ಹುಬ್ಬಳ್ಳಿ : ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತು ಬಿಜೆಪಿಯನ್ನು ಸೋಲಿಸಿಬೇಕು ಎನ್ನುವ ಒಂದೇ ಕಾರಣಕ್ಕೆ ಪ್ರತಿಪಕ್ಷಗಳು ಒಂದಾಗುತ್ತಿವೆ. ಇದರ ಅರ್ಥ ಅವರಿಗೆ ಸ್ವಂತ ಬಲವಿಲ್ಲ ಎಂಬುದು ಬಹಳ ಸ್ಪಷ್ಟ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟೀಕಿಸಿದರು.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ಒಂದಾಗಲು ಸಿದ್ಧತೆ ನಡೆಸಿದ್ದು, ಜುಲೈ 18 ರಂದು ಬೆಂಗಳೂರಿನಲ್ಲಿ ವಿರೋಧ ಪಕ್ಷಗಳ ಸಭೆ ನಡೆಯಲಿದೆ. ಸಭೆಯ ಜವಾಬ್ದಾರಿಯನ್ನು ಕಾಂಗ್ರೆಸ್ಗೆ ವಹಿಸಲಾಗಿದೆ. ಈ ವಿಚಾರವಾಗಿ ಬೊಮ್ಮಾಯಿ ಹುಬ್ಬಳ್ಳಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ಇಡೀ ಭಾರತದಲ್ಲಿ ಪ್ರತಿಪಕ್ಷಗಳು ಶಕ್ತಿಯುತವಾಗಿಲ್ಲ. ಪ್ರಾದೇಶಿಕ ಪಕ್ಷಗಳೇ ದೇಶದಲ್ಲಿ ಜಾಸ್ತಿ ಇದ್ದು, ಆಯಾ ರಾಜ್ಯದಲ್ಲಿ ಅವು ಪ್ರತಿಪಕ್ಷಗಳಾಗಿವೆ. ಹೀಗಾಗಿ ಪ್ರತಿಪಕ್ಷಗಳ ಒಕ್ಕೂಟ ರಚನೆ ಅಥವಾ ಸಭೆಯಿಂದ ಯಾವುದೇ ರೀತಿಯ ರಾಜಕೀಯ ಅರ್ಥ ಹಾಗೂ ಲಾಭವಿಲ್ಲ ಎಂದರು.
ಪ್ರತಿಪಕ್ಷಗಳಿಗೆ ನಿರ್ದಿಷ್ಟವಾದ ಕಾರ್ಯಕ್ರಮವಿಲ್ಲ. ಕೇವಲ ಮೋದಿ ಅವರನ್ನು ಸೋಲಿಸುವುದೇ ಅವರ ಮುಂದಿರುವ ಕಾರ್ಯತಂತ್ರ. ಮೋದಿ ಕಾಲದಲ್ಲಿ ನಮ್ಮ ದೇಶ ಆರ್ಥಿಕವಾಗಿ, ಸಾಮಾಜಿಕವಾಗಿ ಬಹಳ ದೊಡ್ಡ ಪ್ರಗತಿ ಸಾಧಿಸಿದೆ. ಕೋವಿಡ್ ನಂತರ ವೇಗದಲ್ಲಿ ಆರ್ಥಿಕ ವೃದ್ಧಿಯಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿಯವರಿಗೆ ಮನ್ನಣೆ ಸಿಗುತ್ತಿದೆ ಎಂದರು.