ಬೆಂಗಳೂರು : ದೇಶದ ಅಧಿಕೃತ ವಾಹಿನಿ ದೂರದರ್ಶನ ಚಂದನ ವಾಹಿನಿಯಿಂದ ನಾಡು – ನುಡಿ – ಸಂಸ್ಕೃತಿ, ಬಾಂಧವ್ಯಗಳನ್ನು ಬೆಸೆಯುವ ವಿನೂತನ 4 ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು, ಶೀಘ್ರದಲ್ಲಿ ಇವು ಕಿರುತೆರೆಯ ಮೇಲೆ ಮೂಡಿಬರಲಿವೆ ಎಂದು ದೂರದರ್ಶನ ದಕ್ಷಿಣ ವಲಯದ ಉಪ ಮಹಾನಿರ್ದೇಶಕರಾದ ಭಾಗ್ಯವಾನ್ ತಿಳಿಸಿದ್ದಾರೆ.
ಚಂದನ ವಾಹಿನಿಯ ಸ್ಟುಡಿಯೋದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಬದುಕ ಬಂಡಿ – ಬೀದಿ ಬದಿಯ ಕಥೆಗಳು “,” ಸ್ಮಾರ್ಟ್ ಸೊಸೆಯಂದಿರು “, ” ಭಾವ ನವನವೀನ” ಹಾಗೂ ” ಸ್ಟಾಂಡ್ ಅಪ್ ಕಾಮಿಡಿ – ರಿಯಾಲಿಟಿ ಶೋ ” ಕಾರ್ಯಕ್ರಮಗಳು ಶೀಘ್ರದಲ್ಲೇ ಪ್ರಸಾರವಾಗಲಿವೆ. ಪ್ರತಿಯೊಂದು ಕಾರ್ಯಕ್ರಮವನ್ನು ವ್ಯಾಪಕ ಸಂಶೋಧನೆ, ಹಿನ್ನೆಲೆ ಮತ್ತು ಪ್ರಚಲಿತ ವಿದ್ಯಮಾನಗಳಿಗೆ ಪೂರಕವಾಗಿ ಸಿದ್ಧಪಡಿಸಲಾಗುತ್ತಿದೆ ಎಂದರು.
ರಸ್ತೆ ಬದಿಯ ಬದುಕಿನ ಕಥೆಗಳನ್ನು ಅನಾವರಣಗೊಳಿಸುವ ” ಬದುಕ ಬಂಡಿ “, ಮಾನವೀಯ ಸಂವೇದನೆಗಳನ್ನು ಆಧರಿಸಿರುತ್ತದೆ. ಆಯಾ ಪ್ರದೇಶದ ವೈವಿಧ್ಯತೆ, ಸಂಸ್ಕೃತಿ, ಇತಿಹಾಸ, ಜನಜೀವನವನ್ನು ಇದು ಬಿಂಬಿಸಲಿದೆ. ಈ ಕಾರ್ಯಕ್ರಮಕ್ಕೆ ಆಳವಾದ ಅಧ್ಯಯನದ ಮೂಲಕ ಸಾಮಾಜಿಕ ಇತಿಹಾಸಕಾರ ಧರ್ಮೇಂದ್ರ ಕುಮಾರ್ ನಿರೂಪಣೆ ಮಾಡಲಿದ್ದಾರೆ ಎಂದರು.
ಆಧುನಿಕ ಜೀವನದಲ್ಲಿ ಕಳೆದುಹೋಗುತ್ತಿರುವ ಬಾಂಧ್ಯವಗಳು ಹಾಗೂ ನಶಿಸುತ್ತಿರುವ ಕೂಡು ಕುಟುಂಬಗಳ ಸಂಸ್ಕೃತಿಯನ್ನು ಗಮನದಲ್ಲಿಟ್ಟುಕೊಂಡು “ಸ್ಮಾರ್ಟ್ ಸೊಸೆಯಂದಿರು” ಕಾರ್ಯಕ್ರಮ ವಿನೂತನ ರೀತಿಯಲ್ಲಿ ರೂಪುಗೊಂಡಿದೆ. ಜೊತೆಗೆ, ಹಾಸ್ಯ, ವಿನೋದ ಆಟಗಳ ಜೊತೆಗೆ ಖ್ಯಾತ ಮನಶಾಸ್ತ್ರಜ್ಞ ಡಾ|| ಸಿ. ಆರ್. ಚಂದ್ರಶೇಖರ್ ಅವರು ಪ್ರತಿಯೊಂದು ಕಾರ್ಯಕ್ರಮಕ್ಕೆ ಕೌಟಿಂಬಿಕ ಸಂಬಂಧಗಳನ್ನು ಬಲಪಡಿಸುವ ಕುರಿತು ಕಿವಿಮಾತು ಹೇಳುವ ಚಿತ್ರಣವನ್ನು ಇದು ಒಳಗೊಂಡಿದೆ ಎಂದರು.
ಸಹಸ್ರಾರು ವರ್ಷಗಳ ಇತಿಹಾಸವಿರುವ ಕನ್ನಡ ಸಾಹಿತ್ಯದ ಒಳನೋಟ, ಅರ್ಥ ಮತ್ತು ಕಸುವನ್ನು ಒಳಗೊಂಡ ” ಭಾವ ನವ ನವೀನ ” ಕಾರ್ಯಕ್ರಮ ರೂಪಿಸಲಾಗಿದೆ. ಕನ್ನಡ ಸಾರಸ್ವತ ಲೋಕದ ವಿವಿಧ ಭಾವಗೀತೆಗಳಿಗೆ ಸಂಗೀತ ಸಂಯೋಜನೆ ಮಾಡಿಸಿ, ಪ್ರಸ್ತುತ ಪಡಿಸಲಾಗುವುದು. ಆರಂಭದಲ್ಲಿ, ಸತ್ಯೇಶ್ ಎನ್. ಬೆಳ್ಳೂರ್ ಅವರ ” ಒಂದು ಸಾಲಿನ ಕವಿತೆ”ಗಳಿಗೆ ಖ್ಯಾತ ಸಂಯೋಜಕ ಮ್ಯಾಂಡೊಲಿನ್ ಪ್ರಸಾದ್ ಸಂಗೀತ ನೀಡಿದ್ದು, ಗಾಯಕ – ಸಂಯೋಜಕದ್ವಯರಾದ ಪ್ರಾಣೇಶ್ ಬಿ. ವಿ. ಹಾಗೂ ಪ್ರದೀಪ್ ಬಿ. ವಿ. ಕಾರ್ಯಕ್ರಮವನ್ನು ನಿರೂಪಣೆ ಮಾಡಲಿದ್ದಾರೆ.
“ಆರೋಗ್ಯಕರ ಹಾಸ್ಯ ವಲಯದಲ್ಲಿ, ಆರೋಗ್ಯಕರ ಸ್ಪರ್ಧೆ” ಪರಿಕಲ್ಪನೆಯಡಿ, ” ಸ್ಟಾಂಡ್ ಅಪ್ ಕಾಮಿಡಿ ” ಎಂಬ ನವೀನ ಕಾರ್ಯಕ್ರಮವನ್ನು ರಚಿಸಲಾಗಿದೆ. ಬೆಂಗಳೂರು ದೂರದರ್ಶನದಲ್ಲೇ ನಡೆಯುವ ಆಯ್ಕೆ ಪ್ರಕ್ರಿಯೆಯಲ್ಲಿ 20 ಹಾಸ್ಯ ಪಟುಗಳನ್ನು ಹೆಕ್ಕಿ ತೆಗೆಯಲಾಗುವುದು. 32 ಸಂಚಿಕೆಗಳ ಈ ರಿಯಾಲಿಟಿ ಶೋಗೆ ಪ್ರಸಿದ್ಧ ಹಾಸ್ಯ ಕಲಾವಿದರಾದ ಸುಧಾ ಬರಗೂರು ಹಾಗೂ ಗಂಗಾವತಿ ಪ್ರಾಣೇಶ್ ತೀರ್ಪುಗಾರರಾಗಿರಲಿದ್ದಾರೆ. ದೂರದರ್ಶನದಲ್ಲೇ ಮೊದಲ ಬಾರಿಗೆ ಹಾಸ್ಯ ರಿಯಾಲಿಟಿ ಶೋ ಪ್ರಸಾರಗೊಳಲಿದ್ದು, ವಿಜೇತರಿಗೆ ಉತ್ತಮ ಮೊತ್ತದ ನಗದು ಬಹುಮಾನವನ್ನು ನೀಡಲಾಗುವುದು ಎಂದು ಶ್ರೀ ಭಾಗ್ಯವಾನ್ ತಿಳಿಸಿದರು.
ದೂರದರ್ಶನ ಕೇಂದ್ರದ ಅಭಿಯಂತರ ಮಹಾನಿರ್ದೇಶಕರಾದ ಎ. ಹನುಮಂತ್ ಮಾತನಾಡಿ, ಈ ಎಲ್ಲಾ ಕಾರ್ಯಕ್ರಮಗಳಿಗೆ ಅಗತ್ಯವಿರುವ ತಾಂತ್ರಿಕ ಸಹಕಾರ, ನೆರವು ಹಾಗೂ ಬೆಂಬಲ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ದೂರದರ್ಶನ ಚಂದನ ವಾಹಿನಿಯ ಸುದ್ದಿ ವಿಭಾಗದ ನಿರ್ದೇಶಕರಾದ ಕೇಶವ ಮೂರ್ತಿ ಬಿ. ಎ., ಹಿರಿಯ ಕಾರ್ಯಕ್ರಮ ನಿರ್ವಾಹಕಿ ಎಚ್. ಎನ್. ಆರತಿ, ಕಾರ್ಯಕ್ರಮ ನಿರ್ಮಾಪಕರುಗಳಾದ ಚಂದ್ರ ಭೌಮಿಕ್, ಸುಧಾಕರನ್ ಪ್ರಿಯ, ಎಂ. ಗೋವಿಂದರಾಜು ಹಾಗೂ ಲಕ್ಷ್ಮಿ ಕಾರಂತ್ ಎಂ. ಎಸ್. ಉಪಸ್ಥಿತರಿದ್ದರು.
ಮಂಡ್ಯ: ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.…
ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬೆಳಗಿನ ಜಾವ ದಟ್ಟವಾದ ಮಂಜು ಕವಿದ ವಾತಾವರಣ ಇರಲಿದೆ.…
ಕೊಳ್ಳೇಗಾಲ: ಮೇಯಲು ಬಿಟ್ಟಿದ್ದ ಮೇಕೆಗಳು ಯೂರಿಯಾ ಗೊಬ್ಬರ ತಿಂದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಹಳೆ…
ಚಾಮರಾಜನಗರ: ಪಾದಾಚಾರಿಗಳ ಮೇಲೆ ಏಕಾಏಕಿ ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ 7 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.…
ಮಡಿಕೇರಿ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮ್ಮ ವಸ್ತುಗಳು ಏನೇ ಇದ್ದರೂ ಅಫಿಡವಿಟ್‌ನಲ್ಲಿ ತೋರಿಸಿದ್ದರೆ ಯಾವುದೇ ಸಮಸ್ಯೆ ಆಗಲ್ಲ. ಈ ಹಿಂದೆ…
ಬೆಂಗಳೂರು: ನಟ ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಸಿನಿಮಾ ಟ್ರೈಲರ್ ಅದ್ಧೂರಿಯಾಗಿ ಬಿಡುಗಡೆ ಮಾಡಲಾಗಿದೆ. ವಿಜಯ್ ಕಾರ್ತಿಕೇಯ-ಸುದೀಪ್ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ…