ಬೆಂಗಳೂರು: ಆಂಧ್ರಪ್ರದೇಶದ ಮಾನವ-ಪ್ರಾಣಿ ಸಂಘರ್ಷ ನಿಯಂತ್ರಣಕ್ಕೆ ಕುಮ್ಕಿ ಆನೆಗಳನ್ನು ನೀಡುವಂತೆ ಕರ್ನಾಟಕಕ್ಕೆ ಮನವಿ ಮಾಡಿದ್ದು, ರಾಜ್ಯದ ಜನರ ಭಾವನೆಗೆ ಚ್ಯುತಿ ಆಗದಂತೆ ಉನ್ನತ ಮಟ್ಟದ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಗುರುವಾರ ನಡೆದ ಆಂಧ್ರಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್, ಆಂಧ್ರ ಮತ್ತು ರಾಜ್ಯದ ಅರಣ್ಯಾಧಿಕಾರಿಗಳ ಸಭೆಯ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬೇರೆ ರಾಜ್ಯಗಳಿಗೆ ಆನೆಗಳನ್ನು ನೀಡುವುದು ಸಾಮಾನ್ಯ ಪ್ರಕ್ರಿಯೆ. ಆದರೆ ದಸರಾ ಆನೆಗಳನ್ನು ಯಾವುದೇ ರಾಜ್ಯಕ್ಕೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಆಂಧ್ರದಲ್ಲಿಯೂ ಕಾಡಾನೆಗಳ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ ಕರ್ನಾಟಕದಲ್ಲಿ ಆನೆಗಳ ಹಾವಳಿ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳು, ರೈಲ್ವೆ ಬ್ಯಾರಿಕೇಡ್ ಅಳವಡಿಕೆಯ ಯಶಸ್ಸು, ಕಾಡಾನೆಗಳ ಸೆರೆ ಕಾರ್ಯಾಚರಣೆ, ಆನೆ ಪಳಗಿಸುವುದು ಮತ್ತು ಮಾವುತರ ತರಬೇತಿ ಕುರಿತಂತೆ ಚರ್ಚಿಸಲು ಇಂದು ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿಗಳಾದ ಕೊನಿಡಲ ಪವನ್ ಕಲ್ಯಾಣ್ ಅವರು ತಮ್ಮ ರಾಜ್ಯದ ಉನ್ನತ ಅರಣ್ಯಾಧಿಕಾರಿಗಳೊಂದಿಗೆ ಕರ್ನಾಟಕಕ್ಕೆ ಆಗಮಿಸಿದ್ದಾರೆ ಎಂದರು.
ಸುಮಾರು ಒಂದು ಗಂಟೆಗಳ ಕಾಲ ಎರಡೂ ರಾಜ್ಯಗಳ ಅರಣ್ಯಾಧಿಕಾರಿಗಳೊಂದಿಗೆ ಉತ್ತಮ ಮತ್ತು ಉಪಯುಕ್ತ, ಫಲಪ್ರದವಾದ ಚರ್ಚೆ ನಡೆದಿದೆ ಎಂದು ತಿಳಿಸಲು ಹರ್ಷಿಸುತ್ತೇನೆ ಎಂದು ಖಂಡ್ರೆ ತಿಳಿಸಿದರು.
ರಾಜ್ಯ ಇದೇ 12ರಂದು ವಿಶ್ವ ಆನೆಯ ದಿನದಂದು ಮಾನವ- ಆನೆ ಸಂಘರ್ಷ ನಿರ್ವಹಣೆ ಕುರಿತಂತೆ ಜಿಕೆವಿಕೆಯಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನವನ್ನೇ ಆಯೋಜಿಸಿದೆ. ಈ ಸಮ್ಮೇಳನದಲ್ಲಿ ಉತ್ತಮ ರೂಢಿಗಳ ಬಗ್ಗೆ ಚಿಂತನ ಮಂಥನ ನಡೆಸಲಾಗುವುದು ಎಂದರು.
ಕರ್ನಾಟಕದಲ್ಲಿ ನಡೆಯುವ ಮೈಸೂರು ದಸರಾ ಮಹೋತ್ಸವದಲ್ಲಿ ಆನೆಗಳೇ ಪ್ರಧಾನ ಆಕರ್ಷಣೆ. ಮೈಸೂರು ದಸರಾದಲ್ಲಿ ವಿಜಯದಶಮಿಯ ದಿನ ನಡೆಯುವ ಜಂಬೂಸವಾರಿ ವಿಶ್ವ ವಿಖ್ಯಾತವಾಗಿದೆ. ಇದಕ್ಕಾಗಿ ಆನೆಗಳನ್ನು ಕಾಡಿನಿಂದ ನಾಡಿಗೆ ತರುವ ಗಜ ಪಯಣ ಶಾಸ್ತ್ರೋಕ್ತವಾಗಿ ನಡೆಯುತ್ತದೆ. ಇದೇ ಆಗಸ್ಟ್ 21ರಂದು ವೀರನಹೊಸಹಳ್ಳಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಆನೆ ಕಾರ್ಯಾಚರಣೆ ಅಪಾಯಕಾರಿ
ಹಿಂದೆ ಆನೆ ಹಿಡಿಯಲು ಖೆಡ್ಡಾ ತೋಡಲಾಗುತ್ತಿತ್ತು. ಈಗ ಅರೆವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯಲಾಗುತ್ತದೆ. ಇದು ಕೂಡ ಅತ್ಯಂತ ಅಪಾಯಕಾರಿ. ಆನೆ ಕಾರ್ಯಾಚರಣೆ ವೇಳೆ ಆಪಾಯವೂ ಇರುತ್ತದೆ. ಕರ್ನಾಟಕದ ಹೆಸರಾಂತ ಶಾರ್ಪ್ ಶೂಟರ್ ವೆಂಕಟೇಶ್ ಆನೆಗೆ ಅರವಳಿಕೆ ಚುಚ್ಚುಮದ್ದು ನೀಡುವಾಗ ಭೀಮ ಆನೆಗೆ ಬಲಿಯಾಗಿದ್ದು ನಿಮಗೆಲ್ಲಾ ತಿಳಿದಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
ಆನೆ ಸೇರೆ ಹಿಡಿಯುವ ಕೌಶಲ್ಯ, ಪಳಗಿಸುವ ನೈಪುಣ್ಯತೆ ಕರ್ನಾಟಕದ ಮಾವುತರಲ್ಲಿದೆ. ಹೀಗಾಗಿಯೇ ಭಾರತದ ಇತರ ರಾಜ್ಯಗಳು ಪಳಗಿಸಿದ ಕುಮ್ಕಿ ಆನೆಗಳನ್ನು ನೀಡುವಂತೆ ಬೇಡಿಕೆ ಸಲ್ಲಿಸುತ್ತಿರುತ್ತಾರೆ.
ರಾಜ್ಯದಿಂದ ಹಿಂದೆಯೂ ಆನೆ ನೀಡಿದ್ದೇವೆ
ಈ ಹಿಂದೆ ಕೂಡ ರಾಜ್ಯದಿಂದ ಸಾಕಷ್ಟು ಆನೆಗಳನ್ನು ಇತರ ರಾಜ್ಯಗಳಿಗೆ ಕಳುಹಿಸಲಾಗಿದೆ. 2016-17ರಲ್ಲಿ ಉತ್ತರ ಖಂಡಕ್ಕೆ ಕರ್ನಾಟಕದಿಂದ 11 ಆನೆ ನೀಡಲಾಗಿತ್ತು. ಅದೇ ವರ್ಷ ಛತ್ತೀಸಗಡಕ್ಕೆ 6 ಮತ್ತು ಜಾರ್ಖಂಡ್ ಗೆ 3 ಆನೆ ನೀಡಲಾಗಿತ್ತು. 18-19ರಲ್ಲಿ ಪಶ್ಚಿಮ ಬಂಗಾಳಕ್ಕೆ 8 ಆನೆ, ಬಿಹಾರಕ್ಕೆ 4, ಉತ್ತರ ಪ್ರದೇಶಕ್ಕೆ 12 ಆನೆ ಕಳುಹಿಸಲಾಗಿತ್ತು. 2022-23ರಲ್ಲಿ ಉತ್ತರ ಪ್ರದೇಶಕ್ಕೆ 4, ಮಧ್ಯಪ್ರದೇಶಕ್ಕೆ 14, ಮಹಾರಾಷ್ಟ್ರಕ್ಕೆ 3 ಆನೆ ಕಳುಹಿಸಲಾಗಿತ್ತು. ಅದರಲ್ಲಿ ಒಂದು ಆನೆ ಮಹಾರಾಷ್ಟ್ರದ್ದೇ ಆಗಿದ್ದು, ಇಲ್ಲಿ ಅದಕ್ಕೆ ತರಬೇತಿ ನೀಡಲಾಗಿತ್ತು. ಆನೆಗಳನ್ನು ಇತರ ರಾಜ್ಯಗಳಿಗೆ ನೀಡುವುದು ಒಂದು ಸಾಮಾನ್ಯ ಪ್ರಕ್ರಿಯೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
ಕೌಶಲ್ಯ ವರ್ಗಾವಣೆ
ಇಂದು ನಾವು ಇತರ ರಾಜ್ಯಗಳಿಗೆ ಪಳಗಿಸಿದ ಆನೆ ನೀಡುವುದರ ಜೊತೆಗೆ ಅಲ್ಲಿನ ಮಾವುತರಿಗೆ, ಕಾವಾಡಿಗರಿಗೆ ಕೌಶಲ್ಯ ವರ್ಗಾವಣೆ ಮಾಡುವ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸಿದ್ದೇವೆ ಎಂದರು.
ಆಂಧ್ರಪ್ರದೇಶವೇ ಇರಲಿ, ಮಹಾರಾಷ್ಟ್ರವೇ ಆಗಿರಲಿ, ಅವರಿಗೆ ನಮ್ಮಲ್ಲಿ ಆನೆ ಸೆರೆ ಕಾರ್ಯಾಚರಣೆ ನಡೆಯುವಾಗ ನಿಮ್ಮ ರಾಜ್ಯದಿಂದ ಪಶುವೈದ್ಯರು, ಮಾವುತರು, ಕಾವಾಡಿಗರು ಮತ್ತು ಅಧಿಕಾರಿಗಳ ತಂಡವನ್ನು ಕಳುಹಿಸಿ ಎಂದು ತಿಳಿಸಲಾಗುತ್ತದೆ. ಅವರು ಆನೆ ಸೆರೆ ಕಾರ್ಯಾಚರಣೆ ಕಣ್ಣಾರೆ ಕಾಣಲು ಇದರಿಂದ ಸಾಧ್ಯವಾಗುತ್ತದೆ.
ಬಳಿಕ ಹಿಡಿದ ಆನೆಗಳನ್ನು ಹೇಗೆ ಪಳಗಿಸಲಾಗುತ್ತದೆ ಎಂಬುದನ್ನೂ ಅವರು ಪ್ರತ್ಯಕ್ಷ ನೋಡುತ್ತಾರೆ. ಹೊರ ರಾಜ್ಯದ ಮಾವುತರಿಗೂ ಆ ಆನೆಗಳನ್ನು ಹೇಗೆ ನಿರ್ವಹಿಸಬೇಕು ಎಂದು ತಿಳಿಯುತ್ತದೆ. ಆಗ ಮುಂದಿನ ಕಾರ್ಯಾಚರಣೆಯನ್ನು ಅವರೇ ನಿರ್ವಹಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಾನು ಇಂದಿನ ಸಭೆಯಲ್ಲಿ ಸಲಹೆ ನೀಡಿದ್ದೇನೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…