ನಗರದಾದ್ಯಂತ ಬೆಳ್ಳಂಬೆಳಗ್ಗೆ ರೌಡಿ ಶೀಟರ್‌ಗಳ ಮನೆಗಳಿಗೆ ಪೊಲೀಸರ ದಾಳಿ

ಮೈಸೂರು: ನಗರದಾದ್ಯಂತ ಬೆಳ್ಳಂಬೆಳಗ್ಗೆ ರೌಡಿ ಶೀಟರ್‌ಗಳ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿ ಬಿಸಿ ಮುಟ್ಟಿಸಿದ್ದಾರೆ. ಹಲ್ಲೆ, ಸುಲಿಗೆ, ಕೊಲೆ ಯತ್ನ, ಕೊಲೆ ಮುಂತಾದ ಅಪರಾಧ ಪ್ರಕರಣಗಳನ್ನು ಹತ್ತಿಕ್ಕಲು ಪೊಲೀಸರು ಈ ದಾಳಿಗಳನ್ನು ನಡೆಸಿದ್ದಾರೆ. ಕೆಲವರ ಮನೆಯಲ್ಲಿ ಖಾಲಿ ಚೆಕ್, ಆಸ್ತಿಗಳ ದಾಖಲೆ, ಅಪಾರ ಪ್ರಮಾಣದ ಮಚ್ಚು, ಲಾಂಗ್, ಚಾಕು, ಡ್ಯಾಗರ್‌ನಂಥ ಮಾರಕಾಸ್ತ್ರಗಳು ಪತ್ತೆಯಾಗಿವೆ.

ಅಪರಾಧ ಕೃತ್ಯಗಳನ್ನು ನಡೆಸಿದರೆ ಅಥವ ಮುಂದುವರಿಸಿದರೆ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳುವುದಾಗಿ ರೌಡಿಗಳಿಗೆ ಪೊಲೀಸ್ ಅಧಿಕಾರಿಗಳು ಗಂಭೀರ ಎಚ್ಚರಿಕೆ ನೀಡಿದ್ಧಾರೆ.

ಮುಂಜಾನೆ ೫ ಗಂಟೆಗೆ ಆಯಾ ಠಾಣಾ ಪೊಲೀಸ್ ಇನ್ಸಪೆಕ್ಟರ್‌ಗಳ ನೇತೃತ್ವದಲ್ಲಿ ಪೊಲೀಸರು ರೌಡಿಗಳ ಮನೆ ಮೇಲೆ ಹಠಾತ್ ದಾಳಿಗಳನ್ನು ನಡೆಸಿದರು. ಮುಂಜಾನಯೇ ಮನೆ ಬಾಗಿಲು ತಟ್ಟಿದ ಪೊಲೀಸರ ಕಂಡು ರೌಡಿ ಶೀಟರ್‌ಗಳು ಕಂಗಾಲಾದರು.
ದಾಳಿ ವೇಳೆ ಕೆಲವು ರೌಡಿಗಳು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಸಕ್ರಿಯವಾಗಿರುವ ಮಾಹಿತಿ ತಿಳಿದು ಬಂದಿದೆ.ಕೆಲವರ ಮನೆಯಲ್ಲಿ ಖಾಲಿ ಚೆಕ್, ಆಸ್ತಿಗಳ ದಾಖಲೆ, ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅಮಾಯಕರಿಗೆ ಧಮ್ಕಿ ಹಾಕುವುದು, ಬೆದರಿಸುವುದು, ಗಲಾಟೆ, ಘರ್ಷಣೆಯಲ್ಲಿ ಭಾಗಿಯಾಗುವುದು, ಚೀಟಿ, ಬಡ್ಡಿ ವ್ಯವಹಾರ, ಅಕ್ರಮ ರಿಯಲ್ ಎಸ್ಟೇಟ್ ದಂಧೆಗಳಲ್ಲಿ ಭಾಗಿಯಾಗುವುದು, ಕಿರುಕುಳ ನೀಡುವುದು ಕಂಡುಬಂದರೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

× Chat with us