ರಾಜ್ಯ

ಅರಣ್ಯ ಸಿಬ್ಬಂದಿಗೂ ಪೊಲೀಸ್‌ ಕ್ಯಾಂಟೀನ್‌ ಸೌಲಭ್ಯ: ಈಶ್ವರ ಖಂಡ್ರೆ

ಬೆಂಗಳೂರು: ರಾಜ್ಯದ ಸಮೃದ್ಧ ಅರಣ್ಯ ಸಂಪತ್ತಿನ ರಕ್ಷಣೆಗೆ ಹಗಲಿರುಳು, ಜೀವದ ಹಂಗು ತೊರೆದು ಶ್ರಮಿಸುವ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಹಾಲಿ ಇರುವ ಪೊಲೀಸ್‌ ಕ್ಯಾಂಟೀನ್‌ ಸೌಲಭ್ಯ ಬಳಸಿಕೊಳ್ಳಲು ಅವಕಾಶ ನೀಡುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.

ಬೆಂಗಳೂರಿನ ಅರಣ್ಯ ಭವನದಲ್ಲಿಂದು ರಾಷ್ಟ್ರೀಯ ಹುತಾತ್ಮರ ದಿನದ ಅಂಗವಾಗಿ ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛ ಸಮರ್ಪಿಸಿದ ತರುವಾಯ ಮಾತನಾಡಿದ ಅವರು, ಕಾಡ್ಗಿಚ್ಚು ನಂದಿಸುವಾಗ, ಮಾನವ-ವನ್ಯಜೀವಿ ಸಂಘರ್ಷ ತಡೆಯುವ ಸಂದರ್ಭದಲ್ಲಿ ಮತ್ತು ಒತ್ತುವರಿದಾರರು ಮತ್ತು ಕಾಡುಗಳ್ಳರ ಆಕ್ರೋಶಕ್ಕೆ ಗುರಿಯಾಗಿ ಈವರೆಗೆ ೬೧ ಅರಣ್ಯ ಸಿಬ್ಬಂದಿ ಮತ್ತು ಅಧಿಕಾರಿಗಳು ಹುತಾತ್ಮರಾಗಿದ್ದಾರೆ. ಈ ಎಲ್ಲರ ಕುಟುಂಬದೊಂದಿಗೆ ಇಲಾಖೆ ನಿಂತಿದೆ ಎಂದರು.

ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದಾಗ ಹುತಾತ್ಮರ ಕುಟುಂಬಕ್ಕೆ ಪರಿಹಾರ ನೀಡುವ ಘೋಷಣೆ ಮಾಡಿದರು, ೩೦ ಲಕ್ಷ ರೂ. ಇದ್ದ ಪರಿಹಾರದ ಮೊತ್ತವನ್ನು ಈಗ ೫೦ ಲಕ್ಷಕ್ಕೆ ಹೆಚ್ಚಿಸುವ ಕಾರ್ಯವನ್ನೂ ಅವರೆ ಮಾಡಿದ್ದಾರೆ ಎಂದರು.

ನಮ್ಮ ಸರ್ಕಾರ ಅರಣ್ಯದಲ್ಲಿ ಜೀವದ ಹಂಗು ತೊರೆದು ಆನೆ ಕಾರ್ಯಪಡೆ, ಕಳ್ಳಬೇಟಿ ನಿಗ್ರಹ ಶಿಬಿರ ಮತ್ತು ಇತರ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಹೊರಗುತ್ತಿಗೆ ನೌಕರರಿಗೂ ಮಾಸಿಕ ೨ ಸಾವಿರ ರೂ. ಕಷ್ಟ ಕಾರ್ಯ ಭತ್ಯೆ ನೀಡುವ ಘೋಷಣೆ ಮಾಡಿದ್ದು, ಇದನ್ನು ಅನುಷ್ಠಾನ ಮಾಡಲಾಗಿದೆ ಎಂದು ತಿಳಿಸಿದರು.

ಕಳೆದ ೧೬ ತಿಂಗಳ ಅವಧಿಯಲ್ಲಿ ಅರಣ್ಯ ಇಲಾಖೆ ಸುಮಾರು ೧೦ ಸಾವಿರ ಎಕರೆ ಭೂಮಿಯನ್ನು ಅಧಿಸೂಚಿತ ಅರಣ್ಯ ಎಂದು ಘೋಷಿಸಿದೆ. ಜೊತೆಗೆ ಬೆಂಗಳೂರು, ಕೋಲಾರ, ಬೀದರ್‌ ಸೇರಿದಂತೆ ರಾಜ್ಯದ ವಿವಿಧೆಡೆ ಸಾವಿರಾರು ಕೋಟಿ ರೂ ಬೆಲೆ ಬಾಳುವ ೨೫೦೦ ಎಕರೆಗೂ ಹೆಚ್ಚು ಅರಣ್ಯ ಭೂಮಿಯನ್ನು ಮರು ವಶಕ್ಕೆ ಪಡೆದಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.

೨೦೧೫ಕ್ಕೆ ಮೊದಲು ಅಂದರೆ ರಾಜ್ಯ ಸರ್ಕಾರದ ನಡವಳಿಗೆ ಮೊದಲು ಪಟ್ಟಾ ಜಮೀನು ಮತ್ತು ಅರಣ್ಯ ಭೂಮಿ ಒತ್ತುವರಿ ಸೇರಿ ೩ ಎಕರೆ ಮೀರದ ಪ್ರಕರಣಗಳಲ್ಲಿ ಮತ್ತು ಅರಣ್ಯ ಹಕ್ಕು ಕಾಯಿದೆಯ ಅರ್ಜಿ ವಿಲೇವಾರಿ ಆಗದ ಪ್ರಕರಣಗಳ ಹೊರತಾಗಿ ದೊಡ್ಡ ಅರಣ್ಯ ಒತ್ತುವರಿ ತೆರವು ಮಾಡಿಸಲು ಸ್ಪಷ್ಟ ಆದೇಶ ನೀಡಲಾಗಿದೆ. ಇದು ಸಂವಿಧಾನದ ೪೧ (ಎ) ಮತ್ತು ೫೧ (ಎ) ಆಶಯಗಳಿಗೆ ಅನುಗುಣವಾಗಿದೆ ಎಂದು ತಿಳಿಸಿದರು.

ಕಸ್ತೂರಿ ರಂಗನ್‌ ವರದಿ: ಮಾಸಾಂತ್ಯದೊಳಗೆ ರಾಜ್ಯದ ಅಭಿಪ್ರಾಯ ಸಲ್ಲಿಕೆ
ಪಶ್ಚಿಮಘಟ್ಟ ಹಲವು ನದಿಗಳ ಮೂಲವಷ್ಟೇ ಅಲ್ಲದೆ, ಸಸ್ಯ ಸಂಕುಲ, ಪ್ರಾಣಿ ಸಂಕುಲ, ಕೀಟ ಸಂಕುಲ, ಪಕ್ಷಿ ಸಂಕುಲದ ನೆಲೆಯಾಗಿದೆ. ಇದರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ಇದೇ ೧೯ರಂದು ಪಶ್ಚಿಮಘಟ್ಟ ವ್ಯಾಪ್ತಿಯ ಬಾಧ್ಯಸ್ಥರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿ, ನಂತರ ಸಚಿವ ಸಂಪುಟದ ಉಪ ಸಮಿತಿ ಸಭೆಯಲ್ಲಿ ಚರ್ಚಿಸಿ, ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸಿ ನಂತರ ಸಚಿವ ಸಂಪುಟದ ಅನುಮೋದನೆ ಪಡೆದು, ಪಶ್ವಿಮಘಟ್ಟದ ಜೀವವೈವಿಧ್ಯ, ಜನರ ಜೀವನೋಪಾಯ ಎರಡೂ ಇರುವ ರೀತಿಯಲ್ಲಿ ಕೇಂದ್ರ ಸರ್ಕಾರಕ್ಕೆ ನಮ್ಮ ರಾಜ್ಯದ ನಿಲುವು ತಿಳಿಸಲಾಗುವುದು ಎಂದು ಈಶ್ವರ ಖಂಡ್ರೆ ತಿಳಿಸಿದರು.

ಮುಂದಿನ ಮೂರೂ ಮುಕ್ಕಾಲು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅರಣ್ಯ ಇಲಾಖೆಯ ಎಲ್ಲ ಕಾರ್ಯಕ್ರಮದಲ್ಲೂ ಭಾಗಿಯಾಗಿ ಮಾರ್ಗದರ್ಶನ ಮಾಡುತ್ತಾರೆ. ಅವರು ಗಟ್ಟಿ ನಿರ್ಧಾರ ಕೈಗೊಂಡು, ಗಟ್ಟಿಯಾಗಿ ಸರ್ಕಾರ ನಡೆಸುತ್ತಿದ್ದಾರೆ. ಮುಂದಿನ ಮೂರೂ ಮುಕ್ಕಾಲು ವರ್ಷವೂ ಅವರೇ ಮುಖ್ಯಮಂತ್ರಿಯಾಗಿ ಮಾರ್ಗದರ್ಶನ ಮಾಡುತ್ತಾರೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ಬೆಂಗಳೂರಿನ ಅರಣ್ಯ ಭವನದಲ್ಲಿಂದು ರಾಷ್ಟ್ರೀಯ ಹುತಾತ್ಮರ ದಿನದ ಅಂಗವಾಗಿ ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛ ಸಮರ್ಪಿಸಿದ ತರುವಾಯ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಗಳಾಗಿ ಮುಂದುವರಿಯುತ್ತಾರೆ ಎಂದು ಸ್ಪಷ್ಟ ನುಡಿಗಳಲ್ಲಿ ತಿಳಿಸಿದರು.

 

ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅರಣ್ಯ ಕಾರ್ಯಪಡೆ ಮುಖ್ಯಸ್ಥರಾದ ಬ್ರಿಜೇಶ್‌ ದೀಕ್ಷಿತ್‌ ಮತ್ತಿತರರು ಭಾಗವಹಿಸಿದ್ದರು.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ವಿಷ ಕುಡಿದು ವ್ಯಕ್ತಿ ಆತ್ಮಹತ್ಯೆ: ಗರಿಕೆ ಖಂಡಿ ಅರಣ್ಯದಲ್ಲಿ ಶವ ಪತ್ತೆ

ಹನೂರು: ವಿಷ ಕುಡಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗರಿಕೆಕಂಡಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.…

14 hours ago

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭೇಟಿಯಾದ ಮಾಜಿ ಸಿಎಂ ಸಿದ್ದರಾಮಯ್ಯ

ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ನಿನ್ನೆ…

15 hours ago

ಶ್ರಾವಣ ಮಾಸದ ಕೊನೆಯ ದಿನದ 108 ಕುಂಭಾಭಿಷೇಕ: ಮಲೆ ಮಹದೇಶ್ವರ ಕ್ಷೇತ್ರದಲ್ಲಿ ಭಕ್ತಿ ವೈಭವ

ಹನೂರು: ಸುಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಶ್ರಾವಣ ಮಾಸದ ಸಮಾರೋಪದ ಅಂಗವಾಗಿ 108 ಕುಂಭಾಭಿಷೇಕ ಮಹೋತ್ಸವ ಹಾಗೂ…

16 hours ago

ಹನೂರು| ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ: ಮೂವರು ಯುವಕರು ದುರ್ಮರಣ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕೊಪ್ಪ ಗ್ರಾಮದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ…

17 hours ago

ಓದುಗರ ಪತ್ರ: ದಸರಾ ಚಿತ್ರೋತ್ಸವ ಮುಂದುವರಿಯಲಿ

ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ. ಈ ನಾಡಹಬ್ಬದಲ್ಲಿ ದಸರಾ ಚಿತ್ರೋತ್ಸವವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಮರುಪರಿಶೀಲಿಸಿ…

22 hours ago

ಓದುಗರ ಪತ್ರ: ಫಿಲಂ ಸಿಟಿ ಯೋಜನೆ ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿ

ಮೈಸೂರು ಜಿಲ್ಲೆಯ ಇಮ್ಮಾವು ಬಳಿ ಅಂತರಾಷ್ಟ್ರೀಯ ದರ್ಜೆಯ ಫಿಲಂ ಸಿಟಿ ನಿರ್ಮಿಸುವ ಬಗ್ಗೆ ಮೈಸೂರು ಜಿ ಉಸ್ತುವಾರಿ ಸಚಿವರಾದ ಯತೀಂದ್ರ…

22 hours ago