ಬೆಂಗಳೂರು ನಿರ್ವಾತೃ ನಾಡಪ್ರಭು ಕೆಂಪೇಗೌಡ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಆಹ್ವಾನಿಸದಿರುವುದು ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷಗಳಾದ ಕಾಂಗ್ರೆಸ್, ಜಾ.ದಳದಲ್ಲಿ ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ.
ಎಚ್.ಡಿ.ದೇವೇಗೌಡರಿಗೆ ಆಹ್ವಾನ ನೀಡಲಾಗಿತ್ತು: ಬಿಜೆಪಿ
ಬೆಂಗಳೂರು: ಪ್ರಧಾನಿಯಾಗಿದ್ದ ಏಕೈಕ ಕನ್ನಡಿಗ ಎಚ್.ಡಿ.ದೇವೇಗೌಡರಿಗೆ ಮೊದಲ ಆಹ್ವಾನ ಪತ್ರ ಹೋಗಿದ್ದು, ಮಾತ್ರವಲ್ಲ ಖುದ್ದು ಮುಖ್ಯಮಂತ್ರಿ ಬಸವರಾಜ ಬೊವ್ಮಾಯಿ ದೂರವಾಣಿ ಕರೆ ಮಾಡಿ ಆಹ್ವಾನಿಸಿದ್ದಾರೆ. ಈ ವಿಷಯದಲ್ಲೂ ಸುಳ್ಳಾಡುವ ಜಾ.ದಳ ತನ್ನ ಸಮಯಸಾಧಕ ಬುದ್ಧಿ ಪ್ರದರ್ಶಿಸಿದೆ ಎಂದು ಟ್ವೀಟ್ ಮೂಲಕ ಬಿಜೆಪಿ ತಿರುಗೇಟು ನೀಡಿದೆ.
ಪತ್ರದ ಸಾರಾಂಶ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನ.೧೧ ರಂದು ಬೆಳಗ್ಗೆ ೧೧ಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಾಡಪ್ರಭು ಕೆಂಪೇಗೌಡರ ೧೦೮ ಅಡಿ ಎತ್ತರದ ಕಂಚಿನ ಭವ್ಯ ಪ್ರತಿಮೆ ಅನಾವರಣಗೊಳಿಸಲಿದ್ದಾರೆ. ಇದು ಆಧುನಿಕ ಕರ್ನಾಟಕದ ಇತಿಹಾಸದಲ್ಲಿ ಒಂದು ಸುವರ್ಣ ಘಳಿಗೆ, ಕೆಂಪೇಗೌಡರು ಐದು ನೂರು ವರ್ಷಗಳ ಹಿಂದೆ ನಿರ್ಮಿಸಿದ ಬೆಂಗಳೂರು ನಗರ ಈಗ ಎಲ್ಲಾ ಕ್ಷೇತ್ರಗಳ ಸೃಜನಶೀಲ ಮನಸ್ಸುಗಳಿಗೆ, ಸಾಧಕರಿಗೆ ಮತ್ತು ಕನಸುಗಾರರಿಗೆ ಅವಕಾಶ ಕಲ್ಪಿಸುವ ಒಂದು ಅನನ್ಯ ತಾಣವಾಗಿದೆ.
ಇಂತಹ ದೂರದೃಷ್ಟಿಯ ಮಹಿವಾನ್ವಿತರಿಗೆ ಸೂಕ್ತ ಮತ್ತು ಭವ್ಯ ಸ್ಮಾರಕ ಎನ್ನುವುದು ಇದುವರೆಗೆ ಇರಲಿಲ್ಲ. ಇದು ನಮ್ಮ ಸರ್ಕಾರದ ಅವಧಿಯಲ್ಲಿ ನಿಮ್ಮೆಲ್ಲರ ಸಹಕಾರದಿಂದ ಸಾಧ್ಯವಾಗಿದೆ. ನಮ್ಮೆಲ್ಲರ ಕನಸು ಕೈಗೂಡಿದಂತೆ ಎದ್ದು ನಿಂತಿರುವ ಪ್ರಗತಿಯ ಅನಾವರಣದ ಸುಮುಹೂರ್ತದಲ್ಲಿ ತಾವು ಭಾವಗಹಿಸಬೇಕು ಎಂದು ಈ ಪತ್ರದ ಮೂಲಕ ವಿನಂತಿಸುತ್ತಿರುವೆ.
ತಮ್ಮ ಉಪಸ್ಥಿತಿಯ ಸವಾರಂಭದ ಶೋಭೆ ಹೆಚ್ಚಿಸಲಿದ್ದು, ತಮ್ಮ ಆಗಮನದ ನಿರೀಕ್ಷೆಯಲ್ಲಿರುತ್ತೇನೆ. ಬನ್ನಿ ನಾಡ ಕಟ್ಟೋಣ ಎಂದು ದೇವೇಗೌಡರಿಗೆ ನ.೧೦ ರಂದು ಬರೆದಿರುವ ಪತ್ರದಲ್ಲಿ ತಿಳಿಸಲಾಗಿದೆ.
ಪತ್ರ ಬರೆದಿದ್ದು, ತಲುಪಿಸಿದ್ದು ಯಾವಾಗ?: ಜಾ.ದಳ
ಬಿಜೆಪಿ ಸಮರ್ಥನೆಗೆ ಪುನಃ ಜಾ.ದಳ ಕೆಂಡ ಕಾರಿದ್ದು, ತಪ್ಪನ್ನೇ ಲಜ್ಜೆಗೆಟ್ಟು ಸಮರ್ಥಿಸಿಕೊಳ್ಳುವುದು ಭಾರತೀಯ ಜನತಾ ಪಕ್ಷಕ್ಕೆ ಸಿದ್ಧಿಸಿರುವ ಕಲೆ ಎಂದು ಲೇವಡಿ ಮಾಡಿದೆ. ಕೆಂಪೇಗೌಡರ ಪ್ರತಿಮೆ ಅನಾವಣ ಕಾರ್ಯಕ್ರಮಕ್ಕೆ ಅಧಿಕೃತ ಆಹ್ವಾನ ಪತ್ರಿಕೆಯಲ್ಲಿ ಹೆಸರಿಲ್ಲ. ಆದರೆ ಮುಖ್ಯಮಂತ್ರಿಗಳೇ ಪತ್ರ ಬರೆದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಆಹ್ವಾನಿಸಿದ್ದಾರೆ ಎಂದು ಜನರ ದಿಕ್ಕು ತಪ್ಪಿಸುತ್ತಿರುವ ರಾಜ್ಯ ಬಿಜೆಪಿ ಸರ್ಕಾರ, ಅಸಲಿ ಕಥೆಯನ್ನೇ ಮುಚ್ಚಿಡುತ್ತಿದೆ ಎಂದು ಕಿಡಿಕಾರಿದೆ.
ನವೆಂಬರ್ ೧೧ರ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಪತ್ರ ಬರೆದಿದ್ದು ಯಾವಾಗ? ಆ ಪತ್ರವನ್ನು ಮಾಜಿ ಪ್ರಧಾನಿಯವರ ನಿವಾಸಕ್ಕೆ ತಲುಪಿಸಿದ್ದು ಯಾವಾಗ? ಎಂದು ಜಾ.ದಳ ಪ್ರಶ್ನಿಸಿದೆ.
ಪತ್ರದಲ್ಲಿ ಮಾಜಿ ಪ್ರಧಾನಿಗಳ ಹೆಸರೆಲ್ಲಿ ಬರೆಯಲ್ಪಟ್ಟಿದೆ? (ಕೊನೆಯಲ್ಲಿ) ಕನ್ನಡ ನೆಲದ ಏಕೈಕ ಪ್ರಧಾನಿಯಾಗಿದ್ದ ಮೇರು ನಾಯಕರಿಗೆ ಪತ್ರ ಬರೆಯುವ ಸಂಸ್ಕಾರ, ಶಿಷ್ಟಾಚಾರ ಇದೇನಾ? ಎಂದು ಕಿಡಿಕಾರಿದೆ.
ಮುಖ್ಯಮಂತ್ರಿಗಳು ಬರೆದ ಪತ್ರವನ್ನು ಇಲ್ಲಿ ಲಗತ್ತಿಸಲಾಗಿದೆ. ಹಾಗಾದರೆ, ಮುಖ್ಯಮಂತ್ರಿಗಳೇ ಎಲ್ಲವನ್ನೂ ಹೇಳಲಿ. ಜನರಿಗೂ ಸತ್ಯ ಯಾವುದು? ಸುಳ್ಳು ಯಾವುದು? ಎನ್ನುವುದು ತಿಳಿಯಲಿ. ಸತ್ಯ ಹೇಳುವ ಧಮ್ಮು, ತಾಕತ್ತು ಮುಖ್ಯಮಂತ್ರಿಗಳಿಗೆ ಇದೆ ಎಂದು ನಾವು ಭಾವಿಸುತ್ತೇವೆ ಎಂದು ಸಿಎಂಗೆ ತಿರುಗೇಟು ನೀಡಿದೆ.
ಕುಟುಂಬ ರಾಜಕಾರಣ ಅಂತೀರಾ ಗುಜರಾತಿನಿಂದ ಶುರುವಾಗಿ ದಿಲ್ಲಿವರೆಗೂ ಹಬ್ಬಿ, ಬಿಸಿಸಿಐ ಒಳಹೊಕ್ಕಿ ಕೂತಿದ್ದು ಯಾರ ಕುಟುಂಬ? ಕರ್ನಾಟಕದಲ್ಲಿ ಬೆಳೆದು ನಿಂತ ಬಿಜೆಪಿ ವಂಶ ವೃಕ್ಷಗಳೆಷ್ಟು, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಗುಜರಾತ್ನಿಂದ ಒಡಿಶಾವರೆಗೆ ವ್ಯಾಪಿಸಿರುವ ಬಿಜೆಪಿ ವಂಶ ವೃಕ್ಷಗಳ ಕೊಂಬೆಗಳ ಲೆಕ್ಕ ಬಿಚ್ಚಿಡಬೇಕೆ? ಎಂದು ಜಾ.ದಳ ಪ್ರಶ್ನಿಸಿದೆ.
ಶಿಷ್ಟಾಚಾರ ಗೊತ್ತಿಲ್ಲ-ಡಿಕೆಶಿ ಕಿಡಿ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುವಾರ್ ಕೂಡ ಪ್ರತಿಕ್ರಿಯಿಸಿದ್ದು, ಬಿಜೆಪಿಯವರಿಗೆ ಶಿಷ್ಟಾಚಾರ ಏನೆಂಬುದು ಗೊತ್ತಿಲ್ಲ. ಒಬ್ಬ ಮಾಜಿ ಪ್ರಧಾನಿಯನ್ನು ಆಹ್ವಾನಿಸುವ ರೀತಿ ಇದೇನಾ? ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಪ್ರಧಾನಿ ನರೇಂದ್ರಮೋದಿ ಹೂವಿನ ಹಾರ ಹಾಕಿದ್ದನ್ನು ಬಿಟ್ಟರೆ ಇನ್ನೇನು ಇಲ್ಲ ಎಂದು ಕುಹುಕವಾಡಿದರು.