ಬೆಂಗಳೂರು: ತೆಲಂಗಾಣದಲ್ಲಿ ಆಪರೇಷನ್ ಕಮಲ ಮಾಡಲು ಬಿಜೆಪಿ ಪ್ರಯತ್ನ ಮಾಡಿದ ಬಗ್ಗೆ ವಿಚಾರಕ್ಕೆ ನನಗೆ ಆಶ್ಚರ್ಯ ಏನೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಪಂಚರತ್ನ ಯಾತ್ರೆಗೆ ಚಾಲನೆ ನೀಡಿದ ವೇಳೆ ಪ್ರತಿಕ್ರಿಯೆ ನೀಡಿದ ಅವರು, ಪಾಪದ ಹಣ ಇಟ್ಟುಕೊಂಡು ಕರ್ನಾಟಕದಲ್ಲಿ ಆಪರೇಷನ್ ಕಮಲ ಮಾಡಿದರು. ಇದೇ ಪಾಪದ ಹಣದಲ್ಲಿ ಬೇರೆ ಬೇರೆ ರಾಜ್ಯದಲ್ಲೂ ಮಾಡಿ ಯಶಸ್ವಿಯಾಗಿದ್ದಾರೆ. ಈಗ ತೆಲಂಗಾಣದಲ್ಲಿ ಕೂಡ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು.
ತೆಲಂಗಾಣದಲ್ಲಿ ಅಷ್ಟು ಸುಲಭವಾಗಿ ಅಕ್ರಮ ಹಣದಿಂದ ಸರ್ಕಾರವನ್ನು ಅಸ್ಥಿರಗೊಳಿಸುವುದು ಅಸಾಧ್ಯ. ಇವತ್ತು ನೇರವಾಗಿ 17 ಕೋಟಿ ಹಣದೊಂದಿಗೆ ಸಿಕ್ಕಿಬಿದ್ದಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿಯವರು ಯಾಕೆ ಜಾಣ ಮೌನ ತಾಳಿದ್ದಾರೆ. ಪ್ರಧಾನಿ ಹಾಗೂ ಇಡಿ ಇದಕ್ಕೆ ಉತ್ತರ ಕೊಡಬೇಕಿದೆ. ಈ ಹಣ ಎಲ್ಲಿಂದ ಹೇಗೆ ಬಂತು ಎಂಬುದರ ಬಗ್ಗೆ ಹೇಳಬೇಕೆಂದು ಒತ್ತಾಯಿಸಿದರು.
ಇಂಥ ಕೆಲಸಗಳು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ. ಸಂವಿಧಾನವೇ ಬುಡಮೇಲು ಆಗುವ ಅಪಾಯವಿದೆ. ಬಿಜೆಪಿ ಹೋಗುತ್ತಿರುವ ದಾರಿ ಸರಿಯಲ್ಲ. ಇದು ಆ ಪಕ್ಷಕ್ಕೆ ತಿರುಗುಬಾಣ ಆಗುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.