ್ಪನ ಆಗ್ರಹಾರದ ಜೈಲೇ ಸದ್ಯಕ್ಕೆ ಖಾಯಂ ನಿವಾಸವಾಗಿದ್ದು, ಬಂಧಿತ ಆರೋಪಿಗೆ ಯಾವುದೇ ರೀತಿಯ ವಿಶೇಷ ಸವಲತ್ತುಗಳು ನೀಡುತ್ತಿಲ್ಲ. ಸಾಮಾನ್ಯ ಖೈದಿಯೊಬ್ಬನಿಗೆ ನೀಡಲಾಗುವ ಸೌಲಭ್ಯಗಳನ್ನು ಮಾತ್ರ ಜೈಲುಧಿಕಾರಿಗಳು ನೀಡುತ್ತಾರೆ.
2024 ಮೇ 30 ರಂದು ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ’ ಆರೋಪದಡಿ ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ತಡರಾತ್ರಿ ಬಂಧಿಸಿದ್ದರು.
2024 ರ ಲೋಕಸಭಾ ಚುನಾವಣೆಯ ಮತದಾನದ ನಂತರ ದೇಶದಿಂದ ಪರಾರಿಯಾಗಿದ್ದ ಪ್ರಜ್ವಲ್, 35 ದಿನಗಳ ಬಳಿಕ ಜರ್ಮನಿಯಿಂದ ನಗರದ ವಿಮಾನ ನಿಲ್ದಾಣಕ್ಕೆ ಮೇ 30 ಗುರುವಾರ ತಡರಾತ್ರಿ 12.50 ಗಂಟೆಗೆ ಸುಮಾರಿಗೆ ಬಂದಿಳಿಯುತ್ತಿದ್ದಂತೆ ನಿಲ್ದಾಣದಲ್ಲಿ ಮೊಕ್ಕಾಂ ಹೂಡಿದ್ದ ಎಸ್‌ಐಟಿ ಅಧಿಕಾರಿಗಳು, ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್) ಸಿಬ್ಬಂದಿ ಹಾಗೂ ವಲಸೆ ಅಧಿಕಾರಿಗಳ ಸಹಾಯದಿಂದ ಪ್ರಜ್ವಲ್ ನನ್ನು ಬಂಧಿಸಿದ್ದರು.
ಹೊಳೆನರಸೀಪುರ ಟೌನ್ ಹಾಗೂ ಸಿಐಡಿ ಠಾಣೆಗಳಲ್ಲಿ ದಾಖಲಾಗಿದ್ದ ‘ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ’ ಪ್ರಕರಣದ ಪ್ರಮುಖ ಆರೋಪಿ ಪ್ರಜ್ವಲ್, ಬಂಧನ ಭೀತಿಯಲ್ಲಿ ತಲೆಮರೆಸಿ ಕೊಂಡಿದ್ದ. ಇವರ ಬಂಧನಕ್ಕೆ ಬ್ಲೂ ಕಾರ್ನರ್ ನೋಟಿಸ್ ಹಾಗೂ ನ್ಯಾಯಾಲಯದಿಂದ ವಾರಂಟ್ ಜಾರಿಯಾಗಿತ್ತು.
ಪ್ರಕರಣದ ಸಂಬಂಧ ಅಜ್ಞಾತ ಸ್ಥಳದಿಂದ ಇತ್ತೀಚೆಗೆ ವಿಡಿಯೊ ಬಿಡುಗಡೆ ಮಾಡಿದ್ದ ಪ್ರಜ್ವಲ್, ‘ಮೇ 31ರಂದು ಶುಕ್ರವಾರ ಎಸ್‌ಐಟಿ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗುತ್ತೇನೆ’ ಎಂದು ಹೇಳಿದ್ದರು.
‘ಜರ್ಮನಿಯ ಮ್ಯೂನಿಕ್ ನಗರದ ನಿಲ್ದಾಣದಿಂದ ವಿಮಾನದಲ್ಲಿ (ಲುಫ್ತಾನ್ಸಾ ಏರ್‌ಲೈನ್ಸ್‌ನ ಎಲ್‌ಎಚ್–764) ಗುರುವಾರ ಮಧ್ಯಾಹ್ನ ಬೆಂಗಳೂರಿನತ್ತ ಹೊರಟಿದ್ದರು. ತಡರಾತ್ರಿ 12.50 ಗಂಟೆ ಸುಮಾರಿಗೆ ಬೆಂಗಳೂರಿನ ನಿಲ್ದಾಣದ ಟರ್ಮಿನಲ್–2ಕ್ಕೆ ವಿಮಾನ ಬಂದಿಳಿಯಿತು.
ಕೆಲ ನಿಮಿಷಗಳ ನಂತರ ವಿಮಾನದಿಂದ ಇಳಿದ ಪ್ರಜ್ವಲ್ ರೇವಣ್ಣ, ಗೇಟ್ ಮೂಲಕ ನಿಲ್ದಾಣದೊಳಗೆ ಪ್ರವೇಶಿಸಿದರು. ಸ್ಥಳದಲ್ಲಿ ಹಾಜರಿದ್ದ ಭದ್ರತಾ ಸಿಬ್ಬಂದಿ ಹಾಗೂ ವಲಸೆ ಅಧಿಕಾರಿಗಳು, ಪ್ರಜ್ವಲ್ ಅವರನ್ನು ವಶಕ್ಕೆ ಪಡೆದು ವಿಶೇಷ ಕೊಠಡಿಗೆ ಕರೆದೊಯ್ದು ಪರಿಶೀಲನೆ ನಡೆಸಿದರು. ಪ್ರಜ್ವಲ್ ಅವರ ಬೆರಳಚ್ಚು ಹಾಗೂ ಫೋಟೊ ಕ್ಲಿಕ್ಕಿಸಿಕೊಂಡು ದಾಖಲಿಸಿಕೊಂಡಿದ್ದರು.
2024ರ ಎಪ್ರಿಲ್‌ನಲ್ಲಿ ನಡೆದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಕರ್ನಾಟಕದ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದ್ದಲ್ಲದೇ, ಈ ಪ್ರಕರಣವು ಕೇವಲ ರಾಜಕೀಯ ವಿವಾದವಾಗಿ ಉಳಿಯದೇ, ಸಾಮಾಜಿಕ, ನೈತಿಕ ಮತ್ತು ಕಾನೂನು ಚರ್ಚೆಗೆ ಕಾರಣವಾಗಿತ್ತು.
ಒಂದು ವರ್ಷದ ನಂತರ, ಸಂತ್ರಸ್ತರ ಸ್ಥಿತಿ, ಕಾನೂನು ಪ್ರಕ್ರಿಯೆಯ ಪ್ರಗತಿ ಮತ್ತು ಸಮಾಜದ ಮೇಲೆ ಬೀರಿದ ಪರಿಣಾಮವನ್ನು ಪರಿಶೀಲಿಸಿದಾಗ ಘಟನೆಯಲ್ಲಿ ನೊಂದವರು ಇನ್ನೂ ತಮ್ಮ ಸಾಮಾನ್ಯ ಜೀವನಕ್ಕೆ ಮರಳಿಲ್ಲ ಎನ್ನಲಾಗುತ್ತಿದೆ.
2024ರ ಎಪ್ರಿಲ್ 22ರಂದು ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ ಅಶ್ಲೀಲ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿದವು. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಈ ವೀಡಿಯೊಗಳಲ್ಲಿ ಕಾಣಿಸಿಕೊಂಡವರು ಇನ್ನೂ ಚೇತರಿಸಿಲ್ಲ ಎಂದು ತಿಳಿದು ಬಂದಿದೆ.
ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಡುಗಡೆಯಾದ ಅಶ್ಲೀಲ ವೀಡಿಯೊಗಳಿಂದ ಚುನಾವಣೆಯ ಮೇಲೆ ಪ್ರಭಾವ ಬೀರಿತ್ತು. ಇಂದಿಗೂ ಸಹ ಜೆಡಿಎಸ್ ಪಕ್ಷದ ಪ್ರಮುಖ ನಾಯಕರು ಘಟನೆಗಿಂತ ಹೆಚ್ಚಾಗಿ ಅಶ್ಲೀಲ ವೀಡಿಯೊ ಹರಿಬಿಟ್ಟವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಈ ಘಟನೆಯು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾದ ನಂತರ, ಕರ್ನಾಟಕ ಸರಕಾರವು ತಕ್ಷಣವೇ ವಿಶೇಷ ತನಿಖಾ ತಂಡ ರಚಿಸಿತು.ಈ ನಡುವೆ ಪ್ರಜ್ವಲ್ ರೇವಣ್ಣ ತಮ್ಮ ರಾಜತಾಂತ್ರಿಕ ಪಾಸ್‌ಪೋರ್ಟ್ ಬಳಸಿ ಜರ್ಮನಿಗೆ ಪರಾರಿಯಾದರು. ಇದು ತನಿಖೆಯನ್ನು ಇನ್ನಷ್ಟು ಸಂಕೀರ್ಣಗೊಳಿಸಿತು. ರಾಜ್ಯ ಸರಕಾರವು ಕೇಂದ್ರ ಸರಕಾರಕ್ಕೆ ಪಾಸ್‌ಪೋರ್ಟ್ ರದ್ದತಿಗೆ ಮನವಿ ಮಾಡಿತು, ಮತ್ತು ಎಸ್‌ಐಟಿ ತಂಡವು ಲುಕ್‌ಔಟ್ ನೋಟಿಸ್ ಜಾರಿಗೊಳಿಸಿತ್ತು.
ಪ್ರಸ್ತುತ, ಪ್ರಜ್ವಲ್ ರೇವಣ್ಣ ವಿರುದ್ಧ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿವೆ. ಮತ್ತು ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಪ್ರಕರಣದಲ್ಲಿ ಪ್ರಜ್ವಲ್‌ನ ತಂದೆ ಎಚ್.ಡಿ. ರೇವಣ್ಣ ಆರೋಪಿಯಾಗಿದ್ದು. ಜಾಮೀನಿನ ಮೇಲೆ ಹೊರಗಿದ್ದಾರೆ.
ಇನ್ನು ವೀಡಿಯೊದಲ್ಲಿ ಕಾಣಿಸಿಕೊಂಡ ಮಹಿಳೆಯರು ಸಂಕಷ್ಟಕ್ಕೀಡಾದರು. ಮಹಿಳೆಯರ ಕುಟುಂಬ ಸಂಬಂಧಗಳು ಹದಗೆಟ್ಟಿತ್ತು. ಮಾನಸಿಕವಾಗಿ ನೊಂದ ಮಹಿಳೆಯರ ಪೈಕಿ ಕೆಲವರು ಆತ್ಮಹತ್ಯೆಗೆ ಯತ್ನಿಸಿದ್ದರೆಂದು ತಿಳಿದು ಬಂದಿದೆ. ಇನ್ನು ಕೆಲವರು ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದರೂ ಎಂದು ಹೇಳಲಾಗುತ್ತದೆ.
ಘಟನೆ ನಡೆದು ಒಂದು ವರ್ಷ ಕಳೆದರೂ, ಈ ಪ್ರಕರಣದ ಸಂತ್ರಸ್ತರಿಗೆ ಪೂರ್ಣ ನ್ಯಾಯ ದೊರೆತಿಲ್ಲ. ಎಸ್‌ಐಟಿ ತನಿಖೆಯು ನಿಧಾನಗತಿಯಲ್ಲಿ ಸಾಗುತ್ತಿದ್ದು, ಕಾನೂನು ಪ್ರಕ್ರಿಯೆಯ ವಿಳಂಬವು ಸಂತ್ರಸ್ತರಲ್ಲಿ ನಿರಾಸೆ ಮೂಡಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಪ್ರಜ್ವಲ್ ರೇವಣ್ಣ ಜೈಲಿನಲ್ಲಿದ್ದರೂ, ಸಂತ್ರಸ್ತ ಮಹಿಳೆಯರು ಭಯದಲ್ಲಿ ಇದ್ದಾರೆ. ಹಾಸನ ಜಿಲ್ಲೆಯನ್ನು ಬಿಟ್ಟು ಬೇರೆ ಪ್ರದೇಶದಲ್ಲಿ ವಾಸವಾಗಿರುವ ಒಂದು ಕುಟುಂಬ ಸ್ವಾತಂತ್ರ್ಯವನ್ನೇ ಕಳೆದುಕೊಂಡಿದೆ ಎಂಬಂತೆ ಜೀವನ ನಡೆಸುತ್ತಿದೆ. ಮಹಿಳಾ ಸುರಕ್ಷತೆಗೆ ಸಂಬಂಧಿಸಿದ ಕಾನೂನುಗಳನ್ನು ಇನ್ನಷ್ಟು ಬಲಪಡಿಸುವ ಅಗತ್ಯವನ್ನು ಈ ಪ್ರಕರಣವು ಪ್ರತಿಪಾದಿಸುತ್ತದೆ.
ಈ ಮಹಿಳೆಯರು ತಮ್ಮ ಮಕ್ಕಳನ್ನೇ ಎದುರಿಸಲಾಗದ ಸ್ಥಿತಿಯಲ್ಲಿದ್ದಾರೆ ಎಂಬ ಮಾತು ನಿಜಕ್ಕೂ ಗಂಭೀರವಾದದ್ದು. ಇವರ ಹೇಳಿಕೆ ಮಹಿಳೆಯರ ಭೀಕರ, ಭಯಾನಕ ಪರಿಸ್ಥಿತಿಯನ್ನು ವಿವರಿಸುತ್ತದೆ. ಸಂತ್ರಸ್ತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಎಸ್‌ಐಟಿ ತಂಡವು ಕೆಲವು ಮಹಿಳೆಯರ ಹೇಳಿಕೆಗಳನ್ನು ದಾಖಲಿಸಿದೆ.
ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…
ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…
ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನದ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾದ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪೈಲಟ್‌ಗಳ ರಜಾ…
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…
ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…
ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…