ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ ಆರೋಪ
ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಆರೋಪದಡಿ ಜಾ.ದಳದ ಉಚ್ಛಾಟಿತ ಶಾಸಕರಿಬ್ಬರಿಗೆ ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ನೋಟೀಸ್ ಜಾರಿ ಮಾಡಿದ್ದಾರೆ.
ಜಾ.ದಳ ಕೋಲಾರ ಶಾಸಕ ಶ್ರೀನಿವಾಸ ಗೌಡ ಮತ್ತು ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ಗೆ ನೋಟೀಸ್ ಜಾರಿ ಮಾಡಲಾಗಿದೆ. ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದರೆಂದು ದೂರಿ ಜಾ.ದಳ ಪಕ್ಷ ವಿಧಾನಸಭಾಧ್ಯಕ್ಷರಿಗೆ ದೂರು ನೀಡಿದ್ದರು.
ಪಕ್ಷ ವಿರೋಧಿ ಚಟುವಟಿಕೆ ನಿಯಮದಡಿ ಇಬ್ಬರು ಶಾಸಕರ ಸದಸ್ಯತ್ವ ಅನರ್ಹತೆಗೆ ಜಾ.ದಳ ಶಾಸಕ ವೆಂಕಟ್ರಾವ್ ನಾಡಗೌಡ ದೂರು ನೀಡಿದ್ದರು. ಈ ಹಿನ್ನೆಲೆ ವಿಧಾನಸಭೆ ಕಾರ್ಯದರ್ಶಿ ಉತ್ತರ ಕೇಳಿ ಶಾಸಕರಿಬ್ಬರಿಗೆ ನೋಟೀಸ್ ಜಾರಿ ಮಾಡಿದ್ದಾರೆ.
ನೋಟಿಸ್ ತಲುಪಿದ ನಂತರ ಏಳು ದಿನಗಳಲ್ಲಿ ಉತ್ತರ ನೀಡುವಂತೆ ಸೂಚಿಸಲಾಗಿದೆ. ನಿಗದಿತ ಅವಧಿಯಲ್ಲಿ ಉತ್ತರ ನೀಡದೇ ಇದ್ದರೆ, ಎರಡನೇ ಬಾರಿಗೆ ನೋಟಿಸ್ ಕೊಡಬಹುದು. ಉತ್ತರ ಪಡೆಯಲು ಸಾಕಷ್ಟು ಅವಕಾಶ ನೀಡಲಾಗುತ್ತದೆ. ಆಗಲೂ ಉತ್ತರ ನೀಡದೇ ಇದ್ದರೆ ಕಾನೂನು ಕ್ರಮಕ್ಕೆ ಅವಕಾಶ ಇರುತ್ತದೆ.
ಜೂನ್ನಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಜಾ.ದಳದ ಇಬ್ಬರು ಶಾಸಕರು ಅಡ್ಡ ಮತದಾನ ಮಾಡಿರುವುದಾಗಿ ಜಾ.ದಳ ಪಕ್ಷ ಆರೋಪಿಸಿತ್ತು. ಇದರಿಂದ ಜಾ.ದಳದ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಸೋಲಬೇಕಾಯಿತು. ಅಡ್ಡ ಮತದಾನದ ಹಿನ್ನೆಲೆ ಜಾ.ದಳ ಕೋರ್ ಕಮಿಟಿ ಇಬ್ಬರು ಬಂಡಾಯ ಶಾಸಕರನ್ನು ಪಕ್ಷದಿಂದ ಉಚ್ಛಾಟನೆ ಮಾಡಿತ್ತು