ಯಳಂದೂರು ತಾಲ್ಲೂಕಿನಲ್ಲಿ ಸಾವಿರಾರು ಕುಟುಂಬಗಳು ಅತಂತ್ರ; ಪರಿಹಾರ ಕಲ್ಪಿಸಲು ಆಗ್ರಹ
-ಎಂ.ಗೂಳೀಪುರ ನಂದೀಶ್
ಯಳಂದೂರು : ಕಳೆದ ಹಲವು ದಿನಗಳಿಂದ ಸುರಿದ ಮಳೆ ಹಾಗೂ ಸುವರ್ಣವತಿ, ಚಿಕ್ಕ ಹೊಳೆ ಜಲಾಶಯಗಳ ಪ್ರವಾಹದಿಂದ ತಾಲ್ಲೂಕಿನಲ್ಲಿ 1,354 ಕ್ಕೂ ಹೆಚ್ಚು ಮನೆಯ ಗೋಡೆ, 822ಕ್ಕೂ ಹೆಚ್ಚು ಹೆಕ್ಟೇರ್ ಕೃಷಿ ಭೂಮಿ, 71 ಕ್ಕೂ ಹೆಚ್ಚು ಹೆಕ್ಟೇರ್ ತೋಟಗಾರಿಕೆ ಬೆಳೆಗಳ ಪ್ರದೇಶವು ಹಾನಿಯಾಗಿ ಸಾವಿರಾರು ಕುಟುಂಬಗಳ ಬದುಕು ಅತಂತ್ರವಾಗಿದೆ!
ಸುವರ್ಣವತಿ, ಚಿಕ್ಕಹೊಳೆ ಅವಳಿ ಜಲಾಶಯಗಳ ಪ್ರವಾಹದಿಂದ ಸಂಕಷ್ಟ ಎದುರಾಗಿದೆ. ಇದರೊಂದಿಗೆ ಹಲವು ದಿನಗಳಿಂದ ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಸುರಿದ ಮಳೆಯಿಂದ 10ಕ್ಕೂ ಹೆಚ್ಚು ಗ್ರಾಮಗಳು ಜಲಾವೃತಗೊಂಡು ಸಾವಿರಾರು ಕುಟುಂಬಗಳನ್ನು ಅತಂತ್ರ ಪರಿಸ್ಥಿತಿಗೆ ದೂಡಿದೆ.
ತಾಲ್ಲೂಕಿನಲ್ಲಿ ಒಟ್ಟು- 16 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಜತೆಗೆ 356ಆಹಾರ ಕಿಟ್ಗಳನ್ನು ಕುಟುಂಬಗಳಿಗೆ ವಿತರಿಸಲಾಗಿದೆ.
1354 ಮನೆಗಳಿಗೆ ಹಾನಿ : ಯಳಂದೂರು ಪಟ್ಟಣದಲ್ಲಿ 203, ಹಾಗೂ ಕಂದಹಳ್ಳಿ 112, ಕೃಷ್ಣಪುರ 73 ,ಉಪ್ಪಿನಮೋಳೆ 18, ಗುಂಬಳ್ಳಿ 01, ಹೊನ್ನೂರು 5, ಯರಿಯೂರು 37, ಗಣಿಗನೂರು 80, ಚಾಮಲಾಪುರ 14, ಅಗರ 278, ವಾಂಬಳ್ಳಿ 164, ಮದ್ದೂರು 179, ಬೂದಿತಿಟ್ಟು 20, ಬನ್ನಿಸಾರಿಗೆ 26, ಕೆಸ್ತೂರು 39, ಬಸವಾಪುರ 26, ಕೆ.ಹೊಸೂರು 1, ಬಿಳಿಗಿರಿರಂಗನಬೆಟ್ಟ 3, ಅಂಬಳೆ 35, ಚಂಗಚಹಳ್ಳಿ 12, ವೈ.ಕೆ.ಮೋಳೆ 22, ದುಗ್ಗಹಟ್ಟಿ 4, ಮೆಲ್ಲಹಳ್ಳಿ 2 ಸೇರಿದಂತೆ ಅನೇಕ ಗ್ರಾಮಗಳ ಮನೆಗಳಿಗೆ ನದಿ, ಮಳೆ ಪ್ರವಾಹದ ನೀರು ನುಗ್ಗಿ ದಿನ ಬಳಕೆ ವಸ್ತುಗಳು ಹಾನಿಯಾಗಿವೆ. 360 ಕ್ಕೂ ಹೆಚ್ಚಿನ ಮನೆಗಳ ಗೋಡೆಗಳು ಕುಸಿದಿವೆ.
1 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಕೃಷಿ ಭೂಮಿ ಹಾನಿ : ಬಹುತೇಕ ಗ್ರಾಮಗಳಲ್ಲಿ ಭತ್ತದ ಭಿತ್ತನೆ ಮಾಡಲಾಗಿತ್ತು. ಇದರೊಂದಿಗೆ ಕಬ್ಬು, ಮುಸುಕಿನ ಜೋಳ, ತೋಟಗಾರಿಕೆ ಬೆಳೆಗಳಾದ ಬಾಳೆ, ತರಕಾರಿಗಳು, ಹಣ್ಣು, ಹೂ ಸೇರಿದಂತೆ ಇತರೆ ಬೆಳೆಗಳು ಸತತ ಮಳೆಯಿಂದ ನಾಶವಾಗಿವೆ. ಕೃಷಿ ಭೂಮಿಯಲ್ಲಿ ನೀರು ನಿಂತು ಕೆಲ ಬೆಳೆಗಳು ಕೊಚ್ಚಿ ಹೋಗಿದ್ದರೆ, ಕೆಲವು ಕೊಳೆಯುತ್ತಿವೆ. ಸತತವಾಗಿ ಸುರಿದ ಮಳೆಯಿಂದ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ನಷ್ಟ ಉಂಟಾಗಿದ್ದು, ಪರಿಹಾರವಾಗಿ ಜಿಲ್ಲೆಗೆ ವಿಶೇಷ ಪ್ಯಾಕೇಜ್ ನೀಡಬೇಕೆಂದು ತಾ.ಪಂ. ಮಾಜಿ ಸದಸ್ಯ ವೈ.ಕೆ.ಮೋಳೆ ನಾಗರಾಜು ಸೇರಿದಂತೆ ಹಲವರು ಒತ್ತಾಯಿಸಿದ್ದಾರೆ.
ಯಳಂದೂರು ತಾಲ್ಲೂಕಿನ ಸತತ ಮಳೆಯಿಂದ ಸಾವಿರಾರು ಮನೆಗಳಿಗೆ ನೀರು ನುಗ್ಗಿ ದಿನ ಬಳಕೆ ವಸ್ತುಗಳು ಹಾನಿಯಾಗಿರುವ 1215 ಕುಟುಂಬಗಳಿಗೆ ತಲಾ 10 ಸಾವಿರ ರೂ. ಪರಿಹಾರ ಮೊತ್ತವನ್ನು ನೀಡಲಾಗಿದೆ. ಜತೆಗೆ ಬೆಳೆಹಾನಿಯಾಗಿರುವ ಬಗ್ಗೆ ಜಂಟಿ ಸಮೀಕ್ಷೆ ನಡೆಸಿ ಪರಿಹಾರವನ್ನು ನೀಡುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು. -ಆನಂದಪ್ಪನಾುಂಕ್, ತಹಸಿಲ್ದಾರ್