ರಾಜ್ಯ

ಬಂಡೀಪುರದಲ್ಲಿ ರಾತ್ರಿ ಸಂಚಾರ ನಿರ್ಬಂಧ ಮುಂದುವರಿಕೆ: ಸಚಿವ ಈಶ್ವರ ಖಂಡ್ರೆ

ಮೈಸೂರು : ಬಂಡೀಪುರ ಅರಣ್ಯ ಪ್ರದೇಶ ವನ್ಯ ಜೀವಿಗಳ ಆವಾಸಸ್ಥಾನವಾಗಿದ್ದು, ಇಲ್ಲಿ ಕಾಡು ಪ್ರಾಣಿಗಳ ಸಂಚಾರಕ್ಕೆ ತೊಂದರೆ ಆಗದ ರೀತಿಯಲ್ಲಿ ಕ್ರಮ ವಹಿಸಲಾಗುವುದು ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.

ಮೈಸೂರಿನ ಅರಣ್ಯ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಡೀಪುರ ಅರಣ್ಯದೊಳಗೆ ಇರುವ ರಸ್ತೆ ಮಾರ್ಗವಾಗಿ ಕೇರಳಕ್ಕೆ ಹೋಗಲು ಬೆಳಗ್ಗೆ 6ರಿಂದ ರಾತ್ರಿ 9ರವರೆಗೆ ಅವಕಾಶ ನೀಡಲಾಗಿದೆ. ರಾತ್ರಿ ಸಂಚಾರಕ್ಕೆ ಅವಕಾಶ ನಿರ್ಬಂಧಿಸಲಾಗಿದೆ. ಇದು ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಆದಾಗ್ಯೂ ಕೆಲವು ವಿಶೇಷ ಸಂದರ್ಭ ಅಂದರೆ ವೈದ್ಯಕೀಯ ತುರ್ತು ಇತ್ಯಾದಿ ಸಂದರ್ಭದಲ್ಲಿ ಪರಿಶೀಲಿಸಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ ಎಂದರು.

ಬಂಡಿಪುರದಲ್ಲಿ ರೈಲು ಮಾರ್ಗ ಅಥವಾ ಮೇಲ್ಸೇತುವೆ ನಿರ್ಮಾಣ ಕುರಿತಂತೆ ಸಮೀಕ್ಷೆ ಆಗಿಲ್ಲ ಎಂದು ತಿಳಿಸಿದರು.

ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಕ್ರಮ: ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಕ್ರಮ ಅತ್ಯಗತ್ಯವಾಗಿದೆ. ಪ್ರತಿಯೊಂದು ಜೀವವೂ ಅಮೂಲ್ಯವಾಗಿದೆ. ಹೀಗಾಗಿ ಬೆಳೆ ಹಾನಿ ಆಗದಂತೆ ಮತ್ತು ಜೀವ ಹಾನಿ ಆಗದ ರೀತಿಯಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ. ಇದರ ಜೊತೆಗೆ ಅರಣ್ಯ ವಿಸ್ತರಣೆಗೆ ಆದ್ಯತೆ ನೀಡಲಾಗುವುದು ಎಂದರು.

7500 ಎಕರೆ ಅರಣ್ಯ ಭೂಮಿ ಗುತ್ತಿಗೆ: ಸ್ವಾತಂತ್ರ್ಯ ಪೂರ್ವದಲ್ಲಿ 7500 ಎಕರೆ ಅರಣ್ಯ ಭೂಮಿಯನ್ನು ಬ್ರಿಟಿಷರು ಕೆಲವು ಎಸ್ಟೇಟ್ ಕಂಪನಿಗಳಿಗೆ ದೀರ್ಘ ಕಾಲದ ಅವಧಿಗೆ ಗುತ್ತಿಗೆ ನೀಡಿರುತ್ತಾರೆ. ಇದರಿಂದಾಗಿ ಪ್ರಾಣಿಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಹೀಗಾಗಿ ಈ ಭೂಮಿಯನ್ನು ಮರಳಿ ಅರಣ್ಯ ಇಲಾಖೆಗೆ ಪಡೆದು ಅರಣ್ಯ ವಿಸ್ತರಿಸಲು ಕಾನೂನು ಹೋರಾಟ ಮುಂದುವರಿಸಲಾಗುವುದು ಎಂದರು.

ಎಸ್ಟೇಟ್ ಗಳಿಗೆ ನೀಡಲಾಗಿರುವ ಅರಣ್ಯ ಭೂಮಿ ಗುತ್ತಿಗೆದಾರರಿಂದ ಬರಬೇಕಾದ ಬಾಕಿ ಮತ್ತು ಅವಧಿ ಮುಗಿದ ಅರಣ್ಯ ಭೂಮಿ ಮರುಪಡೆಯಲು ವಿಶೇಷ ತಂಡ ಮತ್ತು ಕಾನೂನು ಕೋಶವನ್ನು ರಚಿಸಲಾಗಿದೆ. ಈ ವಿಶೇಷ ತಂಡ ಗುತ್ತಿಗೆ ನೀಡಿದ ಅರಣ್ಯ ಭೂಮಿಯನ್ನು ಮರು ಪಡೆಯಲು ಕಾರ್ಯೋನ್ಮುಖವಾಗುತ್ತದೆ ಎಂದರು.

ಕೆಲವು ವರ್ಷಗಳ ಹಿಂದೆ ಹಾಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿರುವ ಬಿ.ಪಿ. ರವಿ ಅವರು, ಚಾಮರಾಜನಗರದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾಗಿದ್ದಾಗ ಕೆಲವು ಕಂಪನಿಗಳು ಗುತ್ತಿಗೆ ಹಣವನ್ನು ಅರಣ್ಯ ಇಲಾಖೆಗೆ ಪಾವತಿಸಿಲ್ಲ ಎಂದು ನೋಟಿಸ್ ನೀಡಿದ್ದರು, ಈಗ ಎಸ್ಟೇಟ್ ನವರು ನ್ಯಾಯಾಲಯಕ್ಕೆ ಹೋಗಿದ್ದಾರೆ. ನಾವು ಕಾನೂನು ಹೋರಾಟ ಮಾಡಲು ವಿಶೇಷ ತಂಡ ರಚಿಸಿದ್ದೇವೆ ಎಂದರು.

ಆನೆ ದಾಳಿ ಸಾವು ದುರ್ದೈವ: ಕರ್ನಾಟಕದ ಅರಣ್ಯ ಇಲಾಖೆ ಸೆರೆಹಿಡಿದು ರೇಡಿಯೋ ಕಾಲರ್ ಅಳವಡಿಸಿದ್ದ ಆನೆಯೊಂದು ಕೇರಳದಲ್ಲಿ ದಾಳಿ ಮಾಡಿದ್ದು, ವ್ಯಕ್ತಿಯೊಬ್ಬರು ಸಾವಿಗೀಡಾಗಿರುವುದು ಅತ್ಯಂತ ದುಃಖ ಮತ್ತು ದುರ್ದೈವದ ಸಂಗತಿಯಾಗಿದೆ. ಈ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು.

ಆದರೆ ಯಾವುದೇ ವನ್ಯ ಜೀವಿಯನ್ನು ಒಂದು ರಾಜ್ಯಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಆನೆಗಳು ಶತ ಶತಮಾನಗಳಿಂದ ತಮಿಳುನಾಡು, ಕೇರಳ, ಕರ್ನಾಟಕ, ಮಹಾರಾಷ್ಟ್ರದಲ್ಲಿ ಮುಕ್ತವಾಗಿ ಸಂಚರಿಸುತ್ತಿವೆ. ಆನೆ ಕಾರಿಡಾರ್ ಎಂದೇ ಇದಕ್ಕೆ ಕರೆಯಲಾಗುತ್ತದೆ. ಇದು ಕರ್ನಾಟಕದ ಆನೆ, ತಮಿಳುನಾಡು ಆನೆ, ಕೇರಳ ಆನೆ ಎಂದು ಬ್ರಾಂಡ್ ಮಾಡುವುದು ಸರಿಯಾದ ಕ್ರಮವಲ್ಲ ಎಂದರು.

ಪತ್ರಕರ್ತರು ಕರ್ನಾಟಕದ ಗಾಯಗೊಂಡ ಹುಲಿಯನ್ನು ಕೇರಳದ ಗಡಿಯಲ್ಲಿ ಬಿಡಲಾಗಿದೆ ಎಂಬ ಆರೋಪ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಚಿರತೆ, ಹುಲಿ ಇತ್ಯಾದಿ ವನ್ಯ ಮೃಗಗಳು ಕೂಡ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಹೋಗುವುದು ಸಹಜ. ವನ್ಯಜೀವಿಗಳಿಗೆ ಭಾಷೆ, ಗಡಿಯ ಮಿತಿ ಇರುವುದಿಲ್ಲ. ವನ್ಯ ಜೀವಿಗಳಿಗೆ ಯಾವುದೇ ಗಡಿಯ ಮಿತಿ ಇರುವುದಿಲ್ಲ. ನಮ್ಮ ಇಲಾಖೆ ಮತ್ತೊಂದು ರಾಜ್ಯದಲ್ಲಿ ವನ್ಯಜೀವಿ ಬಿಟ್ಟಿದೆ ಎಂಬುದು ನಿರಾಧಾರ ಆರೋಪ ಎಂದರು.

ಕಾಡ್ಗಿಚ್ಚಿನ ಬಗ್ಗೆ ಎಚ್ಚರಿಕೆ: ಬರುವ ಬೇಸಿಗೆಯಲ್ಲಿ ಕಾಡ್ಗಿಚ್ಚಿನಿಂದ ಅರಣ್ಯಕ್ಕೆ ಹಾನಿ ಆಗದ ರೀತಿಯಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಫೈರ್ ಲೈನ್ ಅಂದರೆ ಬೆಂಕಿ ರೇಖೆಯನ್ನು ನಿರ್ಮಿಸಲಾಗಿದೆ. ಅಗ್ನಿ ಶಾಮಕ ದಳದೊಂದಿಗೆ ಕೂಡ ಈ ಬಗ್ಗೆ ಮಾತುಕತೆ ನಡೆಸಲಾಗಿದೆ. ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಜ್ಯದಲ್ಲಿ ಸುಮಾರು 2 ಲಕ್ಷ ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ ಎಂದು ಅಧಿಕೃತ ವರದಿ ಇದೆ. ಆದರೆ, ಇನ್ನೂ ಹೆಚ್ಚಿನ ಒತ್ತುವರಿ ಆಗಿರುವ ಬಗ್ಗೆ ದೂರುಗಳಿದ್ದು, ಒತ್ತುವರಿಯ ನಿಖರ ಮಾಹಿತಿ ನೀಡುವಂತೆ ಇಲಾಖೆಯ ಉನ್ನತಾಧಿಕಾರಿಗಳಿಗೆ ಸೂಚಿಸಿದ್ದೇನೆ. ವರದಿ ಬಂದ ಬಳಿಕ ಸ್ವಾರ್ಥಕ್ಕಾಗಿ ಹತ್ತಾರು ಎಕರೆ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ವಹಿಸಲಾಗುವುದು. ಒತ್ತುವರಿ ತೆರವು ಮಾಡಲಾಗುವುದು ಎಂದರು.

andolanait

Recent Posts

ಮೈಸೂರು | ಬೆಳ್ಳಂಬೆಳಗ್ಗೆ ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಹತ್ಯೆ!

ಮೈಸೂರು : ಜಿಲ್ಲೆಯ ಟಿ.ನರಸೀಪುರ ಪಟ್ಟಣದಲ್ಲಿ ಬೆಳ್ಳಂಬೆಳಿಗ್ಗೆಯೇ ಮಚ್ಚು ಲಾಂಗುಗಳಿಂದ ದುಷ್ಕರ್ಮಿಗಳು ಹಲ್ಲೆ ನಡೆಸಿ ವ್ಯಕ್ತಿಯೋರ್ವನನ್ನು ಹತ್ಯೆ ಮಾಡಿರುವ ಘಟನೆ…

13 mins ago

ಕೊಲ್ಕತ್ತಾದಲ್ಲಿ ಮೆಸ್ಸಿ ಮೇನಿಯಾ : ಫುಟ್‌ಬಾಲ್‌ ದಂತಕಥೆಗೆ ಭರ್ಜರಿ ಸ್ವಾಗತ

ಕೋಲ್ಕತ್ತಾ : ಇಲ್ಲಿನ ವಿಮಾನ ನಿಲ್ದಾಣದಲ್ಲಿ ಫುಟ್ಬಾಲ್ ಮಾಂತ್ರಿಕ ಲಿಯೋನೆಲ್ ಮೆಸ್ಸಿ ಅವರನ್ನು ನೋಡಲು ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಸೇರಿದ್ದರು.…

2 hours ago

ಟ್ರಂಪ್‌ ಸುಂಕ ಹೇರಿದ್ದ ರದ್ದಿಗೆ ಅಮೆರಿಕ ಸಂಸತ್ತು ನಿಲುವಳಿ

ನ್ಯೂಯಾರ್ಕ್‌ : ಭಾರತದ ಮೇಲೆ ಡೊನಾಲ್ಡ್‌ ಟ್ರಂಪ್‌ ಹೇರಿರುವ ಶೇ.50 ಪ್ರತಿಸುಂಕವನ್ನು ಅಂತ್ಯಗೊಳಿಸಲು ಅಮೆರಿಕದ ಮೂವರು ಸಂಸದರು ನಿಲುವಳಿ ಮಂಡಿಸಿದ್ದಾರೆ.…

2 hours ago

ಘೋರ ದುರಂತ | ಕರ್ತವ್ಯ ನಿರತ KSRTC ಮೇಲೆ ಹರಿದ ಲಾರಿ ; ಸ್ಥಳದಲ್ಲೇ ಸಾವು

ಹಾಸನ : ಕರ್ತವ್ಯದ ವೇಳೆ ಲಾರಿ ಡಿಕ್ಕಿಯಾಗಿ KSRTC ಬಸ್‌ನ ಚೆಕ್ಕಿಂಗ್ ಇನ್ಸ್ಪೆಕ್ಟರ್ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಆಲೂರು…

3 hours ago

ಹವಾಮಾನ ಏರುಪೇರಿನಿಂದಾಗಿ ಕಾಳುಮೆಣಸಿಗೂ ಕಂಟಕ

ಶೇ.30ರಷ್ಟು ಉತ್ಪಾದನೆ ಕುಸಿತ ; ಉತ್ತರ ಕೊಡಗಿನ ಭಾಗದಲ್ಲಿ ಹೆಚ್ಚಿನ ಬೆಳೆ ನಷ್ಟ ನವೀನ್‌ ಡಿಸೋಜ ಮಡಿಕೇರಿ: ಈ ಬಾರಿಯ…

5 hours ago

ಅವಳಿ ತಾಲ್ಲೂಕುಗಳಲ್ಲಿ ಭತ್ತದ ಕಟಾವು ಜೋರು

ಭೇರ್ಯ ಮಹೇಶ್‌ ಕೆ.ಆರ್.ನಗರ : ಭತ್ತದ ನಾಡು ಎಂದೇ ಪ್ರಖ್ಯಾತಿ ಹೊಂದಿರುವ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕುಗಳಲ್ಲಿ ಇದೀಗ ಭತ್ತದ…

5 hours ago