ವಿಧಾನಸೌಧಕ್ಕೆ ಬೀಗ ಆರೋಪದಲ್ಲಿ ಹುರುಳಿಲ್ಲ: ಸಿಎಂ

ವಿಜಯಪುರ: ವಿಧಾನಸೌಧಕ್ಕೆ ಬೀಗ ಹಾಕಿ ಪ್ರಚಾರಕ್ಕೆ ಬಂದ ಸಚಿವರು ಎಂದು ಕಾಂಗ್ರೆಸ್ ಆರೋಪದಲ್ಲಿ ಹುರುಳಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.

ಸೋಮವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ವಾರದಲ್ಲಿ ಎರಡು ಮೂರು ದಿನ ನಮ್ಮ ಸಚಿವರು ವಿಧಾನಸೌಧಕ್ಕೆ ಭೇಟಿ ನೀಡುತ್ತಿದ್ದಾರೆ. ಯಾವುದೇ ಸರ್ಕಾರಿ ಕೆಲಸಗಳು ನಿಂತಿಲ್ಲ ಎಂದರು.

ಈಗ ಆರೋಪ ಮಾಡುವವರು ಈ ಹಿಂದೆ ಅವರ ಅಧಿಕಾರಾವಧಿಯಲ್ಲಿ ನಡೆದ ನಂಜನಗೂಡು, ಗುಂಡ್ಲುಪೇಟೆ ಉಪ ಚುನಾವಣೆಗಳಲ್ಲಿ ಏನೆಲ್ಲಾ ಮಾಡಿದ್ದಾರೆ ಎಂಬುದು ನಮಗೂ ಗೊತ್ತಿದೆ ಎಂದು ತಿರುಗೇಟು ನೀಡಿದ ಮುಖ್ಯಮಂತ್ರಿ ಬೊಮ್ಮಾಯಿ, ಎರಡೂ ಕ್ಷೇತ್ರಗಳಲ್ಲಿ ಇಡೀ ಮಂತ್ರಿಮಂಡಲವೇ ಬೀಡುಬಿಟ್ಟಿದ್ದನ್ನು ಜನರು ಮರೆತಿಲ್ಲ ಎಂದು ಹೇಳಿದ್ದಾರೆ.

ನಾನು ಮಂತ್ರಿಗಳಿಗೆ ಏನು ಸೂಚನೆ ಕೊಡಬೇಕೋ ಕೊಟ್ಟಿದೇನೆ, ಯಾವುದೇ ಕೆಲಸಗಳು ನಿಂತಿಲ್ಲ. ಜಾ.ದಳ ಪರವಾಗಿ ಬಿಜೆಪಿ ಹಣ ಹಂಚಿಕೆ ಮಾಡುತ್ತಿದೆ ಎಂದು ಕಾಂಗ್ರೆಸ್ ಶಾಸಕ ಜಮೀರ್ ಹೇಳಿಕೆ ವಿಪರೀತ ಕಲ್ಪನೆಯಷ್ಟೇ, ಅದಕ್ಕೆ ಯಾವುದೇ ಆಧಾರವಿಲ್ಲ, ಅರ್ಥವೂ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುಟುಕಿದರು

× Chat with us