ಚಿತ್ರದುರ್ಗ:
ಒನಕೆ ಓಬವ್ವನವರ ಹೆಸರಿನಲ್ಲಿ ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮವನ್ನು ಮುಂದಿನ ಆಯವ್ಯಯದಲ್ಲಿ ರೂಪಿಸಿ, ಓಬವ್ವ ಹೆಸರಿನ ನಿಗಮವನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ವೀರವನಿತೆ ಓಬವ್ವ ಜಯಂತಿ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಓಬವ್ವನವರ ಹೆಸರಿನಲ್ಲಿ ಮಹಿಳಾ ಕಾಲೇಜು ಸ್ಥಾಪಿಸಲಾಗುವುದು. ಒನಕೆ ಓಬವ್ವ ಟ್ರಸ್ಟ್ ಹೆಸರಿನಲ್ಲಿ ಸಮುದಾಯಕ್ಕೆ 80 ಎಕರೆ ಜಮೀನನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು. ಒನಕೆ ಓಬವ್ವನ ಜೀವನ ಸಾಧನೆಗಳ ಸಂಶೋಧನೆಗಾಗಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ ರಚಿಸಲಾಗುವುದು. ಸಮುದಾಯಕ್ಕೆ ಉದ್ಯೋಗ, ಭೂ ಒಡೆತನ ಸಮಸ್ಯೆಗಳಿಗೆ ಸೂಕ್ತ ಸಮಯದಲ್ಲಿ ನ್ಯಾಯ ಒದಗಿಸಲಾಗುವುದು ಎಂದರು.
ಶಿಕ್ಷಣ ಮತ್ತು ಉದ್ಯೋಗಕ್ಕೆ ಪ್ರಾಶಸ್ತ್ಯ :
ಕರ್ನಾಟಕದ ಬೆಳವಣಿಗೆಯಲ್ಲಿ ಎಲ್ಲ ಸಮುದಾಯದ ಕೊಡುಗೆ ಇದೆ. ಸಮುದಾಯಗಳ ಶಿಕ್ಷಣ ಮತ್ತು ಉದ್ಯೋಗಕ್ಕೆ ಸರ್ಕಾರ ಒತ್ತು ನೀಡುತ್ತದೆ. ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವಂತೆ 100 ಅಂಬೇಡ್ಕರ್ ಹಾಸ್ಟೆಲ್ ಗಳು, 50 ಕನಕದಾಸ ಹಾಸ್ಟೆಲ್, ಉದ್ಯೋಗ ಸೃಷ್ಟಿಯಲ್ಲಿ ರಾಜ್ಯದ 224 ಕ್ಷೇತ್ರದಲ್ಲಿ ತಲಾ 100 ಯುವಕರಿಗೆ ಸ್ವಯಂಉದ್ಯೋಗ ಯೋಜನೆ ಜಾರಿ ಮಾಡಲಾಗುತ್ತಿದೆ. ದುರ್ಬಲ ವರ್ಗಗಳ ಶಿಕ್ಷಣ, ಉದ್ಯೋಗ ಹಾಗೂ ಸಬಲೀಕರಣ ಮಾಡುವುದು ಸರ್ಕಾರದ ಧ್ಯೇಯವಾಗಿದೆ ಎಂದರು.
ಒನಕೆ ಓಬವ್ವ ಜೀವನಾದರ್ಶಗಳು ಯುವಪೀಳಿಗೆಗೆ ತಿಳಿಯಬೇಕು :
ಒನಕೆ ಓಬವ್ವ ಕತೆಯನ್ನು ಕೇಳಿಸಿಕೊಂಡು ಬೆಳೆದಿದ್ದೇವೆ. ಯಾವುದೇ ಅಧಿಕಾರವಿಲ್ಲದೇ ಸಾಧನೆ ಮಾಡುವುದು ಅಪರೂಪದ ಗುಣ. ತನ್ನ ಸರ್ವಸ್ವವನ್ನು ದೇಶಕ್ಕಾಗಿ ಅರ್ಪಿಸಿದ ಒನಕೆ ಓಬವ್ವನ ತ್ಯಾಗದ ಚರಿತ್ರೆಯನ್ನು ಸುವರ್ಣಾಕ್ಷರದಲ್ಲಿ ಬರೆದಿಡುವಂಥದ್ದು.
ಪತ್ನಿಧರ್ಮವನ್ನು ಅನುಸರಿಸಿದ ಓಬವ್ವ ಕೋಟೆಯನ್ನು ಸುತ್ತುವರಿದ ಶತ್ರುಗಳನ್ನು ಸಂಹರಿಸಿ, ಹಿಮ್ಮೆಟ್ಟಿಸಿದ ದಿಟ್ಟಮಹಿಳೆ. ಅಬಲೆ ಎಂದು ಗುರುತಿಸಲಾಗುತ್ತಿದ್ದ ಮಹಿಳೆರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಅವರೂ ಸಬಲರು ಎಂದು ನಿರೂಪಿಸಿದರು. ಕರ್ತವ್ಯನಿಷ್ಠೆ, ದೇಶಪ್ರೇಮ, ತ್ಯಾಗ ಮನೋಭಾವಗಳು ತಮ್ಮ ಕುಲಸಮುದಾಯದಿಂದ ಬಂದಿದೆ. ಒನಕೆ ಓಬವ್ವನ ತ್ಯಾಗ ಆದರ್ಶಗಳು ಇಂದಿನ ಯುವಪೀಳಿಗೆಗೆ ತಿಳಿಸಬೇಕೆಂಬ ಉದ್ದೇಶದಿಂದ ಒನಕೆ ಓಬವ್ವನ ದಿನಾಚರಣೆಯನ್ನು ಸರ್ಕಾರದ ವತಿಯಿಂದ ಆಚರಿಸಲಾಗುತ್ತಿದೆ ಎಂದರು.
ಅಂಬೇಡ್ಕರ್ ಅವರ ಆದರ್ಶಗಳನ್ನು ಪಾಲಿಸುವವನೇ ನಿಜವಾದ ದೇಶಭಕ್ತ :
ಬುದ್ಧ, ಬಸವ,ಅಂಬೇಡ್ಕರ್, ವಾಲ್ಮೀಕಿಯವರ ವಿಚಾರಧಾರೆಯನ್ನು ನಾನು ನಂಬಿದವನು. ಇವರೆಲ್ಲ ವಿಚಾರಧಾರೆಗಳೇ ಸರ್ಕಾರದ ನಿರ್ಣಯಗಳಿಗೆ ಪ್ರೇರಣೆ. ಸಂವಿಧಾನದಲ್ಲಿ ಸಮಾನ ಅವಕಾಶಗಳ ಬಗ್ಗೆ ಪ್ರಸ್ತಾಪಿಸಲಾಗಿದೆ. ವಿವಿಧ ಜಾತಿಮತಗಳ ನಡುವೆಯೂ ಪ್ರಜಾಪ್ರಭುತ್ವ ಉಳಿಯಲು ಭಾರತದ ಸಂವಿಧಾನವೇ ಕಾರಣ.
ಇದಕ್ಕೆ ಭಾರತ ರತ್ನ ಬಿ.ಆರ್.ಅಂಬೇಡ್ಕರ್ ರವರೇ ಕಾರಣ. ಇವರ ಆದರ್ಶಗಳನ್ನು ಪಾಲಿಸುವವನೇ ನಿಜವಾದ ದೇಶಭಕ್ತ ಎಂದರು. ಈ ಸಮುದಾಯ ಹಲವಾರು ನಾಯಕರನ್ನು ಕೊಟ್ಟಿದೆ. ಈ ಸಮುದಾಯದಲ್ಲಿ ಸಾರ್ಮಥ್ಯಕ್ಕೆ ಕೊರತೆ ಇಲ್ಲ, ಆದರೆ ಅವಕಾಶಗಳ ಕೊರತೆಯಿದೆ. ಸಮಾನ ಅವಕಾಶ ದೊರೆಯಬೇಕಿದೆ. ಜನರ ರಾಜಕಾರಣ ಮಾಡಿದರೆ ಸಮುದಾಯದ ಜನ ಕೈಬಿಡುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಶ್ರೀ ಬಸವ ನಾಗದೇವ ಸ್ವಾಮೀಜಿ, ಜ್ಞಾನ ಪ್ರಕಾಶ್ ಸ್ವಾಮೀಜಿ, ವಿಜಯ ಮಹಾಂತೇಶ ಸ್ವಾಮೀಜಿ, ಬಸವಲಿಂಗ ಮೂರ್ತಿ ಸ್ವಾಮೀಜಿ, ಶಾಸಕರಾದ ನೆಹರು ಒಲೆಕರ್, ತಿಪ್ಪಾರೆಡ್ಡಿ, ಚಂದ್ರಪ್ಪ, ಗೂಳಿಹಟ್ಟಿ ಶೇಖರ್, ಪೂರ್ಣಿಮಾ, ಎನ್. ಮಹೇಶ್, ಚಲವಾದಿ ನಾರಾಯಣ ಸ್ವಾಮಿ, ನವೀನ್, ನಿವೃತ್ತ ಐ.ಎ. ಎಸ್ ಅಧಿಕಾರಿ ಶಿವರಾಮ್, ಮಾಜಿ ಸಚಿವೆ ಮೋಟಮ್ಮ, ಮೊದಲಾದವರು ಉಪಸ್ಥಿತರಿದ್ದರು.