ಮೈತ್ರಿ ಇಲ್ಲ, ಸ್ಥಳೀಯ ಹೊಂದಾಣಿಕೆ: ಎಚ್‌ಡಿಕೆ

2023ರ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧೆ

ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ ವಿಧಾನಪರಿಷತ್ತಿಗೆ ಡಿ. 10 ರಂದು ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಆದರೆ, ಪಕ್ಷದ ಬಲವರ್ಧನೆಗೆ ಅನುಕೂಲವಾಗುವ ರೀತಿಯಲ್ಲಿ ಯಾವ ಅಭ್ಯರ್ಥಿಗೆ ಬೆಂಬಲ ನೀಡಬೇಕು ಎಂಬುದನ್ನು ನಿರ್ಧರಿಸುವಂತೆ ಪಕ್ಷದ ಸ್ಥಳೀಯ ಮುಖಂಡರಿಗೆ ಸೂಚನೆ ನೀಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜಾ.ದಳದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಮಾಧ್ಯಮಗಳ ಮೂಲಕ ಮನವಿ ಮಾಡಿದ್ದರು. ದೂರವಾಣಿ ಕರೆಮಾಡಿ ನನ್ನೊಂದಿಗೆ ಚರ್ಚಿಸಿದ್ದರು. ಆದರೆ, ಯಾವುದೇ ಪಕ್ಷದ ಜತೆಗೆ ಚುನಾವಣಾ ಮೈತ್ರಿ ಮಾಡಿಕೊಳ್ಳದೇ ಇರಲು ನಿರ್ಧರಿಸಲಾಗಿದೆ ಎಂದರು.

ಪರಿಷತ್ ಚುನಾವಣೆ ಅಂತಿಮ ಘಟ್ಟ ತಲುಪಿದೆ, ಹೀಗಾಗಿ ನಮ್ಮ ನಿಲುವನ್ನು ಪ್ರಕಟಿಸುತ್ತಿರುವುದಾಗಿ ಹೇಳಿದರು. ಜಾ.ದಳ – ಬಿಜೆಪಿ ಮೈತ್ರಿ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಎಂದು ಮಾಧ್ಯಮಗಳಲ್ಲಿ ಸುದ್ಧಿಗಳು ಹರಿದಾಡುತ್ತಿತ್ತು. ಜಾ.ದಳ ಬಿಜೆಪಿಯ ‘ಬಿ’ ಟೀಮ್ ಎಂದು ಕಾಂಗ್ರೆಸ್‌ನವರು ರಾಜಕೀಯ ಮಂತ್ರ ಜಪಿಸುತ್ತಿದ್ದಾರೆ, ಜೊತೆಗೆ ಜಾ.ದಳ ಕುಟುಂಬದ ಪಕ್ಷ ಎಂಬ ಆರೋಪವು ಕೇಳಿ ಬರುತ್ತಿದೆ. ಹೀಗಾಗಿ ನಾವು ಈ ನಿರ್ಧಾರಕ್ಕೆ ಬಂದುದಾಗಿ ಹೇಳಿದರು.

ನಾನು ಯಾವತ್ತೂ ಮೈತ್ರಿ ಕುರಿತು ಚರ್ಚಿಸಿಲ್ಲ. ಕೆಲವರು ನಮ್ಮ ಹೇಳಿಕೆಗಳನ್ನು ತಮಗೆ ಅನುಕೂಲವಾಗುವ ರೀತಿಯಲ್ಲಿ ಅರ್ಥೈಸಿಕೊಂಡು, ವ್ಯಾಖ್ಯಾನಿಸಿದರು. ಚುನಾವಣೆಯ ಆರಂಭದಲ್ಲೇ ಇಂತಹ ವಿಚಾರಗಳಲ್ಲಿ ನಿರ್ಧಾರಕ್ಕೆ ಬರಲಾಗದು. ಕೊನೆಯ ಹಂತದಲ್ಲೇ ತೀರ್ಮಾನಿಸಬೇಕು. ಅದಕ್ಕಾಗಿ ಈಗ ನಿಲುವನ್ನು ಸ್ಪಷ್ಟಪಡಿಸುತ್ತಿದ್ದೇನೆ ಎಂದು ತಿಳಿಸಿದರು.

2023 ರ ವಿಧಾನಸಭಾ ಚುನಾವಣೆಯೇ ಜಾ.ದಳದ ಗುರಿ 123 ಸ್ಥಾನಗಳನ್ನು ಗಳಿಸುವುದು. ಇದಕ್ಕೆ ಅನುಕೂಲವಾಗುವ ರೀತಿಯಲ್ಲಿ ಈ ಚುನಾವಣೆಯಲ್ಲಿ ನಿರ್ಧಾರ ಕೈಗೊಳ್ಳುವಂತೆ ಸ್ಥಳೀಯ ಮುಖಂಡರಿಗೆ ಸೂಚಿಸಲಾಗಿದೆ.  2023ರ ಚುನಾವಣೆಯಲ್ಲಿ ಜಾ.ದಳಕ್ಕೆ ಹಿನ್ನಡೆಯಾಗುವ ರೀತಿಯಲ್ಲಿ ವಿಧಾನ ಪರಿಷತ್ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಾರದು ಎಂಬ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

ನಾವು ಸ್ಪರ್ಧಿಸಿರುವ ಆರು ಕ್ಷೇತ್ರದಲ್ಲಿ ಮೂರು ಪಕ್ಷಗಳ ನಡುವೆ ತ್ರಿಕೋನ ಹೋರಾಟ ನಡೆಯಲಿದೆ, ನಾವು ಯಾವುದೇ ಪಕ್ಷದ ಜೊತೆ ಹೊಂದಾಣಿಕೆಯಲ್ಲ, ಆರು ಕ್ಷೇತ್ರಗಳಲ್ಲಿ ರಾಷ್ಟ್ರೀಯ ಪಕ್ಷಗಳ ವಿರುದ್ಧ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.

× Chat with us